ಉಚಿತ ಸೇವೆಗಳ ಹೆಸರಿನಲ್ಲಿ ಹಣ ಮಾಡುವ ಆನ್‌ಲೈನ್ ಕಂಪೆನಿಗಳು | Vartha Bharati- ವಾರ್ತಾ ಭಾರತಿ

--

ಉಚಿತ ಸೇವೆಗಳ ಹೆಸರಿನಲ್ಲಿ ಹಣ ಮಾಡುವ ಆನ್‌ಲೈನ್ ಕಂಪೆನಿಗಳು

ಫೇಸ್‌ಬುಕ್‌ನ ಬಳಕೆದಾರರ ಮಾಹಿತಿ ಸೋರಿಕೆ ವಿಷಯ ಈಗ ಸುದ್ದಿಯಲ್ಲಿದೆ. ಆದರೆ ಆನ್‌ಲೈನ್ ಬಳಕೆದಾರರ ಮಾಹಿತಿಗಳ ಸೋರಿಕೆಗಳು ಆರಂಭವಾಗಿ ದಶಕಗಳೇ ಕಳೆದಿವೆ. ಇದಕ್ಕೆ ಇರುವ ಸುಂದರ ಹೆಸರು ದತ್ತಾಂಶ ಗಣಿಗಾರಿಕೆ. ಈ ದತ್ತಾಂಶ ಗಣಿಗಾರಿಕೆಯ ಸಾಧ್ಯತೆಗಳನ್ನು ಅರಿತ ಕೂಡಲೇ ಆನ್‌ಲೈನ್ ಕಂಪೆನಿಗಳು ಯಶಸ್ಸಿನ ಹಾದಿಯಲ್ಲಿ ರಾಕೆಟ್ ವೇಗದಲ್ಲಿ ಚಿಮ್ಮಿದವು. ಅದರ ಪರಿಣಾಮವೇ ಗೂಗಲ್ ಫೇಸ್‌ಬುಕ್ ಮುಂತಾದ ಕಂಪೆನಿಗಳು ಉಚಿತ ಸೇವೆಯನ್ನು ನೀಡಲು ಸಾಧ್ಯವಾಗಿದ್ದು. ಬಳಕೆದಾರರಂತೂ ಸಿಕ್ಕ ಉಚಿತ ಕೊಡುಗೆಗಳ ಮತ್ತು ಅವಕಾಶಗಳ ಸುರಿಮಳೆಯಲ್ಲಿ ಹಿಗ್ಗಿಹಿರಿದು ಕುಣಿದಾಡಿ ಅಪ್‌ಡೇಟ್‌ಗಳ ಮೇಲೆ ಅಪ್‌ಡೇಟ್‌ಗಳನ್ನು ಮಾಡಿದರು. ಎಲ್ಲದಕ್ಕೂ ಒಂದು ಸೆಲ್ಫಿ ಹಾಕಿದರು. ಎಲ್ಲರೂ ನೆಟಿಜನ್‌ಗಳಾದರು. ಬಳಕೆದಾರರು ಹೀಗೆ ಎಲ್ಲಕ್ಕೂ ಫೋಟೋ ಕ್ಲಿಕ್ಕಿಸಿದಾಗ ಅಪ್‌ಡೇಟ್ ಮಾಡಿದಾಗ, ಆನ್‌ಲೈನ್ ಕಂಪೆನಿಯ ಒಡೆಯರಿಗೆ ಖುಷಿಯೋ ಖುಷಿ. ಏಕೆಂದರೆ ಹಾಕಲ್ಪಟ್ಟ ಫೋಟೋ ನೀಡುವ ಎಲ್ಲಾ ಮಾಹಿತಿಗಳು ಅವರಿಗೆ ಹಣದ ಸುರಿಮಳೆ ತಂದವು.

ಬಳಕೆದಾರರ ಫೋಟೋ ಮತ್ತು ಅಪ್‌ಡೇಟ್‌ಗಳು ಅವರು ಯಾರು ಎನ್ನುವ ಮಾಹಿತಿಯನ್ನು ನೀಡಿತು. ಅದನ್ನು ದತ್ತಾಂಶದ ಹೆಸರಿನಲ್ಲಿ ಆನ್‌ಲೈನ್ ಕಂಪೆನಿಯು ಮಾರಿತು. ಹೀಗೆ ಪಡೆದುಕೊಂಡ ಮಾಹಿತಿ ಆಧಾರದ ಮೇಲೆ ಬಳಕೆದಾರರಿಗೆ ಹೊಂದುವ ಜಾಹೀರಾತು ಅದೇ ಆನ್‌ಲೈನ್ ಸೇವೆಯ ಮೂಲಕ ಅವರ ಅಕೌಂಟ್‌ನಲ್ಲಿ ಕಾಣಿಸಿತು. ಬಳಕೆದಾರರು ಯಾವುದೇ ಆಪ್ ತೆರೆದರು ಇಲ್ಲವೇ ಆನ್‌ಲೈನ್ ವೆಬ್‌ಸೈಟ್ ಓಪನ್ ಮಾಡಿದರು ಅಲ್ಲಿ ಕಾಣಿಸುವ ಜಾಹೀರಾತು ಅವರಿಗಾಗಿಯೇ ಕಳುಹಿಸಲ್ಟಟ್ಟಿದ್ದು! ಇದನ್ನು ವ್ಯಾವಹಾರಿಕ ಪರಿಭಾಷೆಯಲ್ಲಿ ಕಸ್ಟಮೈಸ್ಡ್ ಜಾಹೀರಾತು ಎನ್ನುತ್ತಾರೆ. ಬಳಕೆದಾರರ ಮಾಹಿತಿಯನ್ನು ದತ್ತಾಂಶ ಗಣಿಗಾರಿಕೆಯ ಹೆಸರಲ್ಲಿ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಆರಂಭವಾಗಿದ್ದೆ ಜಾಹೀರಾತುದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ. ಮುದ್ರಣ ಮಾಧ್ಯಮದ ಓದುಗರಿಗೆ ಅವರು ಓದುವ ನಿಯತಕಾಲಿಕಗಳಲ್ಲಿ ಮುದ್ರಿಸುವ ಮೂಲಕ ಜಾಹೀರಾತು ತಲುಪುತಿತ್ತು. ಆದರೆ ಆನ್‌ಲೈನ್ ಬಳಕೆದಾರರು ದೇಶಾತೀತ ವ್ಯಕ್ತಿಗಳು. ಆದುದರಿಂದ ಅಮೆರಿಕದ ಕಂಪೆನಿಯ ಜಾಹೀರಾತು ಭಾರತದ ಬಳಕೆದಾರನಿಗೆ ತಲುಪಿದರೆ ಪ್ರಯೋಜನ ಇರುವುದಿಲ್ಲ. ಹಾಗಾಗಿ ಬಳಕೆದಾರ ಅಮೇರಿಕಾದವನು ಎಂದು ಖಚಿತಪಡಿಸಿಕೊಂಡರೆ ಉತ್ತಮವಲ್ಲವೇ? ಹೀಗೆ ಬಳಕೆದಾರನ ವೈಯಕ್ತಿಕ ಮಾಹಿತಿ ಮುಖ್ಯವಾಯಿತು. ಜಾಹೀರಾತು ನೀಡುವ ಕಂಪೆನಿಯ ಶ್ರಮ ಕಡಿಮೆಯಾಯಿತು. ಮುಂದುವರಿದು ಇದು ಇನ್ನಷ್ಟು ಕ್ಷೇತ್ರಗಳಿಗೆ ಹಬ್ಬಿತು. ಬಳಕೆದಾರ ಹಣಕಾಸು ಸ್ಥಿತಿಗತಿ, ಅವನ ಆಸಕ್ತಿ ಕ್ಷೇತ್ರಗಳು ಯಾವುವು ಹೀಗೆ ಮಾಹಿತಿಯನ್ನು ಕಲೆಹಾಕಲು ಆರಂಭಿಸಿದರು. ಇದಕ್ಕೆ ಆರಂಭದಲ್ಲಿ ಬಳಕೆಯಾದ ಮಾಧ್ಯಮವೇ ಇಮೇಲ್. ಉಚಿತ ಇಮೇಲ್ ಸೇವೆ ಇಮೇಲ್ ಬಳಕೆಯನ್ನು ಹೆಚ್ಚು ಮಾಡಿತು. ಬಳಕೆದಾರ ತನ್ನೆಲ್ಲಾ ಪತ್ರ ವ್ಯವಹಾರಗಳಿಗೆ ಇಮೇಲ್ ಅನ್ನು ಅವಲಂಬಿಸಿದ. ಜೊತೆಗೆ ಇಮೇಲ್ ಪತ್ರ ವ್ಯವಹಾರವನ್ನು ತ್ವರಿತ ಹಾಗೂ ನಿಖರಗೊಳಿಸಿತು. ಉಚಿತ ಇಮೇಲ್ ಸೇವೆಯನ್ನು ನೀಡಿದ ಕಂಪೆನಿಗಳು, ಪ್ರತಿಯೊಬ್ಬರ ಇಮೇಲ್ ಅನ್ನು ಓದುವ ತಂತ್ರಾಂಶಗಳನ್ನು ರೂಪಿಸಿದವು.

ಇಮೇಲ್‌ಗಳನ್ನು ಓದುವ ತಂತ್ರಾಂಶಗಳು ಮೂಲಕ ಬಳಕೆದಾರರ ಕುರಿತು ಅವರ ಮೇಲ್‌ನಲ್ಲಿರುವ ಮಾಹಿತಿಯ ಆಧಾರದ ಮೇಲೆ ಸ್ಪಷ್ಟವಾದ ಚಿತ್ರಣವನ್ನು ಪಡೆದವು. ಮತ್ತು ಈ ಕಾರ್ಯಕ್ಕೆ ಅವು ಇಮೇಲ್ ಅಕೌಂಟ್‌ಅನ್ನು ಬಳಕೆದಾರ ತೆರೆದಾಗ ಷರತ್ತುಗಳ ಅಡಿಯಲ್ಲಿ ‘‘ಐ ಅಗ್ರೀ’’ ಎನ್ನುವ ಬಟನ್ ಒತ್ತುವಂತೆ ಮಾಡಿ ಒಪ್ಪಿಗೆಯನ್ನು ಪಡೆದು ಕಾನೂನು ಸಮ್ಮತಗೊಳಿಸಿಕೊಂಡವು. ಹೀಗೆ ಪಡೆದ ಮಾಹಿತಿಯ ಬಳಕೆಯ ಉದಾಹರಣೆ ಹೀಗಿದೆ ನೋಡಿ: ಓರ್ವ ಬಳಕೆದಾರರ ಡೈವೋರ್ಸ್ ಪದವನ್ನು ಮೇಲ್‌ನಲ್ಲಿ ಬಳಸಿದ ಇಲ್ಲವೇ ಸಂಗಾತಿಯೊಂದಿಗೆ ಜಗಳಮಾಡಿದ ಅಂಶ ಬರೆದ ಎಂದಾದಲ್ಲಿ, ಅವನ ಅಕೌಂಟ್‌ನಲ್ಲಿ ಆನ್‌ಲೈನ್ ಡೇಟಿಂಗ್ ಕಂಪೆನಿಗಳ ಜಾಹೀರಾತು ಪ್ರದರ್ಶಿತವಾಗುವ ಹಂತಕ್ಕೆ ಕಸ್ಟಮೈಸ್ಡ್ ಜಾಹೀರಾತು ಸೇವೆಗಳು ತಲುಪಿದವು. ಮಾರುಕಟ್ಟೆ ಪರಿಣತರ ಪ್ರಕಾರ ಗೂಗಲ್ ಇಂತಹ ತಂತ್ರಾಂಶಗಳನ್ನು ವೇಗವಾಗಿ ಅಭಿವೃದ್ಧಿಗೊಳಿಸಿದ ಕಾರಣ ಯಶಸ್ವಿಯಾಯಿತು. ಇದನ್ನು ಮಾಡದೇ ಹೋದ ಯಾಹೂ ಬಾಗಿಲು ಮುಚ್ಚಿಕೊಳ್ಳುವ ಸ್ಥಿತಿಗೆ ಬಂತು.

ಇಡೀ ಪ್ರಕ್ರಿಯೆಯಲ್ಲಿ ಲಾಭದ ಅಂಶಗಳಿರುವುದನ್ನು ಗಮನಿಸಬೇಕಾಗು ತ್ತದೆ. ಬಳಕೆದಾರರ ಕುರಿತು ಎಲ್ಲಾ ಮಾಹಿತಿಯನ್ನು ಪಡೆದು ಅದನ್ನು ದತ್ತಾಂಶವಾಗಿ ಮಾರಿಕೊಂಡ ಕಂಪೆನಿಗೆ ಹಣ ದೊರೆಯುತ್ತದೆ. ಈ ದತ್ತಾಂಶವನ್ನು ಪಡೆದು ಸೂಕ್ತವಾದ ಜಾಹೀರಾತು ರೂಪದ ಮಾಹಿತಿಯನ್ನು ನೀಡಿದ ಕಂಪೆನಿಗೆ ವ್ಯಾಪಾರ ಹೆಚ್ಚಿಸಿಕೊಂಡ ಲಾಭವಿರುತ್ತದೆ. ಆಸಕ್ತಿಕರ ವಿಷಯವೆಂದರೆ, ಈ ಲಾಭ ಪಡೆದ ಎರಡೂ ಕಂಪೆನಿಗಳು ಗ್ರಾಹಕನನ್ನು ಉದ್ಧಾರ ಮಾಡಿದ ಫೋಸು ನೀಡುತ್ತವೆ. ಉಚಿತ ಸೇವೆ ನೀಡಿದ ಹೆಚ್ಚುಗಾರಿಕೆ ಒಬ್ಬರದಾದರೆ, ಅಗತ್ಯವಿರುವ ಮಾಹಿತಿಯನ್ನು ಜಾಹೀರಾತು ರೂಪದಲ್ಲಿ ನೀಡಿದ ಹೆಮ್ಮೆ ಇನ್ನೊಬ್ಬರದು. ವಾಸ್ತವ ಏನೆಂದರೆ, ತನ್ನೆಲ್ಲಾ ಮಾಹಿತಿಯನ್ನು ಕಂಪೆನಿಗಳಿಗೆ ನೀಡಿ ಅವರ ಕೈಯಲ್ಲಿ ಮಾರಾಟದ ಸರಕಾದವನು ಬಳಕೆದಾರ. ಈ ಹಿನ್ನೆಲೆಯಲ್ಲಿ ಈಗ ಸುದ್ದಿಯಲ್ಲಿರುವ ಫೇಸ್‌ಬುಕ್ ಹಗರಣವನ್ನು ಪರಿಗಣಿಸಬೇಕಿದೆ. ‘ಕೇಂಬ್ರಿಡ್ಜ್ ಅನಲಿಟಿಕಾ’ ಎನ್ನುವ ಸಲಹಾ ಕಂಪೆನಿಯು ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಚುನಾಯಿತರಾಗುವ ನಿಟ್ಟಿನಲ್ಲಿ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿತ್ತು ಎನ್ನುವುದೇ ಈಗಿರುವ ದೂರು. ಈ ಹಗರಣ ಹೊರಬರುವ ಮೂಲಕ ಕಳೆದ ಒಂದು ವರ್ಷದಿಂದ ಗುಸುಗುಸು ರೂಪದಲ್ಲಿದ್ದ ವಿಷಯಕ್ಕೀಗ ಒಂದು ಸ್ಪಷ್ಟ ರೂಪ ಸಿಕ್ಕಿದಂತಾಗಿದೆ.

ಕೇಂಬ್ರಿಡ್ಜ್ ಅನಲಿಟಿಕಾ ಕಂಪೆನಿಯು ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್‌ನಿಂದ ನೇರವಾಗಿ ಪಡೆಯದೇ ಅದನ್ನು ಮೋಸದಿಂದ ಪಡೆದಿತ್ತು ಎನ್ನುವುದು ಹಗರಣದಲ್ಲಿರುವ ಪ್ರಮುಖ ವಿಷಯವಾಗಿದೆ. ಕೋಗ್ನ್‌ನ್ ಎನ್ನುವ ಮನೋವಿಜ್ಞಾನಿ ವ್ಯಕ್ತಿತ್ವ ಗುಣವಿಶೇಷವನ್ನು (ಪರ್ಸನಾಲಿಟಿ ಟೆಸ್ಟ್) ಅರಿಯುವ ಆನ್‌ಲೈನ್ ಪರೀಕ್ಷೆಯನ್ನು ನಡೆಸುವ ಕಿರುತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಫೇಸ್‌ಬುಕ್‌ನಲ್ಲಿ ಹಾಕಿದ. ಈ ಕಿರುತಂತ್ರಾಂಶವು ನಡೆಸಿದ ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ಫೇಸ್‌ಬುಕ್ ಬಳಕೆದಾರರ ಮತ್ತು ಅವರ ಸ್ನೇಹಿತರಾಗಿದ್ದವರ (ಫ್ರೆಂಡ್ಸ್) ವೈಯಕ್ತಿಕ ವಿವರಗಳನ್ನು ಕೋಗ್ನನ್ ಪಡೆದುಕೊಳ್ಳುತ್ತಾನೆ. ಈ ಹಂತದವರೆಗೂ ಕೋಗ್ನ್‌ನ್ ಮಾಡುವ ಕೆಲಸ ಕಾನೂನು ವಿರೋಧಿಯಾಗುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಇಂತಹ ಪರೀಕ್ಷೆ ನಡೆಸಲು ಮತ್ತು ಮಾಹಿತಿ ಸಂಗ್ರಹಿಸಲು ಕೋಗ್ನ್‌ನ್‌ಗೆ ಅಧಿಕೃತವಾಗಿ ಫೇಸ್‌ಬುಕ್‌ನಿಂದ ಅನುಮತಿಯಿರುತ್ತದೆ. ಏಕೆಂದರೆ ಅದೊಂದು ವಾಣಿಜ್ಯ ಒಪ್ಪಂದವಾಗಿರುತ್ತದೆ. ಫೇಸ್‌ಬುಕ್ ಬಳಕೆದಾರರಿಗೆ ಈ ಪರೀಕ್ಷೆ ನಡೆಸಲು ಕೋಗ್ನ್‌ನ್ ಫೇಸ್‌ಬುಕ್ ಕಂಪೆನಿಗೆ ಹಣ ಪಾವತಿ ಮಾಡಿರುತ್ತಾನೆ. ಫೇಸ್‌ಬುಕ್ ಈಗ ಹೇಳುವ ಪ್ರಕಾರ ಕೋಗ್ನ್‌ನ್ ತಾನು ಪಡೆದ ಮಾಹಿತಿಯನ್ನು ಕೇಂಬ್ರಿಡ್ಜ್ ಅನಲಿಟಿಕಾಗೆ ನೀಡಿದ್ದು ತಪ್ಪು. ಆದರೆ ಸಮಸ್ಯೆಯಿರುವುದು, ಇಂತಹದೊಂದು ಕೆಲಸ ಮಾಡಲು ಕೇಂಬ್ರಿಡ್ಜ್ ಅನಲಿಟಿಕಾ ಕಂಪೆನಿಯೇ ಕೋಗ್ನ್‌ನ್‌ಗೆ ಹಣ ನೀಡಿತ್ತು ಎನ್ನುವ ವಿಷಯದಲ್ಲಿ. ಇಂತಹದೊಂದು ಕೃತ್ಯ ನಡೆಯಲು ಫೇಸ್‌ಬುಕ್ ಕಂಪೆನಿಯ ವ್ಯವಹಾರ ನೀತಿಯೇ ಅವಕಾಶ ನೀಡಿತು ಎನ್ನುವುದಂತು ಸ್ಪಷ್ಟ. ಇಲ್ಲಿ ನಡೆದಿರುವುದು ವ್ಯವಹಾರದ ದುರ್ಬಳಕೆ ಮಾತ್ರ ಎನ್ನುವುದು ಫೇಸ್‌ಬುಕ್‌ನ ವಾದ. ಐದಾರು ತಿಂಗಳ ಹಿಂದೆ ‘ದಿ ಎಕಾನಮಿಷ್ಟ್’ ಪತ್ರಿಕೆ ಟ್ರಂಪ್ ಪರವಾಗಿ ಫೇಸ್‌ಬುಕ್ ಅನ್ನು ರಶ್ಯಾ ದೇಶವು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮತ್ತೊಂದು ಮಗ್ಗುಲನ್ನು ಲೇಖನವೊಂದರಲ್ಲಿ ಪರಿಚಯಿಸಿತ್ತು. ದಿ ಎಕಾನಮಿಷ್ಟ್‌ನ ಪ್ರಕಾರ, ಜಾಹೀರಾತುದಾರರು ಯಾವ ಅಂಶಕ್ಕೆ ಹೆಚ್ಚಿನ ಒತ್ತನ್ನು ನೀಡಬಯಸುತ್ತಾರೋ ಅದೇ ಅಂಶವನ್ನು ಫೇಸ್‌ಬುಕ್ ತನ್ನ ಬಳಕೆದಾರರ ಗಮನಕ್ಕೆ ತರುವಂತಹ ತಂತ್ರಾಂಶವನ್ನು ರೂಪಿಸಿರುತ್ತದೆ. ಬಹುಶಃ ಇದರ ಲಾಭ ಪಡೆದ ರಶ್ಯಾ ಪ್ರೇರಿತ ಕಂಪೆನಿಗಳು ಇಲ್ಲವೇ ಜಾಹೀರಾತುದಾರರು ರಶ್ಯಾದ ಹಿತಾಸಕ್ತಿಗೆ ಪೂರಕವಾದ ಅಂಶಗಳನ್ನೋ ಇಲ್ಲವೇ ಮಾಹಿತಿಗಳನ್ನೋ ಫೇಸ್‌ಬುಕ್ ಬಳಕೆದಾರರಿಗೆ ತಲುಪುವಂತೆ ಮಾಡಿರಬಹುದು. ಇದು ಸಹ ಕಸ್ಟಮೈಸ್ಡ್ ಜಾಹೀರಾತು ವ್ಯವಹಾರವೇ ಎನ್ನುವುದು ಲೇಖನದ ವಾದವಾಗಿತ್ತು. ಉದಾಹರಣೆಗೆ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಹಿಲರಿ ಅವರ ಆರೋಗ್ಯದ ಕುರಿತಾಗಿರುವ ಗಾಸಿಪ್ ಅನ್ನು ಅವರ ಪರವಾಗಿರುವ ಬಳಕೆದಾರನಿಗೆ ತಲುಪುವಂತೆ ನೋಡಿಕೊಳ್ಳುವುದು. ಅದರಲ್ಲೂ ಸದರಿ ಬಳಕೆದಾರರಿಗೆ ಪರಿಚಯವಿರುವ(ಫೇಸ್‌ಬುಕ್ ಫ್ರೆಂಡ್)ವರಿಂದಲೇ ಅದನ್ನು ಶೇರ್ ಆದಂತೆ ಮಾಡುವುದು! ಇಂತಹ ಕೆಲಸವನ್ನು ಫೇಸ್‌ಬುಕ್ ಹೇಗೆ ನಿರ್ವಹಿಸಲು ಸಾಧ್ಯ ಎಂಬ ಪ್ರಶ್ನೆ ನಿಮಗಿದೆಯೇ? ಹಾಗಿದ್ದರೆ ಈ ಉದಾಹರಣೆಯನ್ನು ನೋಡಿ. ಓರ್ವ ಎಕ್ಸ್ ಫೇಸ್‌ಬಳಕೆದಾರ ಹಿಲರಿ ಅವರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದಾಗ ತೆಗೆದುಕೊಂಡ ತನ್ನ ಸೆಲ್ಫಿಯನ್ನು ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುತ್ತಾನೆ. ಆ ಫೋಟೊದಲ್ಲಿ ಇಲ್ಲವೇ ಆತನ ವಿವರಣೆಯಲ್ಲಿ ಹಿಲರಿ ಅವರ ಪ್ರಚಾರದಲ್ಲಿ ಭಾಗವಹಿಸಿದ ಮಾಹಿತಿ ಇರುತ್ತದೆ. ಒಂದು ವೇಳೆ ಇಂತಹ ಮಾಹಿತಿಗಳು ಇಲ್ಲವೇ ಇಲ್ಲ ಎಂದು ಕೊಳ್ಳಿ. ಮೊಬೈಲ್ ಕ್ಯಾಮರಾ ಬಳಸಿ ತೆಗೆದಿರುವ ಫೋಟೊದಲ್ಲಿ ಜಿಪಿಎಸ್ ಆಧಾರಿತ ತಂತ್ರಜ್ಞಾನವಿರುವ ಕಾರಣ ಆತ ತೆಗೆದಿರುವ ಫೋಟೊ ಯಾವ ಪ್ರದೇಶದಿಂದ ಬಂದಿರುವುದು ಎನ್ನುವುದು ಗೊತ್ತಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು, ಫೇಸ್‌ಬುಕ್ ಕಂಪೆನಿಯು ಬಳಸುವ ತಂತ್ರಾಂಶ ಅಂದು ಆ ಪ್ರದೇಶದಲ್ಲಿ ನಡೆದಿರುವ ವಿವಿಧ ಕಾರ್ಯಕ್ರಮಗಳ ಪಟ್ಟಿಯನ್ನು ತೆಗೆದು ಅದು ಹಿಲರಿ ಅವರ ಕಾರ್ಯಕ್ರಮದ ವೇಳೆಯ ಫೋಟೋ ಎಂದು ಖಚಿತಪಡಿಸಿಕೊಳ್ಳುತ್ತದೆ. ತಕ್ಷಣವೇ ಜಾಹೀರಾತುದಾರರು ಬೆಂಬಲಿಸಲು ತಯಾರಿರುವ ಮಾಹಿತಿಯನ್ನು ಕಸ್ಟಮೈಸ್ಡ್ ಸರ್ವೀಸ್ ಹೆಸರಿನಲ್ಲಿ ಫೇಸ್‌ಬುಕ್ ಈ ಬಳಕೆದಾರನ ಖಾತೆಯಲ್ಲಿ ಕಾಣಿಸುವಂತೆ ಮಾಡುತ್ತದೆ. ಗಮನಿಸಬೇಕಾದ ಅಂಶವೆಂದರೆ ಇದೆಲ್ಲವೂ ಕ್ಷಣಾರ್ಧದಲ್ಲಿ ಆಗುತ್ತದೆ ಮತ್ತು ಮನುಷ್ಯರ ಮಧ್ಯಪ್ರವೇಶವೇ ಇರುವುದಿಲ್ಲ ಎನ್ನ್ನುವುದನ್ನು. ಅಲ್ಗಾರಿದಮ್ ಎಂದು ಕರೆಯಲ್ಪಡುವ ಕಂಪ್ಯೂಟರ್ ಆಧಾರಿತ ಇಂತಹ ತಂತ್ರಾಂಶಗಳು ಇದೆಲ್ಲವನ್ನೂ ನಿಭಾಯಿಸುತ್ತವೆ. ಹೀಗಾಗಿಯೇ ಫೇಸ್‌ಬುಕ್ ರೀತಿಯ ಕಂಪೆನಿಗಳು ಇಂದು ಹಣವನ್ನು ಬಾಚಿಕೊಳ್ಳುತ್ತಿವೆ.

ಫೇಸ್‌ಬುಕ್‌ನಂತಹ ಕಂಪೆನಿಗಳ ಸಾಮರ್ಥ್ಯವನ್ನು ಅಳೆಯಲು ಅವು ರೂಪಿಸುವ ತಂತ್ರಾಂಶಗಳ ಸ್ವರೂಪದ ಮೂಲಕ ಅಂದಾಜುಮಾಡಬಹುದು. ಆನ್‌ಲೈನ್‌ನಲ್ಲಿ ದೊರೆಯುವ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಬಳಕೆದಾರರ ಆರ್ಥಿಕ ಸ್ಥಿತಿಗತಿಯನ್ನು ನಿಖರವಾಗಿ ಅಳೆಯುವ ತಂತ್ರಾಂಶವೊಂದಕ್ಕೆ ಫೇಸ್‌ಬುಕ್ ಪೇಟೆಂಟ್ ಕೇಳಿ ಅರ್ಜಿ ಸಲ್ಲಿಸಿದೆ. ಈ ತಂತ್ರಾಶದ ಮೂಲಕ ಬಳಕೆದಾರನು ಬಡವನೋ ಇಲ್ಲವೇ ಶ್ರೀಮಂತನೋ ಎಂದು ಹೇಳಬಹುದಂತೆ. ಬಡವನಾದರೇ ಎಷ್ಟು ಬಡವ, ಶ್ರೀಮಂತನಾದರೆ ಎಷ್ಟು ಶ್ರೀಮಂತ ಎನ್ನವುದು ಸಾಧ್ಯವಂತೆ. ಬರೀ ಹೇಳುವುದಷ್ಟೇ ಅಲ್ಲ, ನಿಖರವಾಗಿ ಹೇಳಬಹುದು ಎನ್ನುವುದು ಕಂಪೆನಿಯ ವಾದ. ನೋಡಿ ಇಲ್ಲಿವರೆಗೆ ಇಂತಹ ಆನ್‌ಲೈನ್ ಮಾಧ್ಯಮಗಳನ್ನು ನಡೆಸುವ ಕಂಪೆನಿಗಳ ಲೆಕ್ಕಾಚಾರವಿರುತ್ತದೆ. ನೀವು ಬಳಸುವ ವಸ್ತುಗಳಾದ ಫೋನು ಇಲ್ಲವೇ ವಾಹನ ಯಾವುವು, ನೀವು ಭೇಟಿ ನೀಡುವ ಹೋಟೆಲ್‌ಗಳು ಸಿನೆಮಾ ಮಂದಿರಗಳು ಯಾವು ಯಾವುವು ಎನ್ನುವುದರ ಆಧಾರದ ಮೇಲೆ ನಿಮ್ಮ ಆರ್ಥಿಕ ಸ್ಥಿತಿಗತಿಯ ಲೆಕ್ಕ ಹಾಕಿ ನಿಮಗೆ ಸೂಕ್ತವಾಗಿ ಹೊಂದುವಂತಹ ಜಾಹೀರಾತುಗಳು ಮಾತ್ರ ತಲುಪುವಂತೆ ವ್ಯವಸ್ಥೆ ಮಾಡುವುದು ಇಂತಹ ತಂತ್ರಾಂಶಗಳ ಮೂಲ ಉದ್ದೇಶ.

ಒಂದು ತಿಂಗಳ ಹಿಂದೆ ಇದೇ ಫೇಸ್‌ಬುಕ್ ಮುಖ್ಯಸ್ಥರು ತಮ್ಮ ಬಳಕೆದಾರರಿಗೆ ಒಂದು ಪತ್ರ ಬರೆದಿದ್ದರು. ಅದರಲ್ಲಿ ಅವರು ‘‘ಫೇಸ್‌ಬುಕ್ ಸ್ಥಾಪನೆಯ ಮೂಲ ಉದ್ದೇಶವೇ ಜನರನ್ನು ಹತ್ತಿರ ತರುವುದಾಗಿತ್ತು. ಬೇರೆ ಬೇರೆ ಕಾರಣಗಳಿಗೆ ಚದುರಿರುವ ಜನರು ಫೇಸ್‌ಬುಕ್‌ನ ಮೂಲಕ ತಮ್ಮವರೊಂದಿಗೆ ಆತ್ಮೀಯವಾದ ಕ್ಷಣಗಳನ್ನು ಕಳೆಯುವಂತಾಗಲಿ ಮತ್ತು ಭಾವನಾತ್ಮಕವಾಗಿ ಒಂದಾಗುವಂತಾಗಲಿ ಎನ್ನುವ ಉದ್ದೇಶ ನಮ್ಮದಾಗಿತ್ತು. ಮುಂಬರುವ ದಿನಗಳಲ್ಲಿ ನಿಮ್ಮ ಆತ್ಮೀಯ ಕ್ಷಣಗಳನ್ನು ನಿಮ್ಮ ಆತ್ಮೀಯರೊಂದಿಗೆ ಹೆಚ್ಚು ಕಳೆಯವಂತೆ ಮಾಡಲು ಸಹಕರಿಸುವ ರೀತಿಯಲ್ಲಿ ಫೇಸ್‌ಬುಕ್ ಅನ್ನು ಮರುನಿರೂಪಿಸುತ್ತಿದ್ದೇವೆ. ನಿಮ್ಮ್ಮೆಲ್ಲರ ಸಹಕಾರ ಬೆಂಬಲ ಇರಲಿ. ಎಲ್ಲರಿಗೂ ಒಳ್ಳೆಯದಾಗಲಿ’’ ಎಂದಿದ್ದರು.

ಈ ಪತ್ರವನ್ನು ಓದಿದರೆ ಫೇಸ್‌ಬುಕ್ ಜನರ ಭಾವನಾತ್ಮಕ ಆರೋಗ್ಯದ ಕುರಿತು ಎಷ್ಟು ಕಾಳಜಿವಹಿಸುತ್ತದೆ ಎಂದು ಎನಿಸದೇ ಇರದು. ಆದರೆ ಮಾರುಕಟ್ಟೆ ಪರಿಣಿತರ ಪ್ರಕಾರ ಇದರ ಹಿಂದಿನ ಸತ್ಯ ಬೇರೆಯೇ ಇದೆ. ಇತ್ತೀಚಿನ ದಿನಗಳಲ್ಲಿ ಬಳಕೆದಾರರು ಫೇಸ್‌ಬುಕ್ ಅನ್ನು ತಮ್ಮ ವೈಯಕ್ತಿಕ ಕಾರ್ಯಗಳ ಅಪ್‌ಡೇಟ್ ನೀಡಲು ಬಳಸುತ್ತಿಲ್ಲ. ಅವರೀಗ ಸ್ನಾಪ್‌ಚಾಟ್, ಇನ್‌ಸ್ಟಗ್ರಾಂಗಳಂತಹ ಸೈಟ್‌ಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಬಳಕೆದಾರರ ಕುರಿತು ಹೊಸ ಖಾಸಗಿ ಮಾಹಿತಿ ಸಿಗದ ಕಾರಣ ಫೇಸ್‌ಬುಕ್ ಬಳಿ ಈಗ ಮಾರಿಕೊಳ್ಳಲು ಯಾವುದೇ ಹೊಸ ದತ್ತಾಂಶ ಇಲ್ಲ. ದತ್ತಾಂಶದ ಮಾರಾಟವನ್ನೇ ತನ್ನ ವ್ಯಾಪಾರದ ಆಧಾರವಾಗಿಟ್ಟುಕೊಂಡಿರುವ ಫೇಸ್‌ಬುಕ್ ಈಗ ನಷ್ಟದ ಹಾದಿಯಲ್ಲಿದೆ. ಹಾಗಾಗಿ ಹೀಗೊಂದು ಭಾವನಾತ್ಮಕ ಬ್ಲಾಕ್‌ಮೇಲ್ ಬಳಕೆದಾರರ ಮೇಲೆ ನಡೆದಿದೆ ಎನ್ನುವುದು ಇವರ ವಾದವಾಗಿದೆ. ಈಗ ಸುದ್ದಿಯಾಗಿರುವ ಕೇಂಬ್ರಿಡ್ಜ್ ಅನಲಿಟಿಕಾ ಹಗರಣದ ಹಿನ್ನೆಲೆಯಲ್ಲಿ ಭಾರತೀಯರು ಗಮನಿಸಬೇಕಾದ ತುರ್ತು ಅಂಶವಿದೆ. ಸಾಕಷ್ಟು ಪ್ರಜ್ಞಾವಂತ ಆನ್‌ಲೈನ್ ಬಳಕೆದಾರರಿರುವ ಅಮೆರಿಕ, ಬ್ರಿಟನ್ ಹಾಗೂ ಯೂರೋಪಿನ ದೇಶಗಳಲ್ಲೇ ಈ ರೀತಿಯ ದತ್ತಾಂಶ ಗಣಿಗಾರಿಕೆಯ ಅಪಬಳಕೆ ನಡೆದಿದೆ ಎಂದಾದರೆ, ಉಚಿತ ಎಂದರೆ ಉಬ್ಬಿಹೋಗುವ ಭಾರತೀಯ ಬಳಕೆದಾರರು ‘‘ಐ ಅಗ್ರೀ’’ ಎನ್ನುತ್ತಾ ಬಳಸಿರುವ ಮತ್ತು ಬಳಸುತ್ತಿರುವ ಉಚಿತ ಸೇವೆಗಳ ಮೂಲಕ ಕಂಪೆನಿಗಳಿಗೆ ದೊರೆಯುತ್ತಿರುವ ಮಾಹಿತಿಗಳ ಭಂಡಾರ ಎಷ್ಟಿರ ಬಹುದು ಊಹೆ ಮಾಡಬೇಕಿದೆ. ಇಂದು ಭಾರತದಲ್ಲಿರುವ ಎಲ್ಲಾ ಮೊಬೈಲ್ ಕಂಪೆನಿಗಳು ನೀಡುತ್ತಿರುವ ಉಚಿತ ಇಂಟರ್‌ನೆಟ್ ಡೇಟಾ ಹಿಂದಿರುವ ಲೆಕ್ಕಾಚಾರವೇ ಇದು ಎನ್ನುವ ವಾದವಿದೆ. ಉಚಿತ ಡೇಟಾ ಬಳಸಿಕೊಂಡು ಬಳಕೆದಾರರು ಹಾಕುವ ಸೆಲ್ಫೀ, ಡೌನ್‌ಲೋಡ್ ಮಾಡುವ ಹಾಡು, ಸಿನೆಮಾ, ಸುದ್ದಿ ಎಲ್ಲವೂ ಬಳಕೆದಾರರ ಮಾಹಿತಿಯನ್ನು ಮತ್ತು ಅವರ ಫೋನಿನಲ್ಲಿ ಕಾಂಟ್ಯಾಕ್ ರೂಪದಲ್ಲಿ ಇರುವವರ ಮಾಹಿತಿಯನ್ನು ಉಚಿತ ಸೇವೆ ನೀಡಿದ ಕಂಪೆನಿಗಳು ಕಂಪ್ಯೂಟರ್‌ನಲ್ಲಿ ದತ್ತಾಂಶದ ರೂಪದಲ್ಲಿ ಸುರಕ್ಷಿತವಾಗಿಡುತ್ತವೆ. ಇದೇ ಕಂಪೆನಿಗಳಿಗೆ ದತ್ತಾಂಶ ಗಣಿಗಾರಿಕೆ ರೂಪದಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಈ ಹೊಸ ಗಣಿಗಾರಿಕೆಯನ್ನು ನಮ್ಮ ದೇಶದ ಯಾವ ಕಾನೂನು ನಿಯಂತ್ರಿಸುತ್ತದೆ? ಅಥವಾ ಅಂತಹದೊಂದು ಕಾನೂನು ನಿಜಕ್ಕೂ ನಮ್ಮಲ್ಲಿ ಇದೆಯೇ? ಹೀಗೆ ಯೋಚಿಸಲೇಬೇಕಾದ ಅನೇಕ ಅಂಶಗಳು ಇವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top