ಕನ್ನಡ ವೀರ ಸೇನಾನಿ ಮ. ರಾಮಮೂರ್ತಿ | Vartha Bharati- ವಾರ್ತಾ ಭಾರತಿ

--

ಇಂದು ಮ. ರಾಮಮೂರ್ತಿಯವರ ಜನ್ಮದಿನ

ಕನ್ನಡ ವೀರ ಸೇನಾನಿ ಮ. ರಾಮಮೂರ್ತಿ

1956, ನವೆಂಬರ್ 1. ಆಗ ತಾನೇ ಕರ್ನಾಟಕ ಏಕೀಕರಣವಾಗಿದ್ದರೂ, ರಾಜ್ಯದ ಹೆಸರು ಕರ್ನಾಟಕವಾಗಿರಲಿಲ್ಲ. ಕನ್ನಡಕ್ಕೆ ಮಾನ್ಯತೆ ದಕ್ಕಿರಲಿಲ್ಲ. ಕನ್ನಡಿಗರಿಗೆ ಉದ್ಯೋಗದ ಅವಕಾಶವಿರಲಿಲ್ಲ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ - ಕನ್ನಡಿಗ ಅನಾಥ ಪ್ರಜ್ಞೆಯಿಂದ ಕಂಗೆಡುವಂತಾಗಿತ್ತು.

 ಅಂತಹ ಸಮಯದಲ್ಲಿಯೇ ಕನ್ನಡಿಗರ ಮನದಲ್ಲಿ ಹುಯ್ದಡುತ್ತಿದ್ದ ನೋವಿಗೆ ಪರಿಹಾರ ರೂಪದಲ್ಲಿ ಅನೇಕ ಕನ್ನಡ ಯುವಕರು ಒಗ್ಗೂಡಿ ಕನ್ನಡದ ಉಳಿವಿಗಾಗಿ ಚಳವಳಿ ಮಾರ್ಗವನ್ನು ಹಿಡಿಯ ಬೇಕಾಯಿತು. ಬೆಂಗಳೂರೇ ಅಲ್ಲದೆ, ರಾಜ್ಯದ ನಾನಾ ಭಾಗಗಳಲ್ಲಿ ಅನೇಕ ಕನ್ನಡ ಸಂಘಟನೆಗಳು ಹುಟ್ಟಿ ಕೊಂಡವು. ಅವೆಲ್ಲಕ್ಕೂ ಕಲಶಪ್ರಾಯವಾಗಿ ಜನ್ಮ ತಾಳಿದ್ದು ಕನ್ನಡ ಸಂಯುಕ್ತ ರಂಗ. ಈ ಸಂಘಟನೆಯ ಮುಖ್ಯ ರೂವಾರಿಗಳು ಅ.ನ.ಕೃ. ಮತ್ತು ಮ. ರಾಮಮೂರ್ತಿ. ಈ ನಾಯಕರ ಜೊತೆ ಜೊತೆಯಲ್ಲಿ ಅನೇಕ ಕನ್ನಡ ಸಾಹಿತಿಗಳ, ಕನ್ನಡಾಭಿಮಾನಿಗಳ ದಂಡು ಸ್ವಯಂ ಸ್ಫೂರ್ತಿಯಿಂದ ಹೋರಾಟದಲ್ಲಿ ಭಾಗವಹಿಸಿತು.

ಪತ್ತೇದಾರಿ ರಾಮಮೂರ್ತಿ ಎಂದೇ ಅಲ್ಲಿಯವರೆಗೆ ಕನ್ನಡಿಗರಿಗೆ ಪರಿಚಿತವಾಗಿದ್ದ ಎಂ. ರಾಮಮೂರ್ತಿ ಕನ್ನಡ ಚಳವಳಿಯ ನಾಯಕತ್ವವನ್ನು ವಹಿಸಿ ಮ. ರಾಮಮೂರ್ತಿಗಳಾದರು. ಅಭಿಮಾನಿ ಕನ್ನಡ ಯುವಕರಿಗೆ ವೀರಸೇನಾನಿ ರಾಮಮೂರ್ತಿಯಾದರು.

1918, ಮಾರ್ಚ್ 11ರಂದು ಜನಿಸಿದ, ಬಾಲ್ಯದಿಂದಲೂ ಧೈರ್ಯ ಸಾಹಸಗಳಿಗೆ ಹೆಸರುವಾಸಿಯಾಗಿದ್ದ ರಾಮಮೂರ್ತಿಯವರ ಬದುಕು ಸದಾ ಹೋರಾಟದ್ದು-ತಾತ್ವಿಕ ದೃಷ್ಟಿಯಿಂದ ಕೂಡಿದ್ದು. ತನಗೆ ಸರಿ ಎನಿಸಿದ್ದನ್ನು ನಿಷ್ಠುರವಾಗಿ ಖಂಡತುಂಡವಾಗಿ ಹೇಳುವ ದಿಟ್ಟತನ, ಮನೋಭಾವ ಅವರದಾಗಿತ್ತು. ಪತ್ರಿಕೋದ್ಯಮದಿಂದ ಜೀವನ ಆರಂಭಿಸಿದ ರಾಮಮೂರ್ತಿಗಳು ಹಲವಾರು ಪತ್ರಿಕೆಗಳನ್ನು ನಡೆಸಿದರು. ಪತ್ರಿಕೋದ್ಯಮದ ನಂತರ ರಾಮಮೂರ್ತಿಗಳು ಹೊರಳಿದ್ದು ಪತ್ತೇದಾರಿ ಸಾಹಿತ್ಯ ರಚನೆಗೆ. ಆ ಕ್ಷೇತ್ರದಲ್ಲಿ ಸಿದ್ಧಹಸ್ತರೆನಿಸಿದ ಅವರು ರಚಿಸಿದ್ದು ಸುಮಾರು 150 ಕಾದಂಬರಿಗಳನ್ನು. ಕಾದಂಬರಿಗಳು ಸಾಮಾನ್ಯ ಜನರನ್ನು ತಲುಪಬೇಕೆಂಬ ಉದ್ದೇಶದಿಂದ ಪುಸ್ತಕಗಳಿಗೆ ಕಡಿಮೆ ಬೆಲೆ ಇಡುತ್ತಿದ್ದರು. ಸುಮಾರು 120-130 ಪುಟಗಳ ಪುಸ್ತಕಕ್ಕೆ ಅವರು ನಿಗದಿಪಡಿಸುತ್ತಿದ್ದುದು 9 ಆಣೆ. ಅಂದರೆ ಈಗಿನ 56 ಪೈಸೆಗಳು ಹೀಗಾಗಿ ಅವರ ಪುಸ್ತಕಗಳು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿತ್ತು.

ಪತ್ರಕರ್ತರಾಗಿ, ಪತ್ತೇದಾರಿ ಕಾದಂಬರಿಕಾರರಾಗಿ ರಾಮಮೂರ್ತಿಯ ವರು ಮುಂದುವರಿದಿದ್ದರೆ ಬಹುಶಃ ಅವರ ಕಾರ್ಯಕ್ಷೇತ್ರ- ಜನಪ್ರಿಯತೆ ಅಷ್ಟಕ್ಕೇ ಸೀಮಿತವಾಗಿರುತ್ತಿತ್ತೇನೋ. ಆದರೆ ಅವರು ಕನ್ನಡ ಚಳವಳಿಗೆ ಧುಮುಕಿ, ಯುವಕರಿಗೆ, ಮಾರ್ಗದರ್ಶಕರಾಗಿ ಸಮರ್ಥ ನಾಯಕತ್ವ ವಹಿಸಿದ್ದು ಚಳವಳಿಗೆ ಲಾಭವಾಯಿತು. ಅವರ ಬಾಳ ಪಥ ಬದಲಾಯಿತು.

  1962ರ ಎಪ್ರಿಲ್ 27ರಂದು ಬೆಂಗಳೂರಿನ ಚಾಮರಾಜಪೇಟೆಯ ರಾಮಸೇವಾ ಮಂಡಳಿಯ ಮುಂದೆ, ಕನ್ನಡ ನಾಡಿನಲ್ಲಿ ಕನ್ನಡ ಕಲಾವಿದರಿಗೆ, ಸಂಗೀತ ವಿದ್ವಾಂಸರಿಗೆ ಸೂಕ್ತ ಪ್ರಾತಿನಿಧ್ಯ ಕೊಡಬೇಕೆಂಬ ಹೋರಾಟದಿಂದ ಆರಂಭವಾದ ಚಳವಳಿ ರಾಜ್ಯದಾದ್ಯಂತ ಹಬ್ಬಿತು.ಕನ್ನಡಿಗರಲ್ಲಿ ಹೋರಾಟದ ಕಿಚ್ಚು ಹಚ್ಚಲು ಕಾರಣವಾಯಿತು. ನಂತರದಲ್ಲಿ ಅನೇಕ ಕನ್ನಡಪರ ಹೋರಾಟಗಳು ನಡೆದು ಕನ್ನಡಿಗರ ಅನೇಕ ಸಮಸ್ಯೆಗಳತ್ತ ಚಿಂತನೆ ನಡೆಸುವಂತಾಯಿತು. ಜಡತೆಯಿಂದ ಮಲಗಿದ್ದ ಕನ್ನಡಿಗ ಎಚ್ಚೆತ್ತು ಜಾಗೃತನಾಗುವಂತಾಯಿತು.

ಕನ್ನಡ ನಾಮಫಲಕಗಳಿಗೆ ಒತ್ತಾಯ, ಕನ್ನಡಿಗರಿಗೆ ಉದ್ಯೋಗ, ಕನ್ನಡ ಚಿತ್ರ ಪ್ರದರ್ಶನಗಳಿಗೆ ಅವಕಾಶ, ಡಬ್ಬಿಂಗ್ ಚಿತ್ರಗಳಿಗೆ ವಿರೋಧ, ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಡಲು ಆಗ್ರಹ -ಹೀಗೆ ಒಂದಲ್ಲ ಹತ್ತಾರು ಸಮಸ್ಯೆಗಳತ್ತ ಸರಕಾರದ ಗಮನ ಸೆಳೆಯಲು ಚಳವಳಿ ನಾಂದಿಯಾಯಿತು.

ಅಂದಿನ ಆ ಬೇಡಿಕೆಗಳಲ್ಲಿ ಕೆಲವಾದರೂ ಇಂದು ಈಡೇರಿದ್ದರೆ ಆ ಯಶಸ್ಸು ಅಂದಿನ ಕನ್ನಡದ ಹೋರಾಟದ ಫಲವೆನ್ನಬಹುದು.

ರಾಮಮೂರ್ತಿಯವರ ಮುಂದಾಳತ್ವದ ಒಂದು ವಿಶೇಷತೆ ಎಂದರೆ ಸಮಸ್ಯೆ ಎಂತಹದ್ದೇ ಇರಲಿ, ಅದಕ್ಕೆ ಧೈರ್ಯವಾಗಿ ಎದೆಯೊಡ್ಡಿ ನಿಲ್ಲುತ್ತಿದ್ದುದು. ಬೆಂಗಳೂರಿನ ಮೈಕೊ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯ, ಅಚ್ಚ ಕನ್ನಡ ಪ್ರದೇಶ ಹಿರಿಯೂರಿನಲ್ಲಿ ವಲಸೆ ಬಂದ ತಮಿಳರು ಊರಿನ ಮಧ್ಯೆ ಡಿಎಂಕೆ ಧ್ವಜವನ್ನು ಹಾರಿಸಿ ಕನ್ನಡಿಗರಿಗೇ ಸವಾಲೆಸೆದ ಸಂದರ್ಭದಲ್ಲಿ ಧೈರ್ಯವಾಗಿ ಅಲ್ಲಿಗೆ ನುಗ್ಗಿ ಆ ಧ್ವಜವನ್ನು ಇಳಿಸಿದ್ದು - ಇವೇ ಮುಂತಾದ ಹಲವು ಸಂದರ್ಭಗಳಲ್ಲಿ ಅವರು ಪ್ರದರ್ಶಿಸಿದ ಕೆಚ್ಚು, ರೊಚ್ಚು ಅವರ ಸಮರ್ಥ ನಾಯಕತ್ವದ ಲಕ್ಷಣವನ್ನು ಎತ್ತಿ ತೋರಿಸುವಂತಹುದು. ಈ ಕಾರಣದಿಂದ ರಾಮಮೂರ್ತಿಗಳು ಕನ್ನಡ ಯುವಕರ ಆರಾಧ್ಯ ನಾಯಕರಾಗಿದ್ದರು.

ಚಳವಳಿಯ ಧ್ಯೇಯೊದ್ದೇಶಗಳನ್ನು ಸಮರ್ಥವಾಗಿ ನಾಡಿನ ಜನತೆಗೆ ತಿಳಿಸಲು ಸೂಕ್ತವಾದ ಮಾಧ್ಯಮದ ಆವಶ್ಯಕತೆಯಿತ್ತು. ಅದನ್ನು ಮನಗಂಡ ಅವರು ಚಳವಳಿಯ ಪ್ರಚಾರಕ್ಕಾಗಿಯೆ ‘ಕನ್ನಡ ಯುವಜನ’ ಪತ್ರಿಕೆಯನ್ನು ಆರಂಭಿಸಿದರು. ಪ್ರತಿ ಸಂಚಿಕೆಯಲ್ಲಿಯೂ ತಮ್ಮ ಹರಿತವಾದ ಲೇಖನಗಳಿಂದ ಚಳವಳಿಯನ್ನು ಜೀವಂತವಾಗಿರಿಸಿದ್ದರು. ‘‘ಕನ್ನಡಿಗರಿಗೆ ಕನ್ನಡವೇ ದೇವರು, ಶರಣಾಗಲು ಬೇರೆ ದೇವರೇ ಇಲ್ಲ’’ ಎಂಬ ಘೋಷ ವಾಕ್ಯವನ್ನು ಪತ್ರಿಕೆಯ ಪ್ರತೀ ಸಂಚಿಕೆಯಲ್ಲಿಯೂ ಪ್ರಮುಖವಾಗಿ ಪ್ರಕಟಿಸುತಿದ್ದರು.

ಸಂಯುಕ್ತರಂಗವು ಏರ್ಪಡಿಸುತ್ತಿದ್ದ ಎಲ್ಲಾ ಭಾಷಣಗಳಲ್ಲಿಯೂ ಮೊದಲಿಗೆ ರಾಮಮೂರ್ತಿಗಳದೇ ಭಾಷಣ. ವೀರಾವೇಶದಿಂದ ಕನ್ನಡದ ಸಮಸ್ಯೆಗಳನ್ನು ಪದರ ಪದರವಾಗಿ ಅವರು ಬಿಡಿಸಿ ಮಾತನಾಡುತ್ತಿದ್ದರೆ ಸಭೆ ತನ್ಮಯವಾಗಿ ಅವರ ಭಾಷಣವನ್ನು ಆಲಿಸುತ್ತಿತ್ತು. ಇಂದು ವೈಭವೋಪೇತವಾಗಿ ರಾಜ್ಯದಾದ್ಯಂತ ಆಚರಿಸುತ್ತಿರುವ ರಾಜ್ಯೋತ್ಸವ ಸಮಾರಂಭಕ್ಕೆ ನಾಂದಿ ಹಾಡಿದ್ದೇ ಸಂಯುಕ್ತರಂಗದಿಂದ. 1963ರ ನವೆಂಬರ್ ಒಂದರಂದು ಆರಂಭವಾದ ರಾಜ್ಯೋತ್ಸವ ಮೆರವಣಿಗೆ ನಾಡಹಬ್ಬ ದಸರಾವನ್ನು ನೆನಪಿಗೆ ತರುವಂತಿತ್ತು.

1964ರಲ್ಲಿ ತಮಿಳು ಚಿತ್ರ ‘ಕಾಂಚಿತ್ತಲೈವನ್’ ಪ್ರದರ್ಶನಗೊಂಡಾಗ ಅದರಲ್ಲಿ ಕನ್ನಡದ ಇತಿಹಾಸಕ್ಕೆ, ಕನ್ನಡಿಗರಿಗೆ ಅವಮಾನ ಉಂಟಾಗುವ ಕೆಲವು ಘಟನೆಗಳನ್ನು ಚಿತ್ರಿಸಿದ್ದು ಕನ್ನಡಿಗರನ್ನು ಕೆರಳಿಸಿತು. ಇದನ್ನು ಉಗ್ರವಾಗಿ ಪ್ರತಿಭಟಿಸಿದ ಕನ್ನಡ ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿ ಚಿತ್ರ ಪ್ರದರ್ಶನಕ್ಕೆ ತಡೆನೀಡುವಂತೆ ಆಗ್ರಹಿಸಿದರು.

ಆ ಸಂದರ್ಭದಲ್ಲಿ ನಡೆದ ಬ್ಯಾನರ್ ಹರಿಯುವಂತಹ ಅಹಿತಕರ ಘಟನೆಗಳಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ ಅನಕೃ ಅವರು ಚಳವಳಿಯಿಂದ ದೂರಸರಿದರು. ಆದರೆ ಬಿಸಿ ರಕ್ತದ ಯುವಕರು ನಡೆಸಿದ ಈ ಘಟನೆಗಳಿಂದ ಬೇಸತ್ತರೂ ರಾಮಮೂರ್ತಿಯವರು ಚಳವಳಿಯಲ್ಲಿ ಮುಂದುವರಿದರು.

ಚಳವಳಿಯನ್ನು ಮುಂದುವರಿಸುವ ಸಾಮರ್ಥ್ಯವನ್ನು ಹೊಂದಿದ್ದ ಅವರು ಉಳಿದ ನಾಯಕರೊಂದಿಗೆ ತಮ್ಮ ಕಾರ್ಯದಲ್ಲಿ ಮಗ್ನರಾದರು. ವಿಶೇಷವಾಗಿ ಕಾರ್ಖಾನೆಗಳಲ್ಲಿದ್ದ ಕನ್ನಡ ಕಾರ್ಮಿಕರನ್ನು ಜಾಗೃತಗೊಳಿಸುತ್ತಿದ್ದ ಅವರು ಕನ್ನಡ ಕಾರ್ಮಿಕ ನಾಯಕರಾಗಿದ್ದರು. ಇವರ ಹೋರಾಟದ ಫಲವಾಗಿ ಕಾರ್ಖಾನೆಗಳಲ್ಲಿ ಕನ್ನಡದ ಪ್ರಭಾವ ಜಾಸ್ತಿಯಾಯಿತು. ಕನ್ನಡ ಹೋರಾಟದಲ್ಲಿ ಭಾಗವಹಿಸಿದವರು ದಸ್ತಗಿರಿ ಆದಾಗ ಅವರ ಮನೆಯವರಿಗೆ ಧೈರ್ಯಹೇಳಿ ಅವರಿಗೆ ಸಹಾಯ ಮಾಡುತ್ತಿದ್ದ ವಿಶೇಷ ಗುಣವನ್ನು ಹೊಂದಿದ್ದರು. ಕನ್ನಡದ ಸಮಸ್ಯೆಗಳು ಎಲ್ಲೇ ಇದ್ದರೂ ತಕ್ಷಣವೇ ಧಾವಿಸುತ್ತಿದ್ದ ರಾಮಮೂರ್ತಿಯವರು ಯುವ ಚಳವಳಿಗಾರರಲ್ಲಿ ಸ್ಫೂರ್ತಿಯನ್ನೂ, ಆತ್ಮವಿಶ್ವಾಸವನ್ನೂ ತುಂಬುತ್ತಿದ್ದರು.ಇಂದು ಕನ್ನಡಿಗರ ಅಸ್ಮಿತೆಯಾಗಿ ಎಲ್ಲೆಲ್ಲೂ ಹಾರಾಡುತ್ತಿರುವ ಹಳದಿ ಕೆಂಪು ಬಣ್ಣಗಳ ಬಾವುಟ ರಾಮಮೂರ್ತಿಯವರೇ ರೂಪಿಸಿದ್ದು. ಅಂತಹ ಕೆಚ್ಚೆದೆಯ ರಾಮಮೂರ್ತಿಗಳು ತನ್ನ ಜೀವನ ನಿರ್ವಹಣೆಗಾಗಿ ತಾವು ಕೊಂಡ ಭೂಮಿಯಲ್ಲಿಯೇ ತನ್ನ ಜೀವನದ ಅಂತ್ಯವನ್ನು ಕಾಣಬೇಕಾದ್ದು ಒಂದು ದುರಂತ ಘಟನೆಯಾದುದು ವಿಧಿಯ ವೈಚಿತ್ರವೇ ಸರಿ.

 1967, ಡಿಸೆಂಬರ್ 25, ಕ್ರಿಸ್ಮಸ್ ದಿನದಂದು ಬೆಂಗಳೂರಿನ ಸಮೀಪದ ತಲಘಟ್ಟಪುರದಲ್ಲಿದ್ದ ತೋಟದಲ್ಲಿ ನೀರಿನ ಆಸರೆಗಾಗಿ ತೋಡಿಸುತ್ತಿದ್ದ ಬಾವಿಯಲ್ಲಿ ನೀರು ಬಂದಿದೆ ಎಂದು ತಿಳಿದ ಅವರು ತಮ್ಮ ಇಬ್ಬರು ಮಕ್ಕಳನ್ನು, ಹನ್ನೆರಡು ವರ್ಷದ ದಿನಕರ ಮತ್ತು ಒಂಬತ್ತು ವರ್ಷದ ಮಂಜುನಾಥರನ್ನು ಕರೆದು ಕೊಂಡು ಹೋದರು. ಬಾವಿಯ ಬಳಿ ಹೋಗಿ ನೀರು ಬರುತ್ತಿರುವುದನ್ನು ನೋಡುತ್ತಿದ್ದಾಗ ಅವರು ನಿಂತಿದ್ದ ಭೂಮಿಯ ಭಾಗ ಕುಸಿದು ಅವರು ಹಾಗೂ ಅವರ ಇಬ್ಬರೂ ಮಕ್ಕಳೂ ಭೂ ಸಮಾಧಿಯಾದರು.

 ಕೇವಲ 49 ವರ್ಷಗಳು ಮಾತ್ರ ಬದುಕಿದ್ದರೂ ತನ್ನ ಬದುಕಿನುದ್ದಕ್ಕೂ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ರಾಮಮೂರ್ತಿಯವರ ಬದುಕು ವರ್ಣರಂಜಿತವಾದುದು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು, ಪತ್ರಿಕಾ ಕ್ಷೇತ್ರದಲ್ಲಿ ದುಡಿದರು, ಪತ್ತೇದಾರಿ ಸಾಹಿತ್ಯ ರಚಿಸಿದರು. ಆದರೆ ಈ ಎಲ್ಲಾ ಕಾರ್ಯಗಳಿಗೂ ಕಳಶಪ್ರಾಯವಾದುದು ಅವರು ಕನ್ನಡ ಚಳವಳಿಗೆ ಸಲ್ಲಿಸಿರುವ ಕಾಣಿಕೆ. ಕನ್ನಡ ಚಳವಳಿಯ ಇತಿಹಾಸದಲ್ಲಿ ಅವರ ಹೆಸರು ಸದಾ ಅಮರ; ಸದಾ ಸ್ಮರಣೀಯ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top