ಬಂಡುಕೋರನಾಗಿ ಮಾರ್ಪಟ್ಟ ಸಿರಿಯದ ಮಾಜಿ ಫುಟ್ಬಾಲ್ ಆಟಗಾರ ಸರಕಾರಿ ಪಡೆಗಳ ಗುಂಡಿಗೆ ಬಲಿ
ಡಮಾಸ್ಕಸ್,ಜೂ.6: ಸಿರಿಯದ ಜನಪ್ರಿಯ ಫುಟ್ಬಾಲ್ ಆಟಗಾರನಾಗಿದ್ದು, ಆನಂತರ ಬಂಡುಕೋರನಾಗಿ ಮಾರ್ಪಟ್ಟ 27 ವರ್ಷ ವಯಸ್ಸಿನ ಅಬ್ದುಲ್ ಬಸ್ಸೆತ್ ಸರೌಟ್ ವಾಯವ್ಯ ಭಾಗದಲ್ಲಿ ಸರಕಾರಿ ಪಡೆಗಳ ನಡುವೆ ನಡೆದ ಕದನದಲ್ಲಿ ಸಾವನ್ನಪ್ಪಿರುವುದಾಗಿ ಆತ ಕಾರ್ಯಾಚರಿಸುತ್ತಿದ್ದ ಜೈಶ್ ಅಲ್ ಇಝಾ ಎಂಬ ಬಂಡುಕೋರ ಗುಂಪು ತಿಳಿಸಿದೆ.
ಸಿರಿಯದ ಹೊಮ್ಸ್ ನಗರದ ನಿವಾಸಿಯಾದ ಸರೌತ್ ಒಂದು ಸಮಯದಲ್ಲಿ ದೇಶದ ಪ್ರಸಿದ್ಧ ಗೋಲ್ಕೀಪರ್ ಎನಿಸಿಕೊಂಡಿದ್ದ. 2011ರಲ್ಲಿ ಬಶರ್ ಅಸ್ಸಾದ್ ಆಡಳಿತದ ವಿರುದ್ಧ ನಡೆದ ಬಂಡಾಯದಲ್ಲಿ ಆತ ಕೈಜೋಡಿಸಿದ್ದ.
ಅಸ್ಸಾದ್ ವಿರುದ್ಧದ ಪ್ರತಿಭಟನಾಸಭೆಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಆತ ಕ್ರಾಂತಿಕಾರಿ ಹಾಡುಗಾರನೆಂಬುದಾಗಿಯೂ ಕರೆಯಲ್ಪಟ್ಟಿದ್ದ.
ಅಸ್ಸಾದ್ ಸರಕಾರವು ಪ್ರತಿಭಟನೆಗಳನ್ನು ಹತ್ತಿಕ್ಕಿದ ಬಳಿಕ ಆತ ಜೈಶ್ ಅಲ್ ಇಝ್ಜಿ ಎಂಬ ಬಂಡುಕೋರ ಗುಂಪನ್ನು ಸೇರಿಕೊಂಡಿದ್ದ. ಹೆಮಾ ಪ್ರಾಂತದಲ್ಲಿ ಶುಕ್ರವಾರ ಸರಕಾರಿ ಪಡೆಗಳ ಜೊತೆ ನಡೆದ ಸಂಘರ್ಷದಲ್ಲಿ ಆತ ಗಂಭೀರ ಗಾಯಗೊಂಡಿದ್ದ. ಶನಿವಾರ ಆತ ಕೊನೆಯುಸಿರೆಳೆದನೆಂದು ಬಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಯುವ್ಯ ಸಿರಿಯದಲ್ಲಿ ಬಂಡುಕೋರರು ಹಾಗೂ ಸೇನೆಯ ನಡುವೆ ನಡೆದ ಭೀಕರ ಸಂಘರ್ಷ ಶುಕ್ರವಾರ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು.