ಸೈಬೀರಿಯಾ: ಅಗ್ನಿ ದುರಂತದಲ್ಲಿ 11 ಕಾರ್ಮಿಕರ ಸಾವು
ಮಾಸ್ಕೊ, ಜ.21: ರಶ್ಯಾದ ಸೈಬೀರಿಯಾದ ಹಳ್ಳಿಯೊಂದರಲ್ಲಿರುವ ಮರ ಸಿಗಿಯುವ ಮಿಲ್ನಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಟ 11 ಕಾರ್ಮಿಕರು ಮೃತಪಟ್ಟಿದ್ದು ಇಬ್ಬರು ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಮೃತಪಟ್ಟವರಲ್ಲಿ 10 ಮಂದಿ ಉಜ್ಬೇಕಿಸ್ತಾನದ ಪ್ರಜೆಗಳು ಮತ್ತು ಓರ್ವ ತಾಜಿಕ್ಸ್ತಾನದ ಪ್ರಜೆಯಾಗಿದ್ದಾನೆ. ಮರದಿಂದಲೇ ನಿರ್ಮಿಸಲಾಗಿದ್ದ ಕಟ್ಟಡದಲ್ಲಿ ಒಂದು ಬದಿ ಮಿಲ್ ಕಾರ್ಯಾಚರಿಸುತ್ತಿದ್ದರೆ ಇನ್ನೊಂದು ಬದಿಯಲ್ಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆಗೊಳಿಸಲಾಗಿತ್ತು.
ಮರದ ಮಿಲ್ ಅನ್ನು ಚೀನಾದ ಸಂಸ್ಥೆಯೊಂದು ಬಾಡಿಗೆಗೆ ಪಡೆದಿತ್ತು. ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮರದ ಮಿಲ್ನಲ್ಲಿ 14 ಕಾರ್ಮಿಕರಿದ್ದು ಮೃತಪಟ್ಟ 11 ಮಂದಿ ಹಾಗೂ ಗಾಯಗೊಂಡ ಇಬ್ಬರ ಗುರುತು ಪತ್ತೆಯಾಗಿದೆ. ಇನ್ನೊಬ್ಬ ಕಾರ್ಮಿಕನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಅಗ್ನಿಶಾಮಕ ಪಡೆಗಳು ಬೆಂಕಿಯನ್ನು ಹತೋಟಿಗೆ ತಂದಿವೆ ಎಂದು ವರದಿ ತಿಳಿಸಿದೆ.
Next Story