ಪುಟಿನ್ಗೆ ಪಾರ್ಕಿನ್ಸನ್ ಕಾಯಿಲೆ?
ಜನವರಿಯಲ್ಲಿ ರಾಜೀನಾಮೆ: ಮೂಲಗಳು
ಮಾಸ್ಕೋ (ರಶ್ಯ), ನ. 6: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಅವರು ಮುಂದಿನ ವರ್ಷದ ಆರಂಭದಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪುಟಿನ್ರ ಆರೋಗ್ಯಕ್ಕೆ ಸಂಬಂಧಿಸಿ ಕಳೆದ ಕೆಲವು ದಿನಗಳಿಂದ ಊಹಾಪೋಹಗಳು ಹರಿದಾಡುತ್ತಿವೆ. ಅವರು ಪಾರ್ಕಿನ್ಸನ್ ಕಾಯಿಲೆ (ನರಮಂಡಲದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ರೋಗ. ರೋಗ ಉಲ್ಬಣಗೊಳ್ಳುತ್ತಿರುವಂತೆ, ರೋಗಿಯ ದೇಹದ ಭಾಗಗಳ ಚಲನೆಯಲ್ಲಿ ಅಸ್ಥಿರತೆ ಕಾಣಿಸಿಕೊಳ್ಳುತ್ತದೆ)ಯಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಜನವರಿಯಲ್ಲೇ ಅವರು ಅಧಿಕಾರದಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
68 ವರ್ಷದ ಪುಟಿನ್ ಪಾರ್ಕಿನ್ಸನ್ ಕಾಯಿಲೆಗೆ ಒಳಗಾಗಿರುವ ಸಾಧ್ಯತೆಯಿದೆ ಎಂದು ಅವರನ್ನು ಗಮನಿಸಿದವರು ಹೇಳುತ್ತಾರೆ. ಪುಟಿನ್ರಲ್ಲಿ ಈ ಕಾಯಿಲೆಯ ಲಕ್ಷಣಗಳನ್ನು ಅವರು ಗಮನಿಸಿದ್ದಾರೆ.
ಅವರ ಇತ್ತೀಚಿನ ವೀಡಿಯೊವೊಂದರಲ್ಲಿ, ಅವರ ಕಾಲುಗಳು ನಡುಗುತ್ತಿರುವುದು ಹಾಗೂ ಅವರು ಕುರ್ಚಿಯೊಂದರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದನ್ನು ಗಮನಿಸಲಾಗಿದೆ. ಇತ್ತೀಚೆಗೆ ಅವರು ಪೆನ್ನು ಹಿಡಿದುಕೊಂಡಿರುವಾಗ ಕೈಯ ವೇಗದ ಚಲನೆಯನ್ನು ಕೆಲವರು ಗಮನಿಸಿದ್ದಾರೆ ಎಂದು ‘ದ ಸನ್’ ಪತ್ರಿಕೆ ವರದಿ ಮಾಡಿದೆ.
ಅಸಂಬದ್ಧ: ರಶ್ಯ ಸರಕಾರದ ವಕ್ತಾರ
‘‘ವ್ಲಾದಿಮಿರ್ ಪುಟಿನ್ರ ಆರೋಗ್ಯಕ್ಕೆ ಸಂಬಂಧಿಸಿದ ಊಹಾಪೋಹಗಳು ಅತ್ಯಂತ ಅಸಂಬದ್ಧ. ಅಧ್ಯಕ್ಷರಲ್ಲಿ ಎಲ್ಲ ಸರಿಯಾಗಿದೆ’’ ಎಂದು ರಶ್ಯ ಸರಕಾರದ ವಕ್ತಾರ ಡಿಮಿಟ್ರಿ ಪೆಸ್ಕೊವ್ ಹೇಳಿದ್ದಾರೆ. ಅವರು ಶೀಘ್ರದಲ್ಲೇ ಅಧಿಕಾರದಿಂದ ಕೆಳಗಿಳಿಯುವ ಯೋಜನೆ ಹೊಂದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೆಸ್ಕೊವ್, ‘‘ಇಲ್ಲ’’ ಎಂದರು.