ಯಮನ್: ಹುದೈದಾ ಕೇಂದ್ರ ಭಾಗಕ್ಕೆ ಮುನ್ನುಗ್ಗಿದ ಮಿತ್ರಪಡೆಗಳು
ಏಡನ್, ಜೂ. 24: ಯಮನ್ನ ಪ್ರಮುಖ ಬಂದರು ನಗರ ಹುದೈದಾದ ಕೇಂದ್ರ ಭಾಗಕ್ಕೆ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳು ಮುನ್ನುಗ್ಗುತ್ತಿರುವಂತೆಯೇ, ಇರಾನ್ ಬೆಂಬಲಿತ ಹೌದಿ ಬಂಡುಕೋರರು ರವಿವಾರ ನಗರದಲ್ಲಿ ಹೆಚ್ಚುವರಿ ಹೋರಾಟಗಾರರನ್ನು ನಿಯೋಜಿಸಿದ್ದಾರೆ.
ರಾಜಧಾನಿ ಸನಾ ಮತ್ತು ಇತರ ನಗರಗಳನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿರುವ ಹೌದಿ ಬಂಡುಕೋರರನ್ನು ಮಣಿಸುವ ನಿಟ್ಟಿನಲ್ಲಿ ಅವರ ಪೂರೈಕೆ ಮಾರ್ಗವನ್ನು ಕಡಿಯಲು ಮಿತ್ರಪಡೆ ಮುಂದಾಗಿರುವುದನ್ನು ಸ್ಮರಿಸಬಹುದಾಗಿದೆ. ಈ ಯೋಜನೆಯ ಭಾಗವಾಗಿ ಕೆಂಪು ಸಮುದ್ರದ ಬಂದರು ನಗರ ಹುದೈದಾವನ್ನು ಬಂಡುಕೋರರಿಂದ ಮುಕ್ತಗೊಳಿಸುವುದಕ್ಕಾಗಿ ಮಿತ್ರಪಡೆಗಳು ಜೂನ್ 12ರಂದು ದಾಳಿ ನಡೆಸಿದ್ದವು.
‘‘ಹುದೈದಾ ನಗರದಲ್ಲಿ ಸಶಸ್ತ್ರ ಬಂಡುಕೋರರನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಹಾಗೂ ಉಪನಗರಗಳಲ್ಲಿ ಹೊಸ ತಪಾಸಣಾ ಠಾಣೆಗಳನ್ನು ಸ್ಥಾಪಿಸಲಾಗಿದೆ’’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಹುದೈದಾ ವಿಶ್ವವಿದ್ಯಾನಿಲಯ ಸಮೀಪ ಮಧ್ಯರಾತ್ರಿಯ ಬಳಿಕ ಭೀಕರ ಕಾಳಗ ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಮಿತ್ರಪಡೆಗಳು ಹುದೈದಾ ವಿಮಾನ ನಿಲ್ದಾಣವನ್ನು ಬುಧವಾರ ವಶಪಡಿಸಿಕೊಂಡಿವೆ ಹಾಗೂ ಈ ಪ್ರದೇಶದ ಮೇಲೆ ತಮ್ಮ ಹಿಡಿತವನ್ನು ಬಲಪಡಿಸಲು ಪ್ರಯತ್ನಿಸುತ್ತಿವೆ.