-

ಸಿಡ್ನಿ ಪಾಯ್ಟಿಯರ್ ; ಅಮೆರಿಕದ ಶತಮಾನದ ಕಪ್ಪು ನಕ್ಷತ್ರ

-

ಸಿಡ್ನಿ ಪಾಯ್ಟಿಯರ್ (Photo - twitter.com)

1900ನೇ ಇಸವಿಯ ಜುಲೈ ತಿಂಗಳಿನಲ್ಲಿ ಲಂಡನ್ ನಲ್ಲಿ ಮೊದಲ ಅಖಿಲ ಆಫ್ರಿಕನ್ ಸಮಾವೇಶ ಜರುಗುತ್ತದೆ. ಸಮಾವೇಶದ ಪ್ರಮುಖ ಭಾಷಣಕಾರರಾದ ಆಫ್ರಿಕನ್ ಅಮೆರಿಕನ್ ಚಿಂತಕ ಡಬ್ಲ್ಯು. ಇ. ಬಿ. ದುಬಾಯೈಸ್ ತಮ್ಮ “ವಿಶ್ವದ ರಾಷ್ಟ್ರಗಳನ್ನುದ್ದೇಶಿಸಿ ಭಾಷಣ” ದಲ್ಲಿ “ಇಪ್ಪತ್ತನೇ ಶತಮಾನದ ಸಮಸ್ಯೆಯೆಂದರೆ, ಅದು ವರ್ಣರೇಖೆಯ ಸಮಸ್ಯೆ” ಎಂದು ಹೇಳುತ್ತಾರೆ. ಅದು ಪಶ್ಚಿಮ ದೇಶವಾದ ಅಮೆರಿಕಕ್ಕೂ, ಪೂರ್ವ ದೇಶವಾದ ಇಂಡಿಯಕ್ಕೂ ಏಕಕಾಲಕ್ಕೂ ಅನ್ವಯಿಸುವಂತದ್ದಾಗಿತ್ತು. ಅಮೆರಿಕದಲ್ಲಿ ಜನಾಂಗೀಯತೆ ದೊಡ್ಡ ಸಮಸ್ಯೆ, ಭಾರತದಲ್ಲಿ ಜಾತೀಯತೆ. “ಸಮಸ್ಯೆಯಾಗಿರುವುದು ಹೇಗನ್ನಿಸುತ್ತದೆ?” ಎಂದು ಕೇಳಿದ್ದರು ದುಬಾಯೈಸ್.

ಆ ಪ್ರಶ್ನೆಗೆ ಇಂಡಿಯಾದ ಸಂದರ್ಭದಲ್ಲಿ ಉತ್ತರಿಸುವುದು ಕಷ್ಚವಾದರೂ, ಅಮೆರಿಕದಲ್ಲಿ ಆ ಸಮಸ್ಯೆಯನ್ನು ಬದುಕಿದವರು ಆಫ್ರಿಕನ್ ಅಮೆರಿಕನ್ನರು. ದುಬಾಯೈಸ್ ಅವರು ಹೇಳುವ ಕಪ್ಪು ಅಸ್ಮಿತೆ ಹಾಗೂ ರಾಷ್ಟ್ರೀಯ ವಿಲೀನಗಳೆಂಬ ಆದರ್ಶಗಳ ದ್ವಿಪ್ರಜ್ಞೆಯ ಹೊಣೆಯನ್ನು ಹೊತ್ತಿದ್ದವರು ಅವರು. ಆ ದ್ವಿಪ್ರಜ್ಞೆಯೇ ಅಲ್ಲಿನ ನಾಗರಿಕ ಹಕ್ಕುಗಳ ಹೋರಾಟಕ್ಕೂ ಎಡೆಮಾಡಿ ಕೊಟ್ಟಿತ್ತು. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ನೇತೃತ್ವದ ಆ ಚಳವಳಿ, ಎಲ್ಲ ರಂಗಗಳ ಸಮಾನತಾವಾದಿಗಳನ್ನೂ ಸೆಳೆದಿತ್ತು. ಅಂತಹವರಲ್ಲಿ ಪ್ರಮುಖರು, ಜಗದ್ವಿಖ್ಯಾತ ಕಪ್ಪು ನಕ್ಷತ್ರ, ನಟ ಸಿಡ್ನಿ ಪೊಯ್ಟಿಯರ್(ಫೆಬ್ರವರಿ  February 20, 1927 – January 6, 2022).

ಕೆರಿಬಿಯನ್ ದ್ವೀಪಗಳಲ್ಲೊಂದಾದ, ಬ್ರಿಟಿಶ್ ಕಾಲನಿಯಾಗಿದ್ದ ಬಹಾಮಸ್ ಕೃಷಿಕ ತಂದೆತಾಯಿ ವ್ಯಾಪಾರಕ್ಕೆಂದು ಪ್ಲೊರಿಡ ಪ್ರಾಂತ್ಯದ ಮಯಾಮಿಗೆ ಬಂದಾಗ ಆಕಸ್ಮತ್ತಾಗಿ ಅಲ್ಲಿಯೇ ಜನಿಸಿದ ಕಾರಣಕ್ಕೆ ಅಮೆರಿಕ ನಾಗರಿಕತ್ವ ಪಡೆದುಕೊಂಡವರು ಸಿಡ್ನಿ. ಹಾಗಾಗಿ, ಅವರು ಏಕಕಾಲಕ್ಕೆ ಬಹಾಮಿ ಹಾಗೂ ಅಮೆರಿಕನ್. ತಮ್ಮ ಹದಿಹರೆಯದಲ್ಲಿ ಎರಡನೇ ವಿಶ್ವಮಹಾಸಮರದ ಸಂದರ್ಭದಲ್ಲಿ ಸೇನೆಗೂ ಸೇರಿದ್ದರು. ನ್ಯೂಯಾರ್ಕ್ ನ ಕಪ್ಪುಕುಲದ ತಾಣವಾದ ಹರ್ಲೆಮ್ ನಲ್ಲಿನ ಅಮೆರಿಕನ್ ನೀಗ್ರೊ ಥಿಯೇಟರ್ ನಲ್ಲಿ ನಟನಾಗಿ ರಂಗ ತರಬೇತಿ ಪಡೆಯುತ್ತ, ಏಳುಬೀಳುಗಳನ್ನು ಕಾಣುತ್ತಲೇ ಪ್ರತಿಷ್ಠಿತ ಬ್ರಾಡ್ ವೇ ನಿರ್ಮಾಣದ ಗ್ರೀಕ್ ನಾಟಕಕಾರ ಅರಿಸ್ಟೋಫೇನಸ್ ನ ನಾಟಕ ಲೈಸಿಸ್ಟ್ರೇಟದಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಷ್ಟು ಮಾತ್ರವಲ್ಲ, ವರ್ಗಸಂಘರ್ಷ ಹಾಗೂ ಜನಾಂಗೀಯ ಶೋಷಣೆಯ ಎಡಪಂಥೀಯ ವಿಶ್ಲೇಷಣೆಗೆ ಬದ್ಧವಾದ Committee for the Negro in the Arts(1947)ನ ಸಂಸ್ಥಾಪಕ ಸದಸ್ಯರೂ ಆಗಿದ್ದರು. ಅವರು ಮುಂದಿನ ಹೋರಾಟದ ಬದುಕಿನ ಸೆಲೆಯನ್ನು ಇಲ್ಲಿ ಕಾಣಬಹುದು.

ನಾಟಕಗಳಲ್ಲಿ ಅಭಿನಯಿಸುತ್ತಲೇ ಚಿತ್ರರಂಗಕ್ಕೆ ಧುಮುಕಿದ ಸಿಡ್ನಿ, ತಮ್ಮ ಪ್ರತಿ ಪಾತ್ರದಲ್ಲೂ ಛಾಪನ್ನು ಮೂಡಿಸುತ್ತ ಎತ್ತರೆತ್ತರಕ್ಕೆ ಹೋದರು. ಅವರ ವೃತ್ತಿಜೀವನದ ಮೊದಲ ಮಹತ್ತರ ತಿರುವು The Defiant Ones (1958). ಜೈಲಿನಿಂದ ತಪ್ಪಿಸಿಕೊಂಡ ಕಪ್ಪು ಹಾಗೂ ಬಿಳಿ ಕೈದಿಗಳ ಕತೆ. ಆ ಪಾತ್ರಗಳನ್ನು ನಿರ್ವಹಿಸಿದ್ದವರು ಕಪ್ಪು ನಟ ಸಿಡ್ನಿ ಪೊಯ್ಟಿಯರ್ ಹಾಗೂ ಬಿಳಿಯ ನಟ ಟೋನಿ ಕರ್ಟಿಸ್. ಕೈದಿಗಳಿಬ್ಬರೂ ಒಂದೇ ಸರಪಳಿಯಿಂದ ಬಂದಿಯಾಗಿದ್ದರೂ ಒಟ್ಟಿಗೆ ತಪ್ಪಿಸಿಕೊಂಡು ಪರಸ್ಪರ ಸೆಣಸಾಡುವುದು ಕಪ್ಪು-ಬಿಳಿ ಜನಾಂಗೀಯ ಸಂಘರ್ಷದ ರೂಪಕದಂತಿತ್ತು. ಸಿಡ್ನಿ ಅವರು ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಾಂಕನಗೊಂಡಿದ್ದು ಸೇರಿ ಎಂಟು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಾಂಕನಗೊಂಡಿದ್ದ ಆ ಚಿತ್ರ ಎರಡರಲ್ಲಿ ವಿಜೇತವಾಗಿತ್ತು. ಅದರ ನಿರ್ದೇಶಕರಾಗಿದ್ದ ಸ್ಚ್ಯಾನ್ಲಿ ಕ್ರೇಮರ್ (1913 – 2001), ಹಾಲಿವುಡ್ ನ ಜನಾಂಗೀಯವಾದಿ ಸ್ಟುಡಿಯೋಗಳ ವಿರುದ್ಧ ದನಿ ಎತ್ತಿದ್ದವರಲ್ಲಿ ಪ್ರಮುಖರಾಗಿದ್ದವರು.

ಕ್ರೇಮರ್, ತಮ್ಮ  ಪ್ರಖ್ಯಾತ "Message Films"(ಸಂದೇಶ ಚಿತ್ರಗಳು) ಮೂಲಕ ಹೊಸ ಸಂಚಲನ ಮೂಡಿಸಿದವರು. “ನಾನು ಕೆಲಸ ಮಾಡಿರುವ ನಟರಲ್ಲಿ ಮಾರ್ಲನ್ ಬ್ರಾಂಡೊ ಹಾಗೆ ಕಾರುಣ್ಯದಿಂದ ಅಗಾಧ ಶಕ್ತಿಯ ಪಾತ್ರಗಳವರೆಗೆ ಎಲ್ಲವನ್ನೂ ನಿರ್ವಹಿಸಬಲ್ಲ ಏಕೈಕ ನಟ ಸಿಡ್ನಿ” ಎಂದು ಅವರು ಹೇಳಿದ್ದುಂಟು. ಬ್ರಾಂಡೊ ಹಾಗೂ ಸಿಡ್ನಿ ಮುಂದೆ ಅಮೆರಿಕನ್ ನಾಗರಿಕ ಹಕ್ಕುಗಳ ಹೋರಾಟದಲ್ಲಿ ಜೊತೆಯಾಗಿ ಹೋರಾಡಿದವರು. ಬ್ರಾಂಡೊ, ಹಾಲಿವುಡ್ ನ ಜನಾಂಗೀಯತೆ ವಿರುದ್ಧ ದನಿ ಎತ್ತಿ The Godfather(1973)ಗೆ ನೀಡಲಾಗಿದ್ದ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿಯನ್ನು ತಿರಸ್ಕರಿಸಿದವರು.

ಅಮೆರಿಕದ ಇತಿಹಾಸಕಾರರಾದ ಎಮಿಲಿ ರೇಮಂಡ್ ಅವರು ತಮ್ಮ Stars for Freedom: Hollywood, Black Celebrities, and the Civil Rights Movement(2015) ಪುಸ್ತಕದಲ್ಲಿ ಬರೆಯುವಂತೆ, ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ   August 28, 1963 ರಂದು ನಡೆದ ಆಫ್ರಿನ್ ಅಮೆರಿಕನ್ನರ ನಾಗರಿಕ ಹಕ್ಕುಗಳ ಚಳವಳಿಯಲ್ಲಿ(Civil Rights Movement)  ಹಾಲಿವುಡ್ ನ ತಾರಾಬಳಗವೇ ಪಾಲ್ಗೊಂಡಿತ್ತು. ಸಿಡ್ನಿಯವರೊಂದಿಗೆ ಹ್ಯಾರಿ ಬೆಲಫೊಂಟೆ, ಓಸ್ಸಿ ಡೇವಿಸ್ ಹಾಗೂ ರೂಬಿ ಡೀ, ಸ್ಯಾಮಿ ಡೇವಿಸ್ ಜ್ಯೂ., ಡಿಕ್ ಗ್ರೆಗರಿಯವರಂತಹ ಕಲಾವಿದರೂ ಸೇರಿದ್ದರು. ಇವರೊಟ್ಟಿಗೆ ಮಾರ್ಲನ್ ಬ್ರಾಂಡೊ, ಪೌಲ್ ನ್ಯೂಮನ್, ಎಲಿಜಬೆತ್ ಟೇಲರ್ ರಂತಹ interracial ಸ್ಟಾರ್ ಕಲಾವಿದರು ಕೂಡ ಹೋರಾಟದಲ್ಲಿ ಪಾಲ್ಗೊಂಡಿದ್ದು ವಿಶೇಷ.

ಈ ಕಲಾವಿದರು ಚಳವಳಿಯು ಮಾಧ್ಯಮದ ಗಮನಸೆಳೆಯುವುದಕ್ಕೆ ನೆರವಾದದ್ದು ಮಾತ್ರವಲ್ಲ, ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಆ ಚಳವಳಿಗೆ ಸ್ಪಂದಿಸಿ ಹೋರಾಟವನ್ನು ಕಟ್ಟುವಲ್ಲಿಯೂ ನೆರವಾಗಿದ್ದರು. ಈ ಹೋರಾಟದ ನೇತೃತ್ವ ವಹಿಸಿದ್ದ ಕಿಂಗ್ ಅವರಿಗೆ 1964ರಲ್ಲಿ ಕಿಂಗ್ ಅವರಿಗೆ ನೊಬೆಲ್ ಪ್ರಶಸ್ತಿ ದೊರಕಿತು, ಕಾಂಗ್ರೆಸ್, ನಾಗರಿಕ ಹಕ್ಕುಗಳ ಕಾಯ್ದೆಯನ್ನು ಜಾರಿಗೊಳಿಸಿತು. ಸಿಡ್ನಿಯವರು Lilies of the Field(1963) ಚಿತ್ರಕ್ಕೆ 1964ರ ಆಸ್ಕರ್ ಅತ್ಯುತ್ಯಮ ನಟ ಪ್ರಶಸ್ತಿ ಗಳಿಸುವ ಮೂಲಕ ಅಮೆರಿಕ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದರು. ಚಾರಿತ್ರಿಕ ಘಟನೆಗಳೆಲ್ಲ ಏಕಕಾಲಕ್ಕೆ ಸಂಭವಿಸಿದ್ದವು. ಕಿಂಗ್ ಅವರು ಸಿಡ್ನಿಯವರನ್ನು ತಮ್ಮ “ಆತ್ಮ ಸೋದರ” ಎಂದು ಕರೆಯುವಷ್ಟು ಆ ಹೋರಾಟಕ್ಕೆ ಬದ್ಧರಾಗಿದ್ದರು ಸಿಡ್ನಿ.

ಕಲೆ ಬದುಕನ್ನು ಅನುಕರಿಸುವುದು ಒಂದು ಬಗೆಯಾದರೆ, ಬದುಕು ಕೂಡ ಕಲೆಯನ್ನು ಅನುಕರಿಸಬಲ್ಲದೆಂಬುದಕ್ಕೆ ಸಿಡ್ನಿ ಸಾಕ್ಷಿಯಾಗಿದ್ದಂತಹವರು. ಹಾಗಾಗಿ, ಅವರಲ್ಲಿ ಕಲೆ ಹಾಗೂ ಬದುಕು ಭಿನ್ನವಾಗಿರಲಿಲ್ಲ, ಬದಲಿಗೆ ಕಲೆಯೇ ಬದುಕು ಹಾಗೂ ಬದುಕೇ ಕಲೆಯಾಗಿ ಬೇರ್ಪಡಿಸಲಾಗದ್ದಾಗಿದ್ದವು. ಅದಕ್ಕೆ ಸಾಕ್ಷಿ ಎಂಬಂತಹ ಒಂದು ಘಟನೆಯನ್ನು ಸಿಡ್ನಿಯವರ ಜೀವನಕಥನವನ್ನು ರಚಿಸಿರುವ ಏರಮ್ ಗೌಡ್ ಸೌಜಿಯನ್ ಅವರು, ತಮ್ಮ Sidney Poitier: Man, Actor, Icon(2004) ಕೃತಿಯಲ್ಲಿ ದಾಖಲಿಸಿದ್ದಾರೆ.

ಆಗಸ್ಟ್ 22, 1967. ಅಟ್ಲಾಂಟದಲ್ಲಿ ಟೆಲಿವಿಶನ್ ಪ್ರಸಾರವಾಗುತ್ತಿದ್ದ ಮಾಧ್ಯಮ ಸಮ್ಮೇಳನದಲ್ಲಿ ವರದಿಗಾರರು ಸಿಡ್ನಿಯವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದರು. ಪ್ರಶ್ನೆಗಳೆಲ್ಲ ಜನಾಂಗೀಯ ಗಲಭೆಗಳು ಹಾಗೂ ಕಪ್ಪು ಹೋರಾಟಗಾರರ ಕುರಿತಾಗಿದ್ದವು. ಎಲ್ಲ ಪ್ರಶ್ನೆಗಳಿಗೂ ಐದು ನಿಮಿಷ ಸಮಚಿತ್ತದಿಂದ ಉತ್ತರಿಸಿದ ಸಿಡ್ನಿ, ನಂತರ ಉದ್ವೇಗದಿಂದ ಹೇಳಿದ್ದರು: “ನನಗನಿಸುತ್ತೆ, ನೀವು ಈ ಹೊತ್ತು ಈ ದೇಶದಲ್ಲಿ ಆಗುತ್ತಿರುವ ಒಳ್ಳೆಯ ಘಟನೆಗಳ ಬಗ್ಗೆ ಕೇಳಬಹುದು... ನನ್ನ ವ್ಯಕ್ತಿತ್ವಕ್ಕೆ ಅನೇಕ ಆಯಾಮಗಳಿವೆ. ಅವನ್ನು ನೀವು ರಚನಾತ್ಮಕವಾಗಿ ಅನ್ವೇಷಿಸಬಹುದು. ನೀವು ಇಲ್ಲಿ ಕೂತು ನಮ್ಮ ಬದುಕಿನ ಕಿರು ಭಾಗದ ಬಗ್ಗೆ ಏಕ ಆಯಾಮದ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ... ನಾನು ಕಲಾವಿದ, ಮನುಷ್ಯ, ಅಮೆರಿಕನ್, ಸಮಕಾಲೀನ. ನಾನು ಅನೇಕ ಮಜಲುಗಳನ್ನು ಹೊಂದಿದ್ದೇನೆ. ಹಾಗಾಗಿ ನೀವು ನನಗೆ ಕೊಡಬೇಕಾದ ಗೌರವ ಕೊಡಬೇಕು.” ಅವರು ಅಭಿನಯಿಸಿದ್ದ ನಾಟಕದ್ದೋ, ಚಿತ್ರದ್ದೋ ಒಂದು ಸ್ವಗತದಂತೆ ಅವರ ಮಾತುಗಳು ಅನುರಣಿಸಿದವು. ಅದರರ್ಥ ಸಿಡ್ನಿಯವರು ತಮ್ಮ ರಾಜಕೀಯ ಅಸ್ಮಿತೆಯಿಂದ ವಿಮುಖರಾಗಿದ್ದರು ಎಂದಲ್ಲ. ಆದರಿಂದಾಚೆಗಿನ ತಮ್ಮ ವ್ಯಕ್ತಿತ್ವಕ್ಕೂ ಗೌರವ ಸಲ್ಲಿಸಬೇಕೆಂಬ ಒತ್ತಾಯವಾಗಿತ್ತು. ಹಾಲಿವುಡ್ ನ ಬಹುದೊಡ್ಡ ತಾರೆಯಾಗಿದ್ದ ಅವರು, ತಮ್ಮ ಕರಿಸ್ಮಾವನ್ನು ರಾಜಕೀಯ ಹೋರಾಟಕ್ಕೆ ದುಡಿಸಿಕೊಂಡರು.

ಸಿಡ್ನಿ ಅವರು ಬಿಳಿ ಪ್ರಪಂಚದಲ್ಲಿ ಉದಾತ್ತನಾದ ಕಪ್ಪು ವ್ಯಕ್ತಿಯ ಪಾತ್ರಗಳನ್ನು ಮಾಡುವ ಮೂಲಕ ಸ್ಟೀರಿಯೊಟೈಪ್ ಗಳನ್ನು ಮುರಿಯಲು ಯತ್ನಿಸಿ ಯಶಸ್ವಿಯಾದರಾದರೂ, ಅದೇ ಕಾರಣಕ್ಕೆ ಟೀಕೆಯನ್ನೂ ಎದುರಿಸಿದ್ದುಂಟು. ಹಾಗೆಯೇ, ಬಿಳಿ ನಾಯಕರಿಗಾಗಿ ತ್ಯಾಗ ಮಾಡುವ ಪಾತ್ರಗಳಿಂದಾಗಿ ತನ್ನ ಜನರ ಆಕ್ರೋಶಕ್ಕೂ ತುತ್ತಾಗಬೇಕಾಯಿತ್ತು. ಜನಾಂಗೀಯ ನಿಷೇಧದಿಂದಾಗಿ ರಮ್ಯ ನಾಯಕನ ಪಾತ್ರಗಳು ದೊರಕದಿದ್ದಂತಹ ಸಂದರ್ಭದಲ್ಲಿ ಅವರಿಗಿದ್ದಿದ್ದು ಸೀಮಿತವಾದ ಆಯ್ಕೆಗಳು. ಪಾತ್ರಗಳ ಆಯ್ಕೆ ಕಠಿಣವಾಗಿತ್ತು. ಜನಾಂಗೀಯತೆ ವಿರುದ್ಧ ಹೋರಾಟ ತೀವ್ರವಾಗಿದ್ದಂತಹ ಸಂದರ್ಭದಲ್ಲಿ ಕಪ್ಪು ಅಸ್ಮಿತೆಯನ್ನು ಪ್ರತಿನಿಧಿಸುವಂತಹ ಪಾತ್ರಗಳನ್ನು ಆಯ್ಕೆಮಾಡಿಕೊಳ್ಳಬೇಕಾದ ಒತ್ತಡ ಒಂದೆಡೆಯಾದರೆ, ಹಾಗಾಗದಿದ್ದಾಗ ಟೀಕೆಗೊಳಗಾಗಬೇಕಿತ್ತು. ಈ ಕತ್ತಿಯಂಚಿನ ಹಾದಿಯಲ್ಲಿ ನಡೆಯುತ್ತಲೇ ಒಂದೆಡೆ ಕಲೆಗೂ ಮತ್ತೊಂದೆಡೆ ತನ್ನ ಕಪ್ಪು ಅಸ್ಮಿತೆಗೂ ನ್ಯಾಯ ಸಲ್ಲಿಸಬೇಕಾದ ದ್ವಂದ್ವದಲ್ಲೇ ಅಸಾಂಪ್ರದಾಯಿಕ ಪಾತ್ರಗಳನ್ನು ನಿರ್ವಹಿಸಿದ್ದಲ್ಲದೆ, ಏಕೈಕ ಕಪ್ಪು ತಾರೆಯಾಗಿ ಕಂಗೊಳಿಸುತ್ತಲೇ, ಎಲ್ಲ ಬಗೆಯ ನೋಡುಗರು ಮೆಚ್ಚುವಂತಹ ಪಾತ್ರಗಳನ್ನು ನಿರ್ವಹಿಸಬೇಕಾದ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದು ಅವರ ಮಹತ್ಸಾಧನೆ.

ಅಮೆರಿಕದ ಸಿನಿಮಾಕಾಶದಲ್ಲಿ ಮಿನುಗಿದ ಮೊದಲ ಕಪ್ಪು ತಾರೆಯಾದ ಸಿಡ್ನಿ, ಪ್ರತಿಷ್ಠಿತ ಆಸ್ಕರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ನಲವತ್ತು ವರ್ಷಗಳ ನಂತರ ಡೆಂಜೆಲ್ ವಾಶಿಂಗ್ಟನ್ ಅವರು Training Day(2001) ಚಿತ್ರಕ್ಕಾಗಿ ಅದೇ ಪ್ರಶಸ್ತಿಯನ್ನು ಪಡೆದರು. ಅದೇ ಸಮಾರಂಭದಲ್ಲಿ ಸಿಡ್ನಿಯವರಿಗೆ ಜೀವಮಾನ ಸಾಧನೆಯ ಗೌರವ ಸಲ್ಲಿಸಲಾಗಿತ್ತು.

ಆಗ ಡೆಂಜೆಲ್ ಹೇಳಿದ್ದರು: “ಸಿಡ್ನಿಗೂ ಮುನ್ನ, ಆಪ್ರಿಕನ್ ಅಮೆರಿಕನ್ ನಟರು ಪ್ರಮುಖ ಸ್ಟುಡಿಯೂ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಬೇಕಿತ್ತು. ಆ ಪಾತ್ರಗಳನ್ನು ದೇಶದ ಕೆಲ ಭಾಗಗಳಲ್ಲಿ ತೆಗೆದು ಹಾಕಬಹುದಿತ್ತು. ಆದರೆ, ಸಿಡ್ನಿ ಪಾಯ್ಟಿಯರ್ ಚಿತ್ರದಿಂದ ಸಿಡ್ನಿಯ ಪಾತ್ರವನ್ನು ತೆಗೆಯಲಾಗದು. ಅವರ ಕಾರಣದಿಂದಾಗಿಯೇ ಆ ಚಿತ್ರ ತಯಾರಾಗಿದೆ. ಅವರು ಮೊದಲ ಏಕೈಕ ಆಫ್ರಿಕನ್-ಅಮೆರಿಕನ್ ಸಿನಿ ತಾರೆ. ಅವರು ಅನನ್ಯ” ಎಂದಾಗ, ಸಿಡ್ನಿಯೊಟ್ಟಿಗೆ ನೆರೆದಿದ್ದ ಗಣ್ಯ ತಾರೆಯರೆಲ್ಲ ಭಾವುಕರಾಗಿದ್ದರು. ಅದೇ ಸಮಾರಂಭದಲ್ಲಿ ಹ್ಯಾಲಿ ಬೆರ್ರಿಯವರು ತಮ್ಮ Monster’s Ball ಚಿತ್ರಕ್ಕಾಗಿ ಆಸ್ಕರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೊದಲ ಕಪ್ಪು ನಟಿಯಾಗಿದ್ದರು. ಇಪ್ಪತ್ತನೇ ಶತಮಾನದ ಶುರುವಾತಿನಲ್ಲಿ ದುಬಾಯೈಸ್ ಮಾಡಿದ ಚಾರಿತ್ರಿಕ ಭಾಷಣದ ಒಂದು ಶತಮಾನದ ನಂತರ ಹೊಸ ಚರಿತ್ರೆ ನಿರ್ಮಾಣವಾಗಿತ್ತು.

To Sir, with Love (1967) ಅಮೆರಿಕನ್-ಬ್ರಿಟಿಶ್ ಕಾದಂಬರಿಕಾರ ಇ. ಆರ್. ಬ್ರೈತ್ ವೈಟ್ ಅವರ ಅದೇ ಹೆಸರಿನ ಕಾದಂಬರಿಯನ್ನಾಧರಿಸಿದ ಸಿಡ್ನಿಯವರ ಅತ್ಯಂತ ಜನಪ್ರಿಯ ಚಿತ್ರ. ಸಾಮಾಜಿಕ ಹಾಗೂ ಜನಾಂಗೀಯ ತಾರತಮ್ಯವನ್ನು ಕಥಾವಸ್ತುವನ್ನಾಗಿಸಿಕೊಂಡಿದ್ದ ಆ ಚಿತ್ರ ಇಂಡಿಯಾದಲ್ಲೂ ಅಷ್ಟೇ ಜನಪ್ರಿಯ. ಆದರೆ, ಇಂಡಿಯಾದ 125 ವರ್ಷಗಳ ಚಿತ್ರ ಇತಿಹಾಸದಲ್ಲಿ ಸಿಡ್ನಿ ಪಾಯ್ಟಿಯರ್ ಥರದ ನಟರು ದಲಿತರಲ್ಲಿ ಬಂದಿಲ್ಲ ಎಂಬುದನ್ನು ನೋಡಿದಾಗ, ಸೆಕ್ಯುಲರ್, ಡೆಮೊಕ್ರಟಿಕ್ ಇಂಡಿಯಾ, ಇಪ್ಪತ್ತೊಂದನೇ ಶತಮಾನದಲ್ಲೂ ಎಷ್ಟು ವೈರುಧ್ಯಗಳಿಂದ ಕೂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಕಳೆದ ಒಂದು ದಶಕದಲ್ಲಿ ಅಸಾಧಾರಣವಾದ ಬದಲಾವಣೆಯಾಗಿದೆ. ದಲಿತ ಬದುಕನ್ನು ಆಧರಿಸಿದ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆ ಕಂಡಿರುವುದು ಮಾತ್ರವಲ್ಲ, ಅಪಾರ ಜನಮನ್ನಣೆಯನ್ನು ಕೂಡ ಪಡೆದಿವೆ.. ಅವುಗಳಲ್ಲಿ ಹೆಚ್ಚಿನವು ದಕ್ಷಿಣ ಭಾರತದ ಭಾಷೆಗಳಲ್ಲಿ ತಯಾರಾಗಿರುವುದು ಮಾತ್ರವಲ್ಲ, ಸ್ವತಃ ದಲಿತರೇ ರಜನೀಕಾಂತ್ ರಂತಹ ಸೂಪರ್ ಸ್ಟಾರ್ ಗಳನ್ನು ದಲಿತ ಪಾತ್ರಗಳನ್ನಾಗಿಸಿ ದೊಡ್ಡ ಯಶಸ್ಸು ಕಂಡಿದ್ದಾರೆ. ಇದರಲ್ಲಿ ಕನ್ನಡದ ಪಾಲು ಎಷ್ಟು ಎಂಬುದು ಪ್ರಶ್ನಾರ್ಹ. ಮರಾಠಿಯ ನಾಗರಾಜ್ ಮಂಜುಳೆ, ತಮಿಳಿನ ಪ. ರಂಜಿತ್, ವೆಟ್ರಿ ಮಾರನ್, ಮಾರಿ ಸೆಲ್ವರಾಜ್ ಮುಂತಾದ ನಿರ್ದೇಶಕರು ದಲಿತ ಅಸ್ಮಿತೆಯನ್ನು ತಮ್ಮದಾಗಿಸಿಕೊಂಡು ಇಂಡಿಯಾ ಚಿತ್ರರಂಗದಲ್ಲೇ ದೊಡ್ಡ ಕ್ರಾಂತಿಯನ್ನೆಬ್ಬಿಸಿದ್ದಾರಾದರೂ, ಇಂಡಿಯಾದ ಯಾವ -ವುಡ್ ನಲ್ಲೂ ಸಿಡ್ನಿ ಪಾಯ್ಟಿಯರ್, ಡೆಂಜಲ್ ವಾಶಿಂಗ್ಟನ್, ಹ್ಯಾಲಿ ಬೆರ್ರಿ ಆಫ್ರಿಕನ್ ಅಮೆರಿಕನ್ ಅಸ್ಮಿತೆಯನ್ನಿಟ್ಟುಕೊಂಡು ಬೆಳೆದ ಹಾಗೆ ದಲಿತ ಕಲಾವಿದರು ದಲಿತ ಅಸ್ಮಿತೆಯೆನ್ನಿಟ್ಟುಕೊಂಡು ಏಳಿಗೆ ಹೊಂದಬಹುದೇ? ದುಬಾಯೈಸ್ ಹೇಳುವ ದ್ವಿಪ್ರಜ್ಞೆಯನ್ನು ಇಂಡಿಯಾದ ಸಂದರ್ಭಕ್ಕೆ ಒಗ್ಗಿಸಿ ನೋಡಿದಲ್ಲಿ ದಲಿತ ಅಸ್ಮಿತೆಯನ್ನಿಟ್ಟುಕೊಂಡೇ ರಾಷ್ಟ್ರೀಯ ಮನ್ನಣೆಯನ್ನು ಪಡೆಯುವಂತಹ ಕಲಾವಿದರು ಎಂದಾದರೂ ಹೊರಹೊಮ್ಮುವರೇ?!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top