ಬಾಹ್ಯಾಕಾಶ ಕೇಂದ್ರದಿಂದ ಮಕ್ಕಾ ಮಸೀದಿಯ ವಿಹಂಗಮ ಚಿತ್ರ ಪೋಸ್ಟ್ ಮಾಡಿದ ಯುಎಇಯ ಪ್ರಥಮ ಗಗನಯಾತ್ರಿ ಹಝ್ಝಾ ಮನ್ಸೂರಿ
ರಿಯಾದ್: ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ ಸಂಯುಕ್ತ ಅರಬ್ ಸಂಸ್ಥಾನದ ಪ್ರಥಮ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಹಝ್ಝಾ ಅಲ್ ಮನ್ಸೂರಿ ಬಾಹ್ಯಾಕಾಶದಿಂದ ಇಸ್ಲಾಂ ಧರ್ಮೀಯರ ಅತ್ಯಂತ ಪವಿತ್ರ ಕ್ಷೇತ್ರವಾದ ಸೌದಿ ಅರೇಬಿಯಾದ ಮಕ್ಕಾದ ಮಸ್ಜಿದ್ ಅಲ್ ಹರಾಂ (ದಿ ಗ್ರ್ಯಾಂಡ್ ಮಸೀದಿ) ಇದರ ವಿಹಂಗಮ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಭೂಮಿಯಿಂದ ಸುಮಾರು 350 ಕಿಮೀ ದೂರದಲ್ಲಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅವರು ಸುತ್ತುವರಿಯುವಾಗ ಈ ಚಿತ್ರ ಕ್ಲಿಕ್ಕಿಸಿ ಕಳುಹಿಸಿದ್ದಾರೆ.
ತಾವು ಪೋಸ್ಟ್ ಮಾಡಿದ್ದ ಮೆಕ್ಕಾ ಚಿತ್ರಕ್ಕೆ ಅವರು ನೀಡಿದ ಶೀರ್ಷಿಕೆ ಹೀಗಿತ್ತು- ``ಮುಸ್ಲಿಮರ ಹೃದಯಗಳಲ್ಲಿ ನೆಲೆಸಿರುವ ಹಾಗೂ ಪ್ರಾರ್ಥನೆಗೆ ಅವರು ತೆರಳುವ ಸ್ಥಳ."
ಇದಕ್ಕೂ ಮೊದಲು ಅವರು ಬಾಹ್ಯಾಕಾಶದಿಂದ ಸಂಯುಕ್ತ ಅರಬ್ ಸಂಸ್ಥಾನದ ಚಿತ್ರ ಪೋಸ್ಟ್ ಮಾಡಿ ``ಅತ್ಯಂತ ಸಂತುಷ್ಟ ಗಗನಯಾತ್ರಿಯಿಂದ ಅತ್ಯಂತ ಸಂತುಷ್ಟ ದೇಶಕ್ಕೆ.. ಇದು ಇತಿಹಾಸ, ಇದು ಬಾಹ್ಯಾಕಾಶದಿಂದ ಯುಎಇ,'' ಎಂದು ಬರೆದಿದ್ದಾರೆ.
ಬಾಹ್ಯಾಕಾಶ ಕೇಂದ್ರದಲ್ಲಿರುವಾಗ ಅವರು ತಮ್ಮ ದೇಶದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿರುವ ಚಿತ್ರವೂ ಕಾಣಿಸಿದೆ.