-

ಇತಿಹಾಸದ ‘ಮಿಸ್ಸಿಂಗ್ ಲಿಂಕ್’

ಎರಡು ದನಗಳ ತಳಿಗಳು; ಅವುಗಳು ರೂಪಿಸಿದ ನಾಗರಿಕತೆಯ ಹೆಜ್ಜೆಗಳು

-

 ಭಾಗ-2

ಆಧುನಿಕ ಭಾರತದ ಸಾಂಸ್ಕೃತಿಕ ರಾಜಕಾರಣದ ಇತ್ತೀಚಿನ ವರ್ಷಗಳಲ್ಲಿ ಹಸುವಿಗೆ ಎದುರಾಗಿ ಎಮ್ಮೆಯನ್ನು ನಿಲ್ಲಿಸುವ ವಾದ ಪ್ರಬಲವಾಗಿದೆ. ಎಮ್ಮೆಯನ್ನು ಸಬಾಲ್ಟರ್ನ್ ಪ್ರಾಣಿಯಾಗಿ, ಹಸುವನ್ನು ಬಲಾಢ್ಯರ ಪ್ರಾಣಿಯನ್ನಾಗಿ ನಿಲ್ಲಿಸಿ ನೋಡಲಾಗುತ್ತಿದೆ. ಈ ವಾದದ ಮೂಲ ವಿಚಾರಗಳು ಪುರಾಣಗಳಲ್ಲಿ ಅಡಗಿವೆ. ಪುರಾಣಗಳಲ್ಲಿ ಹಸುವನ್ನು ಬ್ರಹ್ಮ ಸೃಷ್ಟಿ ಎಂದು ಎಮ್ಮೆಯನ್ನು ವಿಶ್ವಾಮಿತ್ರ ಸೃಷ್ಟಿ ಎಂದು ಬಿಂಬಿಸಲಾಗಿದೆ. ಬಹುಶಃ ಅಲ್ಲಿಂದಲೇ ಎಮ್ಮೆಯ ನಿರ್ಲಕ್ಷ ಪ್ರಾರಂಭವಾಗಿರಬೇಕು. ಹಸುವಿನ ಶ್ರೇಷ್ಠತೆಯ ಪ್ರತಿಪಾದನೆಗಳು ಪ್ರಾರಂಭವಾಗಿರಬೇಕು. ಆದರೆ ಸ್ವತಂತ್ರ ಭಾರತದ ಆಧುನಿಕ ರಾಜಕಾರಣದ ಹಲವು ಧಾರೆಗಳಲ್ಲಿ ಎಮ್ಮೆ ಇಲ್ಲಿನ ಮೂಲ ನಿವಾಸಿಗಳ ಸಾಕು ಪ್ರಾಣಿ. ಹಸು ಆರ್ಯರ ಜೊತೆ ಭಾರತಕ್ಕೆ ಬಂದಿದ್ದು ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ. ಹಸು ಮತ್ತು ಎಮ್ಮೆ ಎಂಬ ನಿಸರ್ಗದ ಅಮೂಲ್ಯ ಪ್ರಾಣಿಗಳನ್ನು ಆಧಾರವಾಗಿಟ್ಟುಕೊಂಡು ಸುಮಾರು 2,300 ವರ್ಷಗಳ ಹಿಂದಿನಿಂದಲೇ ಮನುಷ್ಯರನ್ನು ಒಡೆದು ತಮ್ಮ ತಮ್ಮ ರಾಜಕೀಯ ಹುನ್ನಾರಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನ ನಡೆದಿದೆ. ಹಸು ಮತ್ತು ಎಮ್ಮೆಗಳ ಕುರಿತಾದಂತೆ ನಿರ್ಮಾಣಗೊಂಡಿರುವ ಮಿಥಕಗಳು ನಿಜವೇ ಹಾಗಿದ್ದರೆ? ಎಂಬ ಹುಡುಕಾಟನ್ನು ಗಂಭೀರವಾಗಿ ಮಾಡಬೇಕಾಗಿದೆ.

ಆಧುನಿಕ ಸಂದರ್ಭದಲ್ಲಿ 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದ ನಂತರ ಹಸು ಭಾರತದ ರಾಜಕಾರಣದ ಕೇಂದ್ರಸ್ಥಾನಕ್ಕೆ ಬಂದಿದೆ. ಆದರೆ ಅದಕ್ಕೂ ಮೊದಲು ಬುದ್ಧನ ಕಾಲದಲ್ಲಿ ಹಿಂಸಾ ವಿರೋಧಿ ಚಿಂತನೆಗಳು ಪ್ರಮುಖ ಪಾತ್ರವಹಿಸಿದ್ದವು. ಅಲ್ಲಿ ಎಲ್ಲ ರೀತಿಯ ಪ್ರಾಣಿ ಬಲಿಗಳನ್ನೂ ಹಿಂಸೆ ಎಂದು ವ್ಯಾಖ್ಯಾನಿಸಲಾಗಿತ್ತು. ಹಸುವಿನ ಐತಿಹಾಸಿಕ ಹಿನ್ನೆಲೆಯ ಕುರುಹುಗಳು ಮೊದಲೇ ಹೇಳಿದ ಹಾಗೆ ಸುಮಾರು 11 ರಿಂದ 13 ಸಾವಿರ ವರ್ಷಗಳ ಹಿಂದೆ ಮನುಷ್ಯನ ನೆಲೆವಾಸಕ್ಕೆ ಬಂದಿವೆ ಎಂಬುದನ್ನು ತಳಿ ವಿಜ್ಞಾನ ಮತ್ತು ಪುರಾತತ್ವ ಶಾಸ್ತ್ರಗಳು ಬಯಲುಗೊಳಿಸುತ್ತಿವೆ. ಕಾಡುದನಗಳನ್ನು ಪಳಗಿಸುವ ಮೊದಲ ಕೆಲಸಗಳನ್ನು ಇಂದಿನ ಉತ್ತರ ಇರಾನ್ ಮತ್ತು ಅನಟೋಲಿಯಾದ ಬಯಲುಗಳ ಕೃಷಿಕರು ಮಾಡಿದ್ದಾರೆ. ಅದಾದ ಸುಮಾರು ಒಂದು ಸಾವಿರ ವರ್ಷಗಳ ನಂತರ ಭಾರತ ಉಪ ಖಂಡದ ವ್ಯಾಪ್ತಿಯ ಜನರು ಹಸುವನ್ನು ಪಳಗಿಸಿದ್ದಾರೆ. ಪಶ್ಚಿಮ, ಮಧ್ಯ ಏಶ್ಯಗಳಲ್ಲಿ ಪಳಗಿಸಿದ ಹಸುಗಳ ತಳಿ ಬೇರೆ. ಭಾರತದ ಉಪಖಂಡದಲ್ಲಿ ಪಳಗಿಸಿದ ಹಸುಗಳ ತಳಿ ಬೇರೆ. ಹಸುಗಳಲ್ಲಿ ಮೂರು ತಳಿಗಳನ್ನು ಪ್ರಧಾನವಾಗಿ ಗುರುತಿಸುತ್ತಾರೆ. ಭಾರತ ಉಪಖಂಡದಲ್ಲಿ ವಿಕಾಸವಾದದ್ದನ್ನು ಬಾಸ್ ಇಂಡಿಕಸ್ ಅಥವಾ ಝೆಬು ಎಂದು ಕರೆಯಲಾಗುತ್ತದೆ. ಯುರೋಪು, ಪಶ್ಚಿಮ ಏಶ್ಯದಲ್ಲಿದ್ದುದನ್ನು ಬಾಸ್ ಟಾರಸ್ ಎಂದು ಗುರುತಿಸಲಾಗುತ್ತದೆ. ಇವೆರಡಕ್ಕೂ ಮೂಲ ರೂಪಿಯಾದ, ಭೂಮಿಯ ಮೇಲಿಂದಲೇ ಶಾಶ್ವತವಾಗಿ ಅಳಿದು ಹೋಗಿರುವ ಕಾಡುದನವನ್ನು ಬಾಸ್ ಪ್ರಿಮಿಜೀನಸ್ ಎನ್ನಲಾಗುತ್ತದೆ.

ಭಾರತದ ಈ ಝೆಬು ತಳಿಯ ಹೆಗಲ ಮೇಲೆ ಗೋಪುರವಿರುವುದು ಅದರ ವಿಶೇಷ. ಕೃಷಿಗೆ, ಸಾರಿಗೆಗೆ ಹೇಳಿ ಮಾಡಿಸಿದ ತಳಿ ಇದು. ಬಾಸ್ ಟಾರಸ್ ತಳಿ ಹಾಲು ಮತ್ತು ಮಾಂಸದ ಉದ್ದೇಶಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಸಿಂಧೂ ನಾಗರಿಕತೆ ಮತ್ತು ಮೆಹರಗಡದ ನಾಗರಿಕತೆಗಳಲ್ಲಿ ಗೋಪುರವಿರುವ ಹಸು ಎತ್ತುಗಳ ಕುರುಹುಗಳು ವ್ಯಾಪಕವಾಗಿವೆ. ಸುಮಾರು 9 ಸಾವಿರ ವರ್ಷಗಳಿಂದ 7 ಸಾವಿರ ವರ್ಷಗಳ ಮಧ್ಯದಲ್ಲಿ ತಲೆ ಎತ್ತಿ ಬಾಳಿದ ಇರಾನ್ ಮೂಲದ ಕೃಷಿಕರು ಸ್ಥಾಪಿಸಿದ ಮೆಹರಗಡ ನಾಗರಿಕತೆಯ ನಿವೇಶನಗಳಲ್ಲಿ ಹಸು, ಎಮ್ಮೆಗಳನ್ನು ಬಳಸಿ ಕೃಷಿ ಮಾಡಿರುವ ಮತ್ತು ಅವುಗಳನ್ನು ತಿಂದಿರುವ ರಾಶಿ ರಾಶಿ ಕುರುಹುಗಳನ್ನು ಪತ್ತೆ ಹಚ್ಚಲಾಗಿದೆ. ಇದನ್ನು ಆಧರಿಸಿಯೇ ಉಪಖಂಡದ ಪಶುಪಾಲನೆಯ ಚರಿತ್ರೆಯನ್ನು ವಿವರಿಸಲಾಗುತ್ತದೆ. ಇದರ ನಂತರ ಸಿಂಧೂ ಕಣಿವೆಯಲ್ಲಿ ಬಂಡಿಗಳಿಗೆ ಹೂಡಿರುವ ಎತ್ತುಗಳ ಚಿತ್ರಗಳಿವೆ. ದಕ್ಷಿಣದಲ್ಲಿ 2,500 ವರ್ಷಗಳ ಹಿಂದೆ ರಚಿತವಾದವೆಂದು ಹೇಳಲಾಗುವ ಸಂಗಂ ಸಾಹಿತ್ಯದಲ್ಲಿ ಜಲ್ಲಿಕಟ್ಟುವಿನ ಬಗ್ಗೆ ವರ್ಣಿಸಲಾಗಿದೆ. ಗುಣವಾಚಕವಾಗಿ ಕೃಷ್ಣನ ಹೆಸರು ಬಳಕೆಯಾಗುವುದೂ ಅಲ್ಲಿಯೇ.

ಹಸುಗಳ ಉಗಮ ಮತ್ತು ವಿಕಾಸದ ಕುರಿತು ಆಂಡ್ರ್ಯೂ ರಿಮಾಸ್ ಎಂಬ ಬೋಸ್ಟನ್ನಿನ ಪತ್ರಕರ್ತ ಮತ್ತು ಇವಾನ್ ಫ್ರೇಸರ್ ಎಂಬ ಇಂಗ್ಲೆಂಡ್ ಮೂಲದ ವಿಜ್ಞಾನಿ ಇಬ್ಬರೂ ಸೇರಿ ‘‘ಬೀಫ್- ದ ಅನ್ಟೋಲ್ಡ್ ಸ್ಟೋರಿ ಆಫ್ ಹೌ ಮಿಲ್ಕ್, ಮೀಟ್, ಆ್ಯಂಡ್ ಮಸಲ್ ಶೇಪ್ಡ್ ದ ವರ್ಲ್ಡ್-2008’’ ಎಂಬ ಕೃತಿಯನ್ನು ರಚಿಸಿದ್ದಾರೆ. ಇವರು ಜಗತ್ತಿನ ವಿಶಿಷ್ಟ ಹುಡುಕಾಟದ ಸುಮಾರು 200 ಕ್ಕೂ ಹೆಚ್ಚು ಕೃತಿಗಳನ್ನು ಅಧ್ಯಯನ ಮಾಡಿದ್ದಾರೆ. ದನ ಕರುಗಳ ವಿಕಾಸ ಮತ್ತು ಹಸು ರಾಜಕಾರಣಕ್ಕೆ ಸಂಬಂಧಿಸಿದಂತೆ ಅಮೂಲ್ಯ ಕೃತಿ ಇದು.

ಕಾಡು ದನಗಳ ಕಡೆಯ ತಳಿ ಈ ಭೂಮಿಯ ಮೇಲೆ ಕ್ರಿ.ಶ.1627ರವರೆಗೆ ಇದ್ದುದರ ಕುರಿತು ದಾಖಲೆಗಳಿವೆ. ಸುಮಾರು 1.7 ಮೀಟರ್ ಎತ್ತರದ, ಭೀಕರಾಕಾರದ ಕೊಂಬಿನ ಕಾಡುದನ ಮಧ್ಯ ಪೋಲೆಂಡಿನಲ್ಲಿದ್ದುದರ ದಾಖಲೆಗಳಿವೆ. ಅಲ್ಲಿಂದಾಚೆಗೆ ಅದು ಶಾಶ್ವತವಾಗಿ ಕಣ್ಮರೆಯಾಗಿದೆ. ಮನುಷ್ಯರ ಇತಿಹಾಸದಲ್ಲಿ ಹಸುಗಳ ಆಗಮನವಾಗದಿದ್ದರೆ ಬಹುಶಃ ಇಂದಿನ ಮಟ್ಟಿಗಿನ ಪ್ರಗತಿ ಸಾಧ್ಯವಾಗುತ್ತಿರಲಿಲ್ಲ. ಮನುಷ್ಯರ ಜನಸಂಖ್ಯೆ ಹೆಚ್ಚಳಕ್ಕೂ ಹಸುವನ್ನು ಪಳಗಿಸಿರುವುದಕ್ಕೂ ನೇರಾ ನೇರ ಸಂಬಂಧವಿದೆ. ದನಕರುಗಳ ಮೊದಲ ಚಿತ್ರಗಳನ್ನು ಸುಮಾರು 17 ಸಾವಿರ ವರ್ಷಗಳ ಹಿಂದೆ ಫ್ರಾನ್ಸಿನ ಗುಹೆಗಳ ಮೇಲೆ ಶಿಲಾಯುಗದ ಮನುಷ್ಯರು ರಚಿಸಿದ್ದಾರೆ. ಬಹುಶಃ ಆಗಿನಿಂದಲೇ ಅವುಗಳನ್ನು ಪಳಗಿಸುವುದಕ್ಕೆ ಉತ್ಸುಕತೆ ತೋರಿದ್ದರೇನೋ. ಸುಮಾರು 15-20 ಲಕ್ಷ ವರ್ಷಗಳ ಹಿಂದೆ ವಿಕಾಸವಾದ ಕಾಡುದನಗಳು ನಂತರ ಜಗತ್ತಿನ ಬೇರೆ ಬೇರೆ ಭೂ ಭಾಗಗಳಲ್ಲಿ ಹರಡಿಕೊಂಡಿವೆ. ಇವುಗಳನ್ನು ಕೃಷಿಯ ಅನ್ವೇಷಣೆ ಮತ್ತು ವಿಕಾಸದವರೆಗೂ ಮಾಂಸದ ಉದ್ದೇಶಕ್ಕೆ ಮಾತ್ರ ಬೇಟೆಯಾಡುತ್ತಿದ್ದ ಮನುಷ್ಯರು ನಂತರ ವಿವಿಧ ಉದ್ದೇಶಕ್ಕೆ ಬಳಸಲಾರಂಭಿಸಿದ್ದಾರೆ.

ಆಶ್ಚರ್ಯವೆಂದರೆ ಮನುಷ್ಯರು ಹಸುಗಳ ಹಾಲು ಕುಡಿಯುವುದನ್ನು ಪ್ರಾರಂಭಿಸಿ ಸುಮಾರು ಮೂರರಿಂದ ಮೂರೂವರೆ ಸಾವಿರ ವರ್ಷಗಳಾಗಿರಬಹುದು ಅಷ್ಟೆ ಎಂದು ತಳಿ ವಿಜ್ಞಾನ ಹೇಳುತ್ತಿದೆ. ಹೊಲಗದ್ದೆಗಳಲ್ಲಿ ದುಡಿಯಲು, ಸರಕುಗಳನ್ನು ಸಾಗಿಸಲು ಮತ್ತು ಮಾಂಸದ ಉದ್ದೇಶಗಳಿಗೆ ಬಳಸಲಾಗುತ್ತಿದ್ದ ದನ ಕರುಗಳು ಮನುಷ್ಯರನ್ನು ನಿಧಾನಕ್ಕೆ ಹೈನಿನ ಕಡೆಗೆ ತಿರುಗಿಸಿದವು. ಮನುಷ್ಯರ ದೇಹದೊಳಕ್ಕೆ ಹೊಸ ಆಹಾರವೊಂದು ಬಂದಾಗ ಅದು ಸೃಷ್ಟಿಸುವ ಅಲ್ಲೋಲ ಕಲ್ಲೋಲಗಳನ್ನು ಊಹಿಸಲಾಗದು. ಲಕ್ಷಾಂತರ ವರ್ಷಗಳಿಂದ ವಿಕಾಸವಾಗಿ ರೂಢಿಗತ ಜಾಡಿಗೆ ಬಿದ್ದಿದ್ದ ಮನುಷ್ಯರ ಹೊಟ್ಟೆಯೊಳಗಿನ ಕಿಣ್ವಗಳು ತಾಯಿಯ ಹಾಲಿಗೆ ಹೊರತಾದ ಹೊಸ ರೀತಿಯ ಹಾಲನ್ನು ಜೀರ್ಣಿಸಿಕೊಳ್ಳಲು ವಿಪರೀತ ಸಂಘರ್ಷ ನಡೆಸಿರಬೇಕು. ಪುರಾತತ್ವ ಶಾಸ್ತ್ರದಲ್ಲಿ ಮೊದಲಿಗೆ ಹಾಲು ಕುಡಿದ ಯುರೋಪಿನ ಜನರನ್ನು ಬೆಲ್ ಬೀಕರ್ ಸಂಸ್ಕೃತಿಯವರು ಎನ್ನಲಾಗುತ್ತದೆ. ಹೊಸದಾಗಿ ದೊರೆತ ಪ್ರೋಟಿನಿನಿಂದಾಗಿ ಮನುಷ್ಯರ ದೇಹ ರಚನೆ ಮತ್ತು ಸಾಮಾಜಿಕ ರಚನೆಯಲ್ಲಿ ಅಪಾರ ಬದಲಾವಣೆಗಳಾಗಿವೆ.

ಕೃಷಿಯಿಂದಾಗಿ ತುಸು ಮಟ್ಟಿಗೆ ಖಾತ್ರಿಯಾದ ಆಹಾರ ಸಿಕ್ಕ ಕಾರಣ ಜನರ ಸಂಖ್ಯೆ ಹೆಚ್ಚಾಗಲಾರಂಭಿಸಿತ್ತು ಇದರ ನಡುವೆ ಹಾಲನ್ನು ಕುಡಿಯಲು ಪ್ರಾರಂಭಿಸಿದ್ದರಿಂದ ಹೆಂಗಸರ ಸಂತಾನೋತ್ಪತ್ತಿಯ ಅವಧಿ ದೀರ್ಘವಾಯಿತು ಮತ್ತು ಹೆಚ್ಚು ಮಕ್ಕಳನ್ನು ಹಡೆಯಲು ಕಾರಣವಾಯಿತು. ಕೊಬ್ಬು ಮತ್ತು ಪ್ರೊಟೀನುಗಳು ಮನುಷ್ಯರ ಫಲವತ್ತತೆಯನ್ನು ಹೆಚ್ಚಿಸಿದವು. ಇದನ್ನೆಲ್ಲ ಪತ್ತೆ ಹಚ್ಚಲು ತಳಿ ವಿಜ್ಞಾನಿಗಳು ಲ್ಯಾಕ್ಟೋಸ್ ಮ್ಯುಟೇಶನ್ನುಗಳ ಕುರಿತು ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನಗಳು ಹಾಲು ಕುಡಿದ ನಂತರ ಮನುಷ್ಯರ ನಿರ್ದಿಷ್ಟ ಜೀನುಗಳು ರೂಪಾಂತರವಾಗಿರುವ ಕತೆಯನ್ನು ಹೇಳುತ್ತಿವೆ.

ಚಕ್ರ ಮತ್ತು ಬಂಡಿಗಳನ್ನು ಕಂಡು ಹಿಡಿಯುವ ಮೊದಲೇ ಎತ್ತುಗಳನ್ನು ಸರಕು ಸಾಗಣೆಗೆ ಬಳಸಿದ್ದಾರೆ. ಒಂಟೆ, ಕುದುರೆಗಳನ್ನು ಮನುಷ್ಯ ಪಳಗಿಸಿದ್ದು ಸಹ ಬಹಳ ಇತ್ತೀಚೆಗೆ. ತಾಮ್ರಯುಗ ಪ್ರಾರಂಭವಾದ ಮೇಲೆ ಮಾತ್ರ ಮೆಸಪೊಟೇಮಿಯಾದ ಬಯಲುಗಳಲ್ಲಿ ಪಟ್ಟಿಗಳುಳ್ಳ ಚಕ್ರಗಳ ಗಾಡಿಗಳ ಅನ್ವೇಷಣೆ ಆರಂಭವಾಗುತ್ತದೆ. ಚಕ್ರ ಮತ್ತು ಎತ್ತುಗಳನ್ನು ಮೊದಲಿಗೆ ಪರ್ಶಿಯಾದ ಬಯಲುಗಳಲ್ಲಿ ರಾಟೆ ಮತ್ತು ಏತದ ಬಾವಿಗಳಿಂದ ನೀರನ್ನೆತ್ತಲೂ ಸಹ ಬಳಸಲಾರಂಭಿಸಿದ್ದಾರೆ. ಯುಫ್ರೆಟಿಸ್ ನದಿಯಲ್ಲಿ ನೀರಿನ ಅಭಾವ ಶುರುವಾದ ಮೇಲೆ, ಹಿಂದೆ ಸ್ವರ್ಗ ಎಂದು ಕರೆಯಲಾಗುತ್ತಿದ್ದ ಲೆವಾಂಟ್ ಸಿರಿಯಾ, ಟರ್ಕಿ, ಇಸ್ರೇಲ್, ಫೆಲೆಸ್ತೀನ್, ಲೆಬನಾನ್ ಮುಂತಾದ ಪ್ರದೇಶಗಳ ಜನರು ನಿಧಾನಕ್ಕೆ ಜಗತ್ತಿನ ವಿವಿಧ ಭಾಗಗಳಿಗೆ ಮುಗಿಲ ಮಿಂಚು ಮತ್ತು ಹಸಿರನ್ನು ಹುಡುಕಿಕೊಂಡು ಹೊರಟರು. ಇವರ ಹಾಗೆಯೇ ಸ್ಟೆಪ್ಪಿ ಮತ್ತು ಯಾಮ್ನಾಯ ಪ್ರದೇಶದ ನಗರ ಸಂಸ್ಕೃತಿ ವಿರೋಧಿ ಪಶುಪಾಲಕರು ಮಳೆ ಕಡಿಮೆಯಾಗಿದ್ದರಿಂದ, ತುರು ಮಂದೆ ಹೆಚ್ಚಿದ್ದರಿಂದ ಕುದುರೆಗಳೊಂದಿಗೆ ಹಸು, ಕುರಿ, ಮೇಕೆ, ನಾಯಿಗಳನ್ನು ಕರೆದುಕೊಂಡು ಹೊರಟರು. ನೀರಿಗೆ, ಮೇವಿಗೆ ಅಡ್ಡಿ ಮಾಡಿದವರ ಮೇಲೆ ಬಿದ್ದರು. ಈ ಹೊಸ ಪ್ರಯಾಣದ ಹಾದಿಯಲ್ಲಿ ಇಷ್ಟ ದೇವತೆಗಳಿಗೆ, ಆಪ್ತರಿಗೆ ಹೋರಿಗಳನ್ನು ಬಲಿ ಕೊಡುವುದು, ಬೇರೆ ಬುಡಕಟ್ಟುಗಳ ರಾಸುಗಳನ್ನು ಕದಿಯುವುದು ಮಾಡಿದ್ದಾರೆ. ಮನರಂಜನೆಗೆ ಈ ನಡುವೆ ಗೂಳಿ ಕಾಳಗಗಳನ್ನೂ ಪ್ರಾರಂಭಿಸಿದ್ದಾರೆ.

ದೇವತೆಗಳಿಗೆ ಹೋರಿಗಳನ್ನು ಬಲಿಕೊಡುವ ಪದ್ಧತಿ ಲೆವಾಂಟ್, ಮೆಸಪೊಟೇಮಿಯಾದ ಬಯಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. ‘ಮಿತ್ರ’ ಪರಂಪರೆಯಲ್ಲಿ ಹೋರಿ ಬಲಿ ಪ್ರಧಾನವಾಗಿದೆ. ಮಿತ್ರನೆಂಬಾತ ಹೋರಿಗಳನ್ನು ಕೊಲ್ಲುವವನು, ದನಗಳ್ಳ ಮತ್ತು ಸೂರ್ಯ ದೇವತೆ ಎಂದು ವರ್ಣಿಸಲಾಗಿದೆ. ಗೋಪುರವಿಲ್ಲದ ಹೋರಿಯನ್ನು ಕೊಲ್ಲುತ್ತಿರುವ ಚಿತ್ರಗಳು ಪುರಾತನ ಯುಫ್ರೆಟಿಸ್ ನದಿ ಬಯಲುಗಳಲ್ಲಿ ವ್ಯಾಪಕವಾಗಿ ದೊರೆಯುತ್ತವೆ. ಮಿತ್ರನಿಗಾಗಿ ಹೋರಿಯನ್ನು ಬಲಿಕೊಡುತ್ತಿರುವ ಚಿತ್ರದಲ್ಲಿ ಹಿಂಬದಿಯಲ್ಲಿ ಸೂರ್ಯ ಚಂದ್ರರಿದ್ದಾರೆ. ಸತ್ತ ಹೋರಿಯ ಮೇಲೆ ನಾಯಿ, ಹಾವು ಮತ್ತು ಚೇಳು ದಾಳಿ ಮಾಡಿರುವ ಚಿತ್ರಗಳಿವೆ. ಈ ಮಿತ್ರಾ ಪರಂಪರೆಯು ನಿಧಾನಕ್ಕೆ ಯುರೋಪಿನ ಭಾಗಗಳಿಗೆ ಹರಿದುಕೊಂಡು ಹೋಗಿದೆ. ಓಸ್ಟಿಯೊ ಮತ್ತು ರೋಮ್ ನಗರದ ಅಂಚುಗಳಲ್ಲಿ ನೂರಾರು ಗುಡಿಸಲುಗಳಲ್ಲಿ ಮಿತ್ರಾ ದೇವತೆಯ ದೇವಸ್ಥಾನಗಳಿದ್ದುದನ್ನು ದಾಖಲೆಗಳು ವಿವರಿಸುತ್ತವೆ. ಬಲಶಾಲಿ ಮತ್ತು ಧೈರ್ಯಶಾಲಿಯಾದ ಹುಡುಗರು ಈ ಪರಂಪರೆಯ ಆಚರಣೆಗಳಲ್ಲಿ ತೊಡಗುತ್ತಿದ್ದುದರ ಉಲ್ಲೇಖಗಳಿವೆ.ಭಾರತ ಉಪಖಂಡದಲ್ಲಿ ಬರುವ ಬೌದ್ಧ್ದರ ಮಿತ್ರನು ಅಹಿಂಸಾವಾದಿ. ಶಾಂತಿ ಪ್ರೀತಿಗಳ ಪರಮ ಪ್ರೇಮಿ.

ಪುರಾತತ್ವಶಾಸ್ತ್ರದ ದಾಖಲೆಗಳಂತೆ ಕಾಡುದನಗಳ ವಿಕಾಸ ಭಾರತದ ಉಪಖಂಡದಲ್ಲೇ ಆಗಿದೆ. ಸುಮಾರು 15-20 ಲಕ್ಷ ವರ್ಷಗಳ ಹಿಂದೆ ಅವು ವಿಕಾಸ ಹೊಂದಿವೆ. ನೀರು, ಆಹಾರಗಳಿಗೆ ನಿರಂತರ ವಲಸೆ ಹೋಗುತ್ತಿದ್ದ ಅವುಗಳು ವಿವಿಧ ಭೂಪ್ರದೇಶಗಳಿಗೆ ಚಲಿಸಿವೆ. ನಂತರದ ಅವಧಿಯಲ್ಲಿ ಅವುಗಳನ್ನು ಕೊಂದು ತಿನ್ನುವ, ಕೃಷಿಗೆ ಪಳಗಿಸುವ ಮನುಷ್ಯರ ಸಂಖ್ಯೆ ಹೆಚ್ಚಿದಂತೆಲ್ಲ ಅವುಗಳ ಅವನತಿ ವೇಗವಾಗಿ ಪ್ರಾರಂಭವಾಗಿದೆ. ಕಳೆದ ಎರಡು ಸಾವಿರ ವರ್ಷಗಳಲ್ಲಿ ಹಾಲು, ಬೆಣ್ಣೆಯ ಉದ್ಯಮದಲ್ಲೂ ಇವು ಪಾತ್ರ ವಹಿಸಿವೆ. ಉತ್ತರ ಇರಾನಿನಿಂದಾಚೆಗೆ ಬಾಸ್ ಟಾರಸ್ ತಳಿ ವಿಕಾಸ ಹೊಂದಿದಂತೆಯೇ ಭಾರತದ ಉಪಖಂಡದಲ್ಲಿ ಝೆಬು ತಳಿಯೂ ವಿಕಾಸವಾಗಿದೆ. ಈ ತಳಿ ಸಿಂಧೂ, ಮೆಹರಗಡದಿಂದ ಹಿಡಿದು ದಕ್ಷಿಣದ ತುದಿಯವರೆಗೆ ವ್ಯಾಪಿಸಿಕೊಂಡಿದೆ. ಇಂದು ನಮ್ಮಲ್ಲಿರುವ ಅಮೃತಮಹಲ್, ಹಳ್ಳಿಕಾರ್, ನಂದ್ಯಾಲ, ಕಿಲಾರಿ ಮುಂತಾದ ತಳಿಗಳೆಲ್ಲವೂ ಇಲ್ಲೇ ವಿಕಾಸ ಹೊಂದಿದ್ದ ಕಾಡುದನಗಳಿಂದ ಹುಟ್ಟಿದ ತಳಿಗಳು. ಝೆಬು ಮತ್ತು ಟಾರಸ್ ತಳಿಗಳು 15 ಸಾವಿರ ವರ್ಷಗಳ ಹಿಂದೆ ಬೆರೆತು ಹೋದ ಕುರುಹುಗಳಿವೆ. ಮಧ್ಯ ಏಶ್ಯ, ಪಶ್ಚಿಮ ಏಶ್ಯದ ಭೂ ಭಾಗಗಳಲ್ಲಿ ಪ್ರಾರಂಭವಾಗಿ ವಿಕಾಸವಾದ ಕೃಷಿ ಮತ್ತು ಪಶುಪಾಲನೆಗಳು ನಿಧಾನಕ್ಕೆ ಜಗತ್ತಿನ ಅನೇಕ ಭೂಭಾಗಗಳಿಗೆ ವಿಸ್ತರಿಸಿಕೊಂಡಿದೆ. ಅದರಲ್ಲೂ ಚೀನಾ, ಭಾರತ, ಆಫ್ರಿಕಾ, ಯುರೋಪುಗಳಿಗೆ ಯಮವೇಗದಲ್ಲಿ ಹರಡಿಕೊಂಡಿದೆ.

ಆಶ್ಚರ್ಯವೆಂದರೆ ಮನುಷ್ಯರು ಹಸುಗಳ ಹಾಲು ಕುಡಿಯುವುದನ್ನು ಪ್ರಾರಂಭಿಸಿ ಸುಮಾರು ಮೂರರಿಂದ ಮೂರೂವರೆ ಸಾವಿರ ವರ್ಷಗಳಾಗಿರಬಹುದು ಅಷ್ಟೆ ಎಂದು ತಳಿ ವಿಜ್ಞಾನ ಹೇಳುತ್ತಿದೆ. ಹೊಲಗದ್ದೆಗಳಲ್ಲಿ ದುಡಿಯಲು, ಸರಕುಗಳನ್ನು ಸಾಗಿಸಲು ಮತ್ತು ಮಾಂಸದ ಉದ್ದೇಶಗಳಿಗೆ ಬಳಸಲಾಗುತ್ತಿದ್ದ ದನ ಕರುಗಳು ಮನುಷ್ಯರನ್ನು ನಿಧಾನಕ್ಕೆ ಹೈನಿನ ಕಡೆಗೆ ತಿರುಗಿಸಿದವು.

ಹಾಗಿದ್ದರೆ ಭಾರತದ ಉಪಖಂಡದಲ್ಲಿದ್ದ ಪಶುಪಾಲಕರು ಮತ್ತು ಸ್ಟೆಪ್ಪಿಯಿಂದ ಬಂದ ಪಶುಪಾಲಕರು ಒಂದೇ ಗುಂಪಿನವರೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂದೇ ಹೇಳಬಹುದು. ಈ ಪ್ರಶ್ನೆಗೆ ಉತ್ತರವನ್ನು ನೀಡಲು ತಳಿ ವಿಜ್ಞಾನ, ಭಾಷಾಶಾಸ್ತ್ರ, ಪುರಾತತ್ವಶಾಸ್ತ್ರಗಳಲ್ಲಿ ಅಪಾರ ಮಾಹಿತಿ ಇದೆ. ಮೆಸಪೊಟೇಮಿಯ ಮತ್ತು ಸಿಂಧೂ ಕಣಿವೆಯ ಜನರ ನಡುವೆ ಸುಮಾರು 10 ಸಾವಿರ ವರ್ಷಗಳ ಹಿಂದೆಯೇ ಸಂಬಂಧವಿದ್ದುದರ ಕುರಿತು ಡೇವಿಡ್ ಮೆಕಾಲ್ಪಿನ್ ಬರೆಯುತ್ತಾರೆ. ಆದಿ ದ್ರಾವಿಡ ಮತ್ತು ಆದಿ ಎಲಾಮೊ ಭಾಷೆಗಳ ಬುಡಕಟ್ಟು ಜನರುಗಳು ಸೇರಿಯೇ ಈ ಎರಡು ವಿಶಿಷ್ಟ ನಗರ ಸಂಸ್ಕೃತಿಗಳನ್ನು ಕಟ್ಟಿ ಸುಮಾರು 7 ಸಾವಿರ ವರ್ಷಗಳ ಕಾಲ ಜಗತ್ತಿಗೆ ಬೆಳಕಿನ ದಾರಿ ತೋರಿದ್ದರು. ಪೂರ್ವ ಇರಾನಿನ ಝಾಗ್ರೋಸ್ ಬೆಟ್ಟ ತಪ್ಪಲುಗಳಲ್ಲಿದ್ದ ಆದಿ ಎಲಾಮೊ ಬುಡಕಟ್ಟುಗಳ ಭಾಷೆಗೂ ಆದಿ ದ್ರಾವಿಡ ಭಾಷೆಗೂ ಇರುವ ಅಗಾಧ ಸಾಮ್ಯತೆಗಳನ್ನು ಮೆಕಾಲ್ಪಿನ್ ಮುಂತಾದ ಪ್ರಾಕ್ತನ ಭಾಷಾಶಾಸ್ತ್ರಜ್ಞರು ಗುರುತಿಸಿ ಪಟ್ಟಿ ಮಾಡಿದ್ದಾರೆ. ಮೂಲದಲ್ಲಿ ಈ ಎರಡೂ ಬುಡಕಟ್ಟುಗಳು ಒಂದೇ ಆಗಿರಬೇಕು ಅಥವಾ ಈ ಎರಡು ಪ್ರದೇಶಗಳ ನಡುವೆ ವಿಶಿಷ್ಟ ಸಂಬಂಧವಿರಬೇಕು. ಬ್ರಾಹುಇಯಂತಹ ಆದಿದ್ರಾವಿಡ ಭಾಷೆಗಳು ಈ ಎರಡು ಸಂಸ್ಕೃತಿಗಳ ಮಧ್ಯದಲ್ಲಿ ಉಳಿದುಕೊಂಡಿರುವುದಕ್ಕೆ ಹಲವು ಕಾರಣಗಳಿರಬಹುದು. ಮೊದಲೇ ಹೇಳಿದ ಹಾಗೆ ಇಂದಿನ ಭಾರತದ ನೆಲಕ್ಕೆ ಕುದುರೆಯ ಆಗಮನವಾಗಿ ಕೇವಲ 4,000 ವರ್ಷಗಳಾಗಿವೆ ಅಷ್ಟೆ. ಕುದುರೆಯ ಜೊತೆ ಬಂದ ಸ್ಟೆಪ್ಪಿ ಮೂಲದ ವೇದದ ಜನರಿಗೂ ಭಾರತದ ಮೂಲ ಪಶುಪಾಲಕ ಸಮುದಾಯಗಳಿಗೂ ಸಂಘರ್ಷಗಳು ನಡೆದಿವೆ. ಇಂಡೋ ಆರ್ಯನ್ ಭಾಷೆ ಸಿಂಧೂ ಸಂಸ್ಕೃತಿಗೆ ಮೊದಲು ಉಪಖಂಡದಲ್ಲಿ ಕಾಣಸಿಗುವುದಿಲ್ಲ. ಆದರೆ ತುಸು ಮಟ್ಟಿಗೆ ಇಂಡೋ ಇರಾನಿಯನ್ ಜನರ ಜೀನುಗಳ ಮಿಶ್ರಣ ನಡೆದಿದೆಯೆಂದು ಡೇವಿಡ್ ರೈಖ್ ಮುಂತಾದ ತಳಿವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಪ್ರಾಚೀನ ಇರಾನಿನ ಜನರಲ್ಲಿ ಆಗಲೆ ಸಿಂಧೂ- ಮೆಹರಗಡ ಸಂಸ್ಕೃತಿಗಳು ಪ್ರಾರಂಭವಾಗುವ ಮೊದಲೇ ಝಾಗ್ರೋಸ್ ಬೆಟ್ಟ ತಪ್ಪಲಿನ ಎಲಮೊ ಬುಡಕಟ್ಟು ಜನರ ಮತ್ತು ಮಧ್ಯ ಕಾಕಸಸ್ ಬೆಟ್ಟ ತಪ್ಪಲಿನ ಜನರ ಜೀನುಗಳ ಮಿಶ್ರಣಗಳೂ ನಡೆದಿದ್ದವೆಂದು ವಿಜ್ಞಾನ ಹೇಳುತ್ತದೆ.

ದಾಖಲೆ, ಪುರಾವೆಗಳು ಹೀಗಿರುವಾಗ ರೊಮಿಲಾ ಥಾಪರ್ ಮುಂತಾದವರು ಹಿಂದುಳಿದ ಆರ್ಯ ಬುಡಕಟ್ಟುಗಳು ಪಶುಪಾಲನೆಯನ್ನು ಆರಿಸಿಕೊಂಡವು ಎಂದು ಬಿಡುತ್ತಾರೆ. ಈ ವಾದ ಮುಂದೆ ಹಸು ಸಾಕುವ ಜನರೆಲ್ಲರೂ ಸ್ಟೆಪ್ಪಿಯಿಂದ ಬಂದವರೆಂಬ ತಿಳುವಳಿಕೆಯತ್ತ ತಿರುಗಿಸದ ಹಾಗೆ ಕಾಣುತ್ತದೆ.

ಮಹಾಭಾರತದಲ್ಲಿ ಅಭೀರ, ಅನರ್ತ, ಹೈಹಯ, ಕೊಲ್ಲ, ಅಂಧಕ-ವೃಷ್ಣಿ ಮುಂತಾದ ಸುಮಾರು 17 ಬುಡಕಟ್ಟುಗಳು ಭಾಗವಹಿಸಿದ ವಿವರಗಳಿವೆಯೆಂದು ಕೆ. ಸಿ.ಮಿಶ್ರಾ, ರಾಬರ್ಟ್ ಶಫರ್ ಮುಂತಾದವರು ಪ್ರಸ್ತಾಪಿಸುತ್ತಾರೆ. ಇವು ಉತ್ತರ, ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಹೆಚ್ಚು ಕೇಂದ್ರೀಕೃತವಾದ ಹಾಗೆ ಕಾಣುತ್ತದೆ. ಅಭೀರ ಬುಡಕಟ್ಟಿನ ಬಲರಾಮ ಮದುವೆಯಾದ ರೇವತಿಯು ಪಶ್ಚಿಮದ ಬುಡಕಟ್ಟಿನವಳು. ಬುದ್ಧ ಪೂರ್ವ ಕಾಲದಿಂದಲೂ ಪಶುಪಾಲಕರು ಯಮುನೆಯಿಂದ ಹಿಡಿದು ಕುಂತಲ ದೇಶವೆಂದು ಕರೆಯುತ್ತಿದ್ದ ಧಾರವಾಡ, ಬಳ್ಳಾರಿ ಗಡಿಗಳನ್ನು ದಾಟಿ ಚಿತ್ರದುರ್ಗ ಸೀಮೆಯವರೆಗೂ ಪ್ರಯಾಣಿಸುತ್ತಿದ್ದ ವಿವರಗಳಿವೆ. ಭಾರತದ ಪಶುಪಾಲಕರಲ್ಲಿ ಕ್ಷತ್ರಿಯರು, ವಣಿಕ ಸಮುದಾಯಕಾಯಸ್ಥರೂ ಸೇರಿದಂತೆಗಳು, ಬ್ರಾಹ್ಮಣ- ಕ್ಷತ್ರಿಯ-ಅಸುರರ ಸಮಾಗಮದಿಂದ ಹುಟ್ಟಿದ ಶೂದ್ರರು, ಶಂಬರರು, ಭಿಲ್ಲ, ಮುಂಡ ಮುಂತಾದ ಪ್ರಾಚೀನ ಬುಡಕಟ್ಟು ಜನರೆಲ್ಲ ಇದ್ದಾರೆ. ಶಂಬರರು, ಪಣಿಗಳು, ದಸ್ಯುಗಳು, ಅಸುರರು ಮತ್ತು ಅಹೀರರ ವಿರುದ್ಧ ಸ್ಟೆಪ್ಪಿ ಪಶುಪಾಲಕರು ಅಥವಾ ವೇದ ಸಂಸ್ಕೃತಿಯನ್ನು ತಂದ ಜನರು ಸಂಘರ್ಷ ಸಾರಿದಂತೆ ವರ್ತಿಸಿದ್ದಾರೆ. ಆದರೆ ಮಹಾಭಾರತದ ಕಾಲಕ್ಕೆ ಇವರುಗಳ ನಡುವೆ ಸಾಮರಸ್ಯಗಳು ನಡೆದಂತೆ ಕಾಣುತ್ತದೆ. ಬುದ್ಧನ ಕಾಲದ ಹೊತ್ತಿಗೆ ಆರ್ಯಾವರ್ತದಲ್ಲಿ ಇಂದ್ರ ಸಂಸ್ಕೃತಿ ಅವಸಾನ ಹೊಂದಲಾರಂಭಿಸಿತ್ತು. ಇಂದ್ರ, ವರುಣ, ನಾಸತ್ಯ ಮತ್ತು ಮಿತ್ರ ಪರಂಪರೆಯ ಜನರು ವ್ಯಾಪಕವಾಗಿ ಇಲ್ಲಿನ ಮೊದಲ ನಿವಾಸಿಗಳ ಜೊತೆ ಬೆರೆತು ಸಂತಾನ ಪಡೆದ ಹಾಗೆ ಕಾಣುತ್ತದೆ. ಕೃಷ್ಣ ಸಂಸ್ಕೃತಿಯಲ್ಲೂ ಸಾಮರಸ್ಯಗಳು ಯಥೇಚ್ಛವಾಗಿ ಕಾಣುತ್ತವೆ. ಆದರೆ ಇಂದ್ರನ ಉಪಭೋಗ ಸಂಸ್ಕೃತಿಗೆ ಕೃಷ್ಣ ಸಂಸ್ಕೃತಿ ಪರ್ಯಾಯವಾಗುವುದನ್ನು ಭಾಗವತ ಪರಂಪರೆ ವಿವರಿಸುತ್ತದೆ ಇದನ್ನು ಲೋಹಿಯಾ ಮುಂತಾದ ವಿದ್ವಾಂಸರುಗಳು ಸೂಕ್ಷ್ಮವಾಗಿ ಗ್ರಹಿಸಿದ್ದಾರೆ. ಆದರೆ ಈ ಎರಡೂ ಸಂಸ್ಕೃತಿಗಳಿಗೆ ಸೇರಿದ ವಾರಸುದಾರರು ಜಾತಿ ವ್ಯವಸ್ಥೆ ಮತ್ತು ಅಸ್ಪಶ್ಯತೆಯನ್ನು ಪ್ರಾರಂಭಿಸಿದ್ದು ದುರಂತದ ಸಂಗತಿ. ಕೃಷ್ಣ ಜಾತಿಯನ್ನು ಮತ್ತು ಅಸ್ಪಶ್ಯತೆಯನ್ನು ಆಚರಿಸಿದ್ದರ ಕುರಿತು ಕುರುಹುಗಳು ಸಿಗುವುದಿಲ್ಲ. ಆತ ಅರಮನೆ ಸಂಸ್ಕೃತಿಯನ್ನು ಸಮರ್ಥಿಸಿದ ದಾಖಲೆಗಳೂ ಇಲ್ಲ. ಆದರೆ ಪುರುಷಾಧಿಪತ್ಯವನ್ನು ಸಮರ್ಥಿಸಿದ ಎಂಬ ಚರ್ಚೆಗಳನ್ನು ಅನೇಕ ಇತಿಹಾಸಕಾರರು ಮಾಡಿದ್ದಾರೆ. ಮಾತೃ ಮೂಲದ ಸಂಸ್ಕೃತಿಯನ್ನು ದಮನಿಸಿ ಪಿತೃಮೂಲದ ಸಂಸ್ಕೃತಿಯನ್ನು ಸ್ಥಾಪಿಸಿದ್ದರ ಕುರಿತು ಕೊಶಾಂಬಿ ಮಿಥ್ ಆ್ಯಂಡ್ ರಿಯಾಲಿಟಿ ಕೃತಿಯಲ್ಲಿ ದಾಖಲಿಸುತ್ತಾರೆ. ಹಾಗಾಗಿಯೇ ಕಂಸ ಮುಂತಾದವರ ವಧೆಯ ಪ್ರಸಂಗಗಳು ನಿರ್ವಚನಗೊಂಡಿವೆ. ಕಂಸನಿಗೂ ಸೋದರಿಯ ಹೊಟ್ಟೆಯಲ್ಲಿ ಮಕ್ಕಳು ಹುಟ್ಟುವುದು ಬೇಡ. ಅಳಿಯ ಸಂತಾನ ಸಂಸ್ಕೃತಿಯಲ್ಲಿ ತಾಯಿಯ ಸೋದರನದೇ ಯಜಮಾನಿಕೆ. ಅದನ್ನು ಇಲ್ಲವಾಗಿಸುವ ಪ್ರಯತ್ನದ ಭಾಗವಾಗಿ ಕೃಷ್ಣ, ಕಂಸ ಸಂಘರ್ಷಗಳು ನಡೆದಿವೆ ಎಂಬುದು ಕೊಶಾಂಬಿಯವರ ವ್ಯಾಖ್ಯಾನ.

(ಮುಂದುವರಿಯುವುದು)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top