ಇರಾನ್ ಪರಮಾಣು ಸ್ಥಾವರದ ಮೇಲೆ ದಾಳಿ ನಡೆಸುವ ಕುರಿತು ಚರ್ಚಿಸಿ ನಂತರ ಹಿಂದೆ ಸರಿದ ಟ್ರಂಪ್: ವರದಿ
ವಾಷಿಂಗ್ಟನ್ : ಇರಾನ್ ದೇಶದ ಮುಖ್ಯ ಪರಮಾಣು ಸ್ಥಳದ ಮೇಲೆ ದಾಳಿ ನಡೆಸುವ ಕುರಿತಂತೆ ಇರುವ ಆಯ್ಕೆಗಳ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ತಮ್ಮ ಅಧಿಕಾರಿಗಳಲ್ಲಿ ಕೇಳಿದ್ದರೆನ್ನಲಾಗಿದ್ದು, ಅಂತಿಮವಾಗಿ ಇಂತಹ ಒಂದು ವಿಪರೀತ ಕ್ರಮ ಕೈಗೊಳ್ಳದೇ ಇರಲು ನಿರ್ಧರಿಸಿದರು ಎಂದು ಅಧಿಕಾರಿಯೊಬ್ಬರು ಬಹಿರಂಗಗೊಳಿಸಿದ್ದಾರೆ.
ಕಳೆದ ಗುರುವಾರ ನಡೆದ ಸಭೆಯಲ್ಲಿ ಟ್ರಂಪ್ ಅವರು ಮೇಲಿನ ವಿಚಾರ ಕುರಿತಂತೆ ಉಪಾಧ್ಯಕ್ಷ ಮೈಕ್ ಪೆನ್ಸ್, ಹಂಗಾಮಿ ರಕ್ಷಣಾ ಕಾರ್ಯದರ್ಶಿ ಕ್ರಿಸ್ಟೋಫರ್ ಮಿಲ್ಲರ್ ಹಾಗೂ ಸೇನಾ ಪಡೆಗಳ ಜಂಟಿ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲೆ ಅವರಲ್ಲಿ ಕೇಳಿದ್ದರು. ಆಗ ಇಂತಹ ಒಂದು ಕ್ರಮ ಕೈಗೊಂಡಲ್ಲಿ ಅದು ವಿಪರೀತ ಸಂಘರ್ಷಕ್ಕೆ ತಿರುಗುವ ಸಾಧ್ಯತೆಯ ಅಪಾಯವಿರುವುದರಿಂದ ಇಂತಹ ಕ್ರಮ ಕೈಗೊಳ್ಳದೇ ಇರುವಂತೆ ಅವರಿಗೆ ಎಲ್ಲಾ ಉನ್ನತಾಧಿಕಾರಿಗಳು ಸಲಹೆ ನೀಡಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಸಭೆಯ ಕುರಿತು ಮಾಹಿತಿ ನೀಡಿರುವುದನ್ನು 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಲು ಶ್ವೇತಭವನ ನಿರಾಕರಿಸಿದೆ. ಟ್ರಂಪ್ ಅವರು ತಮ್ಮ ಅಧಿಕಾರಾವಧಿಯುದ್ದಕ್ಕೂ ಇರಾನ್ ವಿರುದ್ಧ ಆಕ್ರಮಣಕಾರಿ ನೀತಿಯನ್ನು ಅನುಸರಿಸಿದ್ದರಲ್ಲದೆ ಪೂರ್ವ ಅಧ್ಯಕ್ಷ ಬರಾಕ್ ಒಬಾಮ ಅವರು ಸಹಿ ಹಾಕಿದ್ದ ಇರಾನ್ ಪರಮಾಣು ಒಪ್ಪಂದದಿಂದಲೂ ಹಿಂದೆ ಸರಿದಿದ್ದರು, ಅಷ್ಟೇ ಅಲ್ಲದೆ ಇರಾನ್ ಮೇಲೆ ಆರ್ಥಿಕ ನಿರ್ಬಂಧಗಳನ್ನೂ ಹೇರಿದ್ದರು.
ದೊಡ್ಡ ದೇಶಗಳೊಂದಿಗೆ ಇರಾನ್ ತಾನು ಹೊಂದಿರುವ ಅಣು ಒಪ್ಪಂದವನ್ನು ಉಲ್ಲಂಘಿಸಿ ತನ್ನ ಯುರೇನಿಯಂ ಮುಖ್ಯ ಸ್ಥಾವರದಿಂದ ದೊಡ್ಡ ಪ್ರಮಾಣದ ಯರೇನಿಯಂ ಅನ್ನು ಇತ್ತೀಚೆಗೆ ಭೂಗತ ಸ್ಥಳಕ್ಕೆ ಸ್ಥಳಾಂತರಿಸಿದೆ ಎಂಬ ಒಂದು ವರದಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಟ್ರಂಪ್ ಇರಾನ್ ವಿರುದ್ಧ ಕ್ರಮ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರೆನ್ನಲಾಗಿದೆ.