-

ರಕ್ತರಸ

-

ಇದು ಜಾಗತಿಕ ಹಿಂಸಾಯುಗ. ಇಲ್ಲಿ ಎಲ್ಲ ದೇಶಗಳೂ ಸ್ಪರ್ಧಾಳುಗಳು. ಪ್ರಸ್ತುತವನ್ನು, ವರ್ತಮಾನವನ್ನು ಮರೆತು ತಮ್ಮ ಪಾಡಿಗೆ ತಾವಿರುವ ಐಪಿಎಲ್ ಕಲಿಗಳು, ತಮ್ಮ ಬೆನ್ನುಮೂಳೆಯನ್ನು ದಾನಮಾಡಿ ದಧೀಚಿತ್ವವನ್ನು ಸಂಪಾದಿಸಿ ಶಾಶ್ವತವಾಗಿ ನಡುಬಗ್ಗಿ ಸಲಾಮು ಮಾಡುವ ಚಿಂತಕರು-ಸಾಹಿತಿಗಳು ಮಾತ್ರ ಇನ್ನೊಂದು ರೀತಿಯಲ್ಲಿ ಶಾಶ್ವತ ಹಗಲಿನ, ಗೆಲುವಿನ ನಗೆ ಬೀರುವವರು. ಇವುಗಳೆಲ್ಲ ಮುಗಿದ ಮೇಲೆ ಹೋರಾಡುವುದಾದರೂ ಯಾರಲ್ಲಿ? ಆ ಸಂದರ್ಭ ಇನ್ನೂ ಬಂದಿಲ್ಲವಾದ್ದರಿಂದ ಈಗ ಹಿಂಸೆಯ ಮೂಲಕ ಸುಖಿಸಬಹುದು.


ಹಿಂಸೆ ಮನುಷ್ಯ ಸಹಜ. ಅದರರ್ಥ ಅವನು ಕೇಡಿಗನೇ ಎಂದಲ್ಲ. ಅಗತ್ಯವಾದಾಗ ಹಿಂಸೆಯನ್ನು ವಿವಿಧ ಹಂತಗಳಲ್ಲಿ ಕೈಗೊಳ್ಳುತ್ತಾನೆ. ಹಿಂಸೆಯನ್ನು ಮೀರಿದವನು ದೇವರಾಗುತ್ತಾನೆ ಅಥವಾ ದೈವತ್ವವನ್ನು ಪಡೆಯುತ್ತಾನೆ ಎಂಬುದು ಬರಿಯ ಲೊಳಲೊಟ್ಟೆ. ಏಕೆಂದರೆ ದೇವರೂ ದೇವತೆಗಳೂ ಹಿಂಸೆಯನ್ನು ಸಂಪೂರ್ಣವಾಗಿ ಪರಿತ್ಯಜಿಸಿದ್ದರೆನ್ನುವುದಕ್ಕೆ ಆಧಾರಗಳಿಲ್ಲ. ಯಾವುದೇ ಧರ್ಮದ/ಮತದ ದೇವರೂ ದೇವತೆಗಳೂ ಒಂದಲ್ಲ ಒಂದು ಸಂದರ್ಭದಲ್ಲಿ ಹಿಂಸೆಯನ್ನು ಅಂಗೀಕರಿಸಿದ್ದಾರೆ. ನರಸಿಂಹಾವತಾರವು ಹಿರಣ್ಯಕಶಿಪುವಿನ ಹೊಟ್ಟೆಯನ್ನು ಸೀಳುವುದಕ್ಕಾಗಿಯೇ ಆದದ್ದು. ಯಕ್ಷಗಾನದಲ್ಲಿ ಭಾಗವತರ ಪದ್ಯವಿಲ್ಲದೆ ಮಾತೂ ಇಲ್ಲದೆ ಅವತರಿಸುವ ರಾಕ್ಷಸಪಾತ್ರದಂತೆ. ‘ಅಹಿಂಸಾ ಪರಮೋ ಧರ್ಮ’ ಎಂದ ಮಹಾವೀರನು ಅಹಿಂಸೆಗೆ ತೀರ ಹತ್ತಿರ ಬಂದ ಯತಿ. ಇನ್ನೆಲ್ಲರೂ ಹಿಂಸೆಯನ್ನು ಕೊಂಡಾಡದಿದ್ದರೂ ಸಹಿಸಿದವರೇ. ಆದರೆ ಜಗದೀಶ್ಚಂದ್ರ ಬೋಸ್ ಪ್ರತಿಪಾದಿಸಿದಂತೆ ಸಸ್ಯಗಳಿಗೂ ಜೀವವಿದೆ ಎಂಬುದು ಹೌದಾದರೆ ಮಹಾವೀರನ ಪ್ರತಿಪಾದನೆಗೂ ಮಿತಿಯಿದೆಯೆಂದುಕೊಳ್ಳಬಹುದು. ಈ ಆಧುನಿಕ ಕಾಲದಲ್ಲಿ ಹಿಂಸೆಯ ಬೇರೆ ಬೇರೆ ಮಜಲುಗಳು ಪರಸ್ಪರ ಕಾದಾಡುತ್ತಿವೆ. ಇವುಗಳಲ್ಲಿ ಯಾವೊಂದನ್ನೂ ಸಮರ್ಥಿಸಲಾಗದು ಅಥವಾ ವಿರೋಧಿಸಲಾಗದು. ಏಕೆಂದರೆ ಒಮ್ಮೆ ಹಿಂಸೆಯನ್ನು ಮನುಷ್ಯ ಸಹಜ ಮಾತ್ರವಲ್ಲ, ಸಂಸ್ಕೃತಿ ಸಹಜ ಎಂದೂ ಸಮಾಜವನ್ನು ಒಂದು ಬಗೆಯ ಶಿಸ್ತಿನಲ್ಲೂ ವ್ಯವಸ್ಥೆಯಲ್ಲೂ ಇರಿಸಬೇಕಾದರೆ ಹಿಂಸೆ ಅಗತ್ಯ ಮತ್ತು ಕೆಲವೊಮ್ಮ ಅನಿವಾರ್ಯ ಎಂಬುದನ್ನು ಗತ ಇತಿಹಾಸ ದರ್ಶಿಸಿದೆ ಮತ್ತು ಪುರಾಣಗಳು ಕಲ್ಪಿಸಿವೆ. ಇದಕ್ಕೆ ಶಾಸ್ತ್ರೋಕ್ತವಾಗಿ ‘ದಂಡನೀತಿ’ ಎಂದೂ ಹೆಸರಿಸಲಾಗಿದೆ.

ಪಾರಮಾರ್ಥಿಕದಲ್ಲಿ ಇದಕ್ಕೆ ‘ಬಲಿ’ಯೆಂಬ ಪದವನ್ನು ಬಳಸಿ ಉದಾತ್ತತೆಯೊಂದಿಗೆ ಸಮೀಕರಿಸಲಾಗಿದೆ. ಸರಕಾರದ ಉದ್ದೇಶ ಅಥವಾ ದುರುದ್ದೇಶವೇನೇ ಇರಲಿ, ಈಗ ಸರಕಾರವು ಪಠ್ಯಕ್ರಮದಲ್ಲಿ ತರಲು ಉದ್ದೇಶಿಸಿರುವ ಭಗವದ್ಗೀತೆಯಲ್ಲೂ ಹಿಂಸೆ ಢಾಳಾಗಿ ಗೋಚರಿಸುತ್ತದೆ. ಭಗವದ್ಗೀತೆಯನ್ನು ಸ್ವತಂತ್ರ ಕೃತಿಯಾಗಿ ಪಠ್ಯವಾಗಿಸುತ್ತಾರೋ ಅಥವಾ ಮಹಾಭಾರತದ ಒಂದು ಭಾಗವಾಗಿ ತರುತ್ತಾರೋ ಇನ್ನೂ ಗೊತ್ತಿಲ್ಲ. ಯಾವ ಭಗವದ್ಗೀತೆಯನ್ನು ಆರಿಸುತ್ತಾರೋ ಅದೂ ಗೊತ್ತಿಲ್ಲ. ಇದು ಆಳುವವರ ರಾಜಕೀಯವನ್ನು ಮತ್ತು ಅಜ್ಞಾನದ ವ್ಯಾಪ್ತಿಯನ್ನು ಅವಲಂಬಿಸಿದೆ. ಪ್ರಾಯಃ ಇನ್ನೊಂದಷ್ಟು ವರ್ಷಗಳಲ್ಲಿ ಯಾವನಾದರೂ ಬೃಹಸ್ಪತಿ ಮಹಾಭಾರತದ ಇನ್ನೊಂದು ಭಾಗವಾದ ‘ಶ್ರೀವಿಷ್ಣುಸಹಸ್ರನಾಮ’ವನ್ನು ಪಠ್ಯವಾಗಿ ತರಬಹುದು. ಅದರ ಬಗ್ಗೆ ಈಗಿನವರಿಗೆ ತಿಳಿವಳಿಕೆ ಅಥವಾ ಅದರ ಅಭಾವ ಸಾಲದೆಂದು ಕಾಣುತ್ತದೆ. ಇವೆರಡೂ ಪ್ರಕ್ಷಿಪ್ತವಾಗಿರಲೂಬಹುದಾದರೂ ಈ ದೇಶದ ಬಹಳಷ್ಟು ಜನರನ್ನು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಪ್ರಭಾವಿಸಿದ್ದು ಸುಳ್ಳಲ್ಲ. ಬಹಳಷ್ಟು ಜನರಿಗೆ ಇದೊಂದು ಗ್ರಂಥದ ಭಾಗವೆಂದು ಅನ್ನಿಸುವುದೇ ಇಲ್ಲ; ಅವರು ಇದನ್ನು ಅಧ್ಯಯನ ಮಾಡದಿದ್ದರೂ ಶ್ರದ್ಧಾಭಕ್ತಿಯಿಂದ ಪಾರಾಯಣ ಮಾಡುತ್ತಾರೆ. (ಇದು ಎಲ್ಲ ಧರ್ಮಗಳ ಧರ್ಮಸಂಕಟವೂ ಹೌದು.) ಆದರೂ ಧರ್ಮನಿರಪೇಕ್ಷತೆಯ ಗಣತಂತ್ರದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಶುದ್ಧ ಧಾರ್ಮಿಕತೆಯ ಈ ಸಾಹಿತ್ಯವನ್ನು ತುರುಕುವುದು ಅವಶ್ಯವೇನಲ್ಲ; ಐಚ್ಛಿಕವಾಗಬೇಕಾದ್ದು ಕಡ್ಡಾಯವಾಗಬಾರದು. ಮುಂದೆ ಎಲ್ಲ ಧರ್ಮಗ್ರಂಥಗಳ ಒಂದೊಂದು ಭಾಗಗಳನ್ನು ಸೇರಿಸಬೇಕಾಗುವ ದುರಂತವೂ (ಮಕ್ಕಳ ಪಾಲಿಗೆ ಇನ್ನಷ್ಟು ಹಿಂಸೆಯೂ) ನಡೆಯಬಹುದು.

ಇರಲಿ: ರಾಮಾಯಣದಲ್ಲಿ ಮಾನಸಿಕ, ಬೌದ್ಧಿಕ, ದೈಹಿಕ ಹಿಂಸೆಯ ಕೆಲವೊಂದು ಉದಾಹರಣೆಗಳಿದ್ದರೂ ಅವು ಭಯಾನಕ-ಬೀಭತ್ಸ ಹಂತವನ್ನು ತಲುಪಿದ್ದನ್ನು ಕಾಣೆವು. ವಿಷಾದವೇ ಅದರ ಸ್ಥಾಯೀಭಾವ ಮತ್ತು ಶಾಂತಿರಸವನ್ನು ಉತ್ಪಾದಿಸುವುದು ರಾಮಾಯಣದ ಉದ್ದೇಶವೇನೋ ಅನ್ನುವಂತಿದೆ. ರಾಮನ ಪಾತ್ರದ ಸಾತ್ವಿಕ ಮತ್ತು ಕೆಲವೊಮ್ಮೆ ರಾಜಸ ಚಿತ್ರೀಕರಣ ಇದಕ್ಕೆ ಕಾರಣವಿರಬಹುದು. ತಾಮಸಗುಣಗಳು ಕಾಣಿಸುವುದಿಲ್ಲ. ಪ್ರಕ್ಷಿಪ್ತವೆಂದು ನಂಬಲಾದ ಉತ್ತರಕಾಂಡದ ಕೊನೆಯೂ ವಿಷಾದವೇ. ರಾಮ ಹಿಂಸೆಯ ಪ್ರತೀಕವಾದದ್ದು ಕಳೆದ ಕೆಲವು ದಶಕಗಳಿಂದ. ಶಂತನುವಿನ ಅಕಾಲ ಪ್ರಣಯದ ಹಿಂಸೆಯಿಂದಲೇ ಆರಂಭವಾಗಿ ಉಪ ಪಾಂಡವರ ಹತ್ಯೆಯೂ ಭೀಷ್ಮರು ತನ್ನ ಇಚ್ಛಾಮರಣವನ್ನು ಉತ್ತರಾಯಣಕ್ಕಾಗಿ ಕಾದಿರಿಸುವುದೂ ಸೇರಿದಂತೆ ಹಿಂಸೆಯ ವೈಫಲ್ಯದಲ್ಲೇ ಕೊನೆಗಾಣುವ ಅಸದೃಶ ದುರಂತ ಕಥೆ ಮಹಾಭಾರತ. (ಕೆಲವು ಗ್ರೀಕ್ ಮತ್ತು ಪರ್ಶಿಯನ್ ಪುರಾಣ ಕಥೆಗಳೂ ಇದೇ ರೀತಿಯವು.) ಒಂದು ಕ್ಷಣ ಹಿಂಸೆಯನ್ನು ತ್ಯಜಿಸಲು ಮನಮಾಡಿದ ಪಾರ್ಥನನ್ನು ಕೃಷ್ಣ ಪ್ರೇರೇಪಿಸುವುದು ಹಿಂಸೆಗೆ. ಇದನ್ನೇ ಇಂದಿನ ಯೋಗಿಗಳೂ ಅನುಸರಿಸುತ್ತಿರುವುದು! ಇದು ಪ್ರೇರಣೆಯೇ ಅಥವಾ ಪ್ರಚೋದನೆಯೇ ಎಂಬದು ಇಲ್ಲಿ ಅಪ್ರಸ್ತುತ ಮತ್ತು ಅನವಶ್ಯಕ.

ಧನುರ್ಧರನಾದ ಅರ್ಜುನನಿಗೆ ಹಿಂಸೆಯೇನೂ ಹೊಸದಲ್ಲ. ಮನುಷ್ಯರು ಮಾತ್ರವಲ್ಲ, ಪ್ರಾಣಿ-ಪಕ್ಷಿ-ಗಿಡ-ಮರಗಳನ್ನೂ ಅಗ್ನಿಗೆ ಆಹುತಿ ಕೊಟ್ಟ ಖಾಂಡವದಹನ ಪ್ರಕರಣವು ಅವನಿಗೆ ಮರೆತುಹೋಗಿರಲಾರದು. (ಆಗ ಹಸಿರು ನ್ಯಾಯಮಂಡಳಿ ಇರಲಿಲ್ಲ; ಮೇನಕಾ ಗಾಂಧಿಯೂ ಇರಲಿಲ್ಲ.) ಆದರೆ ತನ್ನ ತೀರ ಹತ್ತಿರದವರು, ರಕ್ತ ಸಂಬಂಧಿಗಳು ಎದುರಾದಾಗ ಅವರನ್ನು ಹಿಂಸಿಸುವುದು ಹೇಗೆ ಎಂಬ ಸಮಸ್ಯೆ ಅವನಿಗೆ. ಅರ್ಜುನ ಒಂದರ್ಥದಲ್ಲಿ ಶೇಕ್ಸ್‌ಪಿಯರಿನ ‘ಟು ಬಿ ಆರ್ ನಾಟ್ ಟು ಬಿ’ ಹ್ಯಾಮ್ಲೆಟ್. ಕೃಷ್ಣ ಬಾಲ್ಯದಿಂದಲೇ ಹಿಂಸಾ ಪಕ್ಷಪಾತಿ. ಪೂತನಿ ರಾಕ್ಷಸಿಯೆಂದಿರಲಿ; ಕ್ಷಮಿಸೋಣ. ಆದರೆ ತನ್ನ ಸೋದರಮಾವ ಕಂಸನನ್ನೇ ಕೊಂದವನು ಕೃಷ್ಣ. ಖಾಂಡವದಹನದ ರೂವಾರಿ. ಕುರುಕ್ಷೇತ್ರದಲ್ಲಿ ತಮ್ಮೆದುರಿರುವವರು ಕೃಷ್ಣನಿಗೆ ರಕ್ತ ಸಂಬಂಧಿಗಳಲ್ಲ. ಆದ್ದರಿಂದ ಅವನು ಅರ್ಜುನನಿಗಿಂತ ಹೆಚ್ಚು ವಸ್ತುನಿಷ್ಠನಾಗಿ ಯೋಚಿಸಬಲ್ಲ ಮತ್ತು ಅವನು ಹಿಂಸೆಯನ್ನು ತಾತ್ಕಾಲಿಕವೆಂದು ಅಥವಾ ಅನಿವಾರ್ಯವೆಂದು ಬಣ್ಣಿಸಲು ಇಹ-ಪರಗಳ ನಡುವೆ ಒಂದು ಸುಸೂತ್ರ ಯಾತ್ರೆಯನ್ನು ಕೈಗೊಳ್ಳಬಲ್ಲ. ಹಿಂಸೆಯ ವಿವಿಧ ಆಯಾಮಗಳನ್ನು ಪರಿಶೀಲಿಸಿದರೂ ಘನಘೋರ ರೀತಿಯ ಹಿಂಸೆ ಪರಂಪರೆಯಿಂದಲೇ ಬಂದಿದೆಯೆನ್ನಿಸುತ್ತದೆ. ಹಿಂಸೆಗೆ ಪ್ರತಿಹಿಂಸೆ ಅಗತ್ಯವೆಂಬ ರಾಜನೀತಿಯನ್ನು ಒಪ್ಪಿಕೊಂಡರೂ ಅದು ಸಮತೋಲವಾಗಿರಬೇಕಲ್ಲವೇ? ಕ್ಷಮೆಯನ್ನು ಉದಾತ್ತವಾಗಿಸುವ ಧಾರ್ಮಿಕ ಶಾಸ್ತ್ರಗಳು ಯುದ್ಧ ಮಾತ್ರವಲ್ಲ, ಇತರ ಸಂದರ್ಭಗಳಲ್ಲೂ ವಿಪರೀತ ಹಿಂಸೆಯನ್ನು ನಂಬಿಕೊಂಡಿವೆ.

ಮಹಾಭಾರತದಲ್ಲೇ ಆದರೂ ಅಭಿಮನ್ಯುವನ್ನು, ದುಃಶಾಸನನನ್ನು ಕೊಲ್ಲುವ ಪ್ರಸಂಗವು ಯಾವ ಹಲಾಲ್ ಅಥವಾ ಜಟ್ಕಾಕ್ಕೂ ಮೀರಿದ್ದೇ ಆಗಿದೆ. ಒಂದೊಂದೇ ಅಂಗಗಳನ್ನು ಕತ್ತರಿಸಿ ಮೋಜು ಮಾಡುವ ಉದಾಹರಣೆಗಳು ಹೇರಳವಾಗಿವೆ. ಭೀಮನು ದುಃಶಾಸನನ ಕರುಳು ಬಗೆಯುವ ನಿರೂಪಣೆಯು ಭಯಾನಕವೂ, ಬೀಭತ್ಸವೂ ಆಗಿದೆ. ವ್ಯಾಸಭಾರತದಲ್ಲಿ ಭೀಮನು ತನ್ನ ರಕ್ತ ಸಂಬಂಧಿ ದುಃಶಾಸನನ ರಕ್ತವನ್ನು ಕುಡಿಯುವ ಪ್ರಸಂಗವಿದೆ. ಅನುವಾದದಲ್ಲಿ ‘‘..ನಡುಗುತ್ತಿದ್ದ ದುಃಶಾಸನನ ಕುತ್ತಿಗೆಯನ್ನು ಕಾಲಿನಿಂದ ಮೆಟ್ಟಿ..’’ ಎಂಬರ್ಥದ ಶ್ಲೋಕವಿದೆ. (ಅಮೆರಿಕದಲ್ಲಿ ನೀಗ್ರೋ ಫ್ಲಾಯ್ಡಾ ನ ಕುತ್ತಿಗೆಯನ್ನು ಬಿಳಿಯ ಪೊಲೀಸನು ಹೀಗೆಯೇ ಮೆಟ್ಟಿದ್ದ!) ಮುಂದೆ ‘ಭೀಮಸೇನನು ತನ್ನ ಕೈಯಿಂದ ದುಃಶಾಸನನ ಭುಜವನ್ನು ಕಿತ್ತೆಸೆದನು’ ಮತ್ತು ‘ಭೂಮಿಯ ಮೇಲೆ ಬಿದ್ದಿದ್ದ ದುಃಶಾಸನನ ಎದೆಯನ್ನು ಬಗೆದು ಬಿಸಿ-ಬಿಸಿಯಾಗಿದ್ದ ರಕ್ತವನ್ನು ಕುಡಿಯಲು ಉಪಕ್ರಮಿಸಿದನು. ಅರ್ಧಂಬರ್ಧ ಜೀವಹೋಗಿದ್ದ ದುಃಶಾಸನನ ಶರೀರವು ವಿಲಿವಿಲಿಗುಟ್ಟುತ್ತಿದ್ದಿತು. ಮೇಲೇಳಲು ಪ್ರಯತ್ನಿಸುತ್ತಿದ್ದಿತು. ಅದನ್ನೂ ಸಹಿಸದಿದ್ದ ಭೀಮಸೇನನು ಕತ್ತಿಯನ್ನು ಹೊರತೆಗೆದು (ದುಃಶಾಸನನ) ತಲೆಯನ್ನು ಕತ್ತರಿಸಿ ಶರೀರವು ಪುನಃ ಮೇಲೇಳಲಾಗದಂತೆ ಕೆಳಕ್ಕೆ ಕೆಡವಿದನು.’ ಕರುಳನ್ನು ಬಗೆಯುವ ವಿವರಣೆ ವ್ಯಾಸಭಾರತದಲ್ಲಿಲ್ಲ.

ಆದರೆ ಭೀಮನು ಹೇಳುವ ‘ತಾಯಿಯ ಮೊಲೆಹಾಲಿಗಿಂತಲೂ, ತುಪ್ಪ-ಜೇನುತುಪ್ಪಗಳ ಮಿಶ್ರಣಕ್ಕಿಂತಲೂ, ಸಂಸ್ಕೃತವಾದ ದ್ರಾಕ್ಷಾರಸದಿಂದ ಸಿದ್ಧವಾದ ಪಾನೀಯಕ್ಕಿಂತಲೂ, ದಿವ್ಯವಾದ ತೋಯರಸದ ಪಾನಕ್ಕಿಂತಲೂ, ಹಾಲು-ಮೊಸರುಗಳಿಂದ ಕಡೆದು ಬರುವ ಮಜ್ಜಿಗೆಯ ಪಾನಕ್ಕಿಂತಲೂ, ಲೋಕದಲ್ಲಿರುವ ಸುಧಾಮೃತ-ಸ್ವಾದುರಸಗಳುಳ್ಳ ಇನ್ನೂ ಅನೇಕಪಾನಗಳಿಗಿಂತಲೂ ಶತ್ರುವಿನ ಈ ರಕ್ತರಸವೇ ನನಗೆ ಅತ್ಯಂತ ರುಚಿಯಾಗಿ ಕಾಣುತ್ತಿದೆ.’ ಎಂಬ ಮಾತುಗಳು ಸುಸಂಸ್ಕೃತವಾದವುಗಳಲ್ಲ. ನೋಡುತ್ತಿದ್ದವರು ‘ನ ವೈ ಮನುಷ್ಯೋಯಂ’ (ಇವನು ಖಂಡಿತವಾಗಿಯೂ ಮನುಷ್ಯನಲ್ಲ) ಎಂದರಂತೆ. ಈ ಪರಿಸ್ಥಿತಿಗೆ ರುದ್ರದೇವರನ್ನೂ ತರುವ ಪ್ರಯತ್ನ ನಡೆದಿದೆ. ಭೂಮಿಯನ್ನು ನೀರಿನ ಮೂಲಕ ಎಷ್ಟು ಆರ್ದ್ರಗೊಳಿಸಿದ್ದೇವೋ ಅಷ್ಟಲ್ಲದಿದ್ದರೂ ಸಾಕಷ್ಟು ಮಟ್ಟಿಗೆ ನವರಸಗಳಲ್ಲಿ ರಕ್ತರಸವನ್ನೂ ಸೇರಿಸಿದ್ದು ನಮ್ಮ ಕಲೆ ಮತ್ತು ಸಂಸ್ಕೃತಿ! ಕುಮಾರವ್ಯಾಸನಂತೂ ಇಂತಹ ಹಿಂಸೆಯನ್ನು ರಕ್ತರಂಜಿತವಾಗಿ ಹೇಳಿದ್ದಾನೆ. ಅವನ ಪಾಲಿಗೆ ಯುದ್ಧವೆಂದರೆ ‘ಮಾರಿಗೌತಣವಾಯ್ತು!’

ಪರಿಣಾಮವಾಗಿ ಸುಮಾರು 17 ಅಕ್ಷೋಹಿಣಿ ಸೇನೆ ಮತ್ತು ಅದರ ಪರಿಕರಗಳಾದ ಆನೆ-ಕುದುರೆಗಳು ನಾಶವಾಗುತ್ತವೆ. ಮುಖ್ಯವಾಗಿ ನೆನಪಿಡಬೇಕಾದದ್ದೆಂದರೆ ಇವೆಲ್ಲ ನಡೆದದ್ದು ನಾವು ಯಾವುದನ್ನು ಆರಾಧನಾರ್ಹವೆನ್ನುತ್ತೇವೆಯೋ ಆ ಭಗವದ್ಗೀತೆಯ ಆನಂತರ. ಅರ್ಜುನನಿಗೆ ಗೀತೋಪದೇಶವಾಗುತ್ತಿರುವಾಗ ಭೀಮಾದಿಗಳು ಅಲ್ಲಿರಲಿಲ್ಲವೇನೋ? ಅಥವಾ ಅದು ತನ್ನ ಕಾಲದಲ್ಲಿ ಜನಮನ್ನಣೆಯನ್ನು ಪಡೆದಿರಲಿಲ್ಲವೇನೋ? ಅಥವಾ ಆಗ ಕೃತಿಯ ಗೌರವವನ್ನು ಹೆಚ್ಚಿಸುವ ಮತ್ತು ವೈಭವೀಕರಿಸುವ ವಿಮರ್ಶಕರು ಇರಲಿಲ್ಲವೇನೋ? ಮಹಾಭಾರತದ ರಾಜಸೂಯದ ಸಂದರ್ಭದಲ್ಲಿ ಜರಾಸಂಧನ ಕಥೆ ಇದೆ. ಈತ ಕಂಸನ ಮಾವ. ಕೃಷ್ಣ ಯಾದವನಾದರೆ ಕಂಸನೂ ಯಾದವ; ಪರಿಣಾಮದಲ್ಲಿ ಜರಾಸಂಧನೂ ಯಾದವ. ಎಲ್ಲರೂ ರಾಜರೇ. ಆತನಿಗೆ ಹೆಸರು ಬಂದದ್ದೂ ಒಂದು ಕಥೆಯೇ. ಆತನನ್ನು ವಂಶಕಂಟಕನೆಂಬ ಕಾರಣಕ್ಕೆ ಹುಟ್ಟಿದಾಕ್ಷಣ ಸೀಳಿ ಎಸೆಯಲಾಗಿತ್ತಂತೆ. ಅದನ್ನು ಜರೆಯೆಂಬ ರಾಕ್ಷಸಿಯು ಜೋಡಿಸಿದಳಂತೆ.

ಒಂದು ಜೀವವನ್ನು ಕಾಪಾಡಿದವಳು, ಸೀಳಿದ ಅಂಗಗಳನ್ನು ಜೋಡಿಸಿದವಳು ರಾಕ್ಷಸಿಯಾಗಲು ಸಾಧ್ಯವಿಲ್ಲ. ಜೋಡಣೆಯೆಂಬುದು ಒಂದು ಇತ್ಯಾತ್ಮಕ ಪ್ರಕ್ರಿಯೆ. ಆತನನ್ನು ಸೀಳುವುದು ಅನೇಕ ಕಾಲದ ಅನಂತರ ಭೀಮ; ಕೃಷ್ಣನ ಸಂಜ್ಞೆಯಂತೆ. ಮಧ್ಯಯುಗದಲ್ಲಿ ಪಾಶ್ಚಾತ್ಯರಲ್ಲಿ ಅಪರಾಧಿಗಳನ್ನು ಸೀಳಲಾಗುತ್ತಿತ್ತೆಂದು ಮತ್ತು ಅದು ಕತ್ತಲಯುಗವೆಂದೂ ನಿರ್ದಯೆಯ ಕೃತ್ಯವೆಂದೂ ಹೇಳುವವರು ನಮ್ಮ ಈ ಪರಂಪರೆಯನ್ನು ನೆನಪಿಸಿಕೊಳ್ಳಬೇಕು. ಪಾಂಡವಾಶ್ವಮೇಧದಲ್ಲೂ ದೇಹವನ್ನು ದಾನನೀಡಿ ತುಂಡುಮಾಡುವ ಪ್ರಸಂಗವಿದೆ. ಗಾಂಧಿ ಭಗವದ್ಗೀತೆಯನ್ನು ಕಲ್ಪಿತ ಮತ್ತು ಸಾಂಕೇತಿಕವೆಂದು ಬಗೆದು ತತ್ಕಾಲೀನ ಪರಿಹಾರವನ್ನು ನೀಡಿದ್ದಾರೆ. ಸರಿ-ತಪ್ಪುಗಳ ನಡುವಣ ಮಾನಸಿಕ-ಬೌದ್ಧಿಕ ದ್ವಂದ್ವಕ್ಕೆ ರೂಪಕವೆಂದಿದ್ದಾರೆ. ಯುದ್ಧ ಹೇಗಿದ್ದರೂ ಇದು ನೀಡುವ ಸಂದೇಶವೆಂದರೆ ಎಲ್ಲ ಬಗೆಯ ಹೋರಾಟವು ಸಾಂದರ್ಭಿಕವಾಗಿ ಅನಿವಾರ್ಯವೆನಿಸಿದರೂ ಪರಿಣಾಮದಲ್ಲಿ ನಿರರ್ಥಕವೆಂಬುದೇ ಆಗಿದೆ. ಅವರು ಹೇಳುವ ‘ಗೀತೆಯಲ್ಲಿ ಹೇಳಿರುವ ಮೋಕ್ಷದ ಅರ್ಥ ಪರಮ ಶಾಂತಿ’ ಎನ್ನುವುದನ್ನು ಈಗ ಭಗವದ್ಗೀತೆಯ ಪರವಾಗಿರುವ ಯಾರೂ ಒಪ್ಪಲಾರರು. ಹಿಂಸೆಯ ಅನಾದಿತನವನ್ನು ಗಾಂಧಿ ‘ಗೀತಾಯುಗಕ್ಕೆ ಮುಂಚೆ ಪ್ರಾಯಶಃ ಪಶುಹಿಂಸೆ ಹಿತಕರವೆನಿಸಿದ್ದರೂ ಇರಬಹುದು’ ಎನ್ನುತ್ತಾರೆ. ‘ಇರಬಹುದು’ ಅಲ್ಲ, ‘ಇತ್ತು’. ಆಗ ಇನ್ನೂ ಮತಬೇಟೆಯಿರಲಿಲ್ಲ. ಆದ್ದರಿಂದ ಎಲ್ಲ ಪ್ರಾಣಿಗಳನ್ನು ಒಂದೇ ರೀತಿಯಲ್ಲಿ ಕಾಣಬಹುದಿತ್ತು. ಯಾವಾಗ ಅಲ್ಲೂ ವರ್ಣಾಶ್ರಮ ಧರ್ಮ ಆರಂಭವಾಯಿತೋ ಆಗ ಪ್ರಾಣಿಗಳಲ್ಲೂ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಎಂಬ ವರ್ಗೀಕರಣ ಆರಂಭವಾಯಿತು. ‘ಪಶು’ ಎಂದರೆ ‘ಗೋವು’ ಎಂಬ ಅರ್ಥಸಾನ್ನಿಧ್ಯವನ್ನು ಕಂಡುಕೊಂಡದ್ದು ಆನಂತರವೇ ಇರಬೇಕು.

ಇವೆಲ್ಲ ಹಿಂಸೆಯ ಅಸಂಖ್ಯ ತಾಂಡವ ಮುಖಗಳಲ್ಲಿ ಕೆಲವು ಮಾತ್ರ. ಮಹಾಭಾರತ ಒಂದು ಉದಾಹರಣೆ ಮಾತ್ರ. ಕನ್ನಡಕಾವ್ಯವೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇವನ್ನು ವೈಭವೀಕರಿಸುವ ಮೂಲಕ ಪಾಠವನ್ನು ಹೇಳಿ ಭವಿಷ್ಯದಲ್ಲಿ ಒಳಿತಾಗುತ್ತದೆಂದು ಕವಿಗಳು ಬಯಸಿದರೇನೋ ಗೊತ್ತಿಲ್ಲ. ಆದರೆ ನಾವು ಇವುಗಳಲ್ಲಿರುವ ಕೇಡಿನ ಭಾಗವನ್ನು ಬದುಕಿನಲ್ಲಿ ಹೇಗೆ ಬಳಸಬಹುದೆಂಬುದನ್ನಷ್ಟೇ ಈ ವರೆಗೂ ಕಲಿತದ್ದು. ಇವುಗಳಲ್ಲಿಲ್ಲದ ಹಿಂಸಾಪರ್ವವನ್ನು ನಾವು ಆಧುನಿಕ ಪ್ರಪಂಚದಲ್ಲಿ ಸೇರಿಸಿಕೊಂಡಿದ್ದೇವೆ ಮತ್ತು ಈ ಹಿಂಸೆಗೆ ಎಲ್ಲಿ ಸಾಧ್ಯವೋ ಅಲ್ಲಿ ಧರ್ಮದ ನೆರಳನ್ನು ಆಶ್ರಯಿಸಿದ್ದೇವೆ. ಎಲ್ಲವೂ ಧರ್ಮಕ್ಕಾಗಿ. ಈಗ ಮತ್ತೆ ಯಾವುದು ಹೆಚ್ಚು ಹಿಂಸಾತ್ಮಕ ಯಾವುದು ಅಲ್ಲ ಎಂಬುದರ ಚರ್ಚೆಯಾಗುತ್ತಿದೆ. ಯುದ್ಧ ನಡೆದರೆ ಅದು ಶಾಂತಿಗಾಗಿ ಎನ್ನುತ್ತೇವೆ. ಅಲ್ಲಿ ನಡೆಯುವ ‘ಯುದ್ಧಾಪರಾಧ’ಗಳನ್ನು ನಮಗೆ ಅನುಕೂಲವಾದಂತೆ ಸಮರ್ಥಿಸಿಕೊಳ್ಳುತ್ತೇವೆ ಇಲ್ಲವೇ ವಿರೋಧಿಸುತ್ತೇವೆ. ಶಾಂತಿಯ ಸಮಯದಲ್ಲಿ ನಡೆಯುವ ಅಪರಾಧಗಳ (ಇವನ್ನು ‘ಶಾಂತ್ಯಾಪರಾಧ’ವೆಂದು ಹೇಳಬಹುದೇನೋ?) ನಿಯಂತ್ರಣಕ್ಕೆ ಕಾನೂನನ್ನು ರೂಪಿಸಿದರೂ ಅದು ನಿರರ್ಥಕವೆಂಬುದನ್ನು ನಮ್ಮನ್ನಾಳುವವರೂ ನಮ್ಮಲ್ಲಿರುವ ಮನುಷ್ಯರೂಪದ ರಾಕ್ಷಸರೂ ತೋರಿಸಿಕೊಟ್ಟಿದ್ದಾರೆ. ಇದು ಜಾಗತಿಕ ಹಿಂಸಾಯುಗ. ಇಲ್ಲಿ ಎಲ್ಲ ದೇಶಗಳೂ ಸ್ಪರ್ಧಾಳುಗಳು. ಪ್ರಸ್ತುತವನ್ನು, ವರ್ತಮಾನವನ್ನು ಮರೆತು ತಮ್ಮ ಪಾಡಿಗೆ ತಾವಿರುವ ಐಪಿಎಲ್ ಕಲಿಗಳು, ತಮ್ಮ ಬೆನ್ನುಮೂಳೆಯನ್ನು ದಾನಮಾಡಿ ದಧೀಚಿತ್ವವನ್ನು ಸಂಪಾದಿಸಿ ಶಾಶ್ವತವಾಗಿ ನಡುಬಗ್ಗಿ ಸಲಾಮು ಮಾಡುವ ಚಿಂತಕರು-ಸಾಹಿತಿಗಳು ಮಾತ್ರ ಇನ್ನೊಂದು ರೀತಿಯಲ್ಲಿ ಶಾಶ್ವತ ಹಗಲಿನ, ಗೆಲುವಿನ ನಗೆ ಬೀರುವವರು. ಇವುಗಳೆಲ್ಲ ಮುಗಿದ ಮೇಲೆ ಹೋರಾಡುವುದಾದರೂ ಯಾರಲ್ಲಿ? ಆ ಸಂದರ್ಭ ಇನ್ನೂ ಬಂದಿಲ್ಲವಾದ್ದರಿಂದ ಈಗ ಹಿಂಸೆಯ ಮೂಲಕ ಸುಖಿಸಬಹುದು.

ಮತ್ತೆ ಮಹಾಭಾರತದ ಕೊನೆಯನ್ನು ಶೋಧಿಸಿದರೆ ಭೀಷ್ಮರು ಧರ್ಮರಾಜನಿಗೆ ಹೇಳುವ ಈ ಮಾತು ಮಾತ್ರ ಇಂದಿಗೂ ಪ್ರಸ್ತುತವೆಂದು ಕಾಣಿಸುತ್ತದೆ: ‘ಮಹಾನ್ಕ್ಲೇಶೋ ಹಿ ಭವತಿ ತಸ್ಮಾನ್ನೋಪದಿಶೇದಿಹ’; ಎಂದರೆ 'ಉಪದೇಶ ಮಾಡುವುದರಿಂದ ಮಹಾಕ್ಲೇಶವೇ ಉಂಟಾಗುತ್ತದೆ. ಆದುದರಿಂದ ಇಲ್ಲಿ ಯಾರಿಗೂ ಉಪದೇಶವನ್ನು ಮಾಡಲೇಬಾರದು.'

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top