ಇಸ್ರೇಲ್ ಪ್ರಧಾನಿಯಿಂದ ಸೌದಿಗೆ ರಹಸ್ಯ ಭೇಟಿ: ಯುವರಾಜ ಸಲ್ಮಾನ್ ಜೊತೆ ಮಾತುಕತೆ
ಜೆರುಸಲೇಂ,ನ.23: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಿಶೇಷ ವಿಮಾನದ ಮೂಲಕ ಸೌದಿಗೆ ಆಗಮಿಸಿ, ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆಂದು ಇಸ್ರೇಲ್ನ ಸುದ್ದಿಸಂಸ್ಥೆಯೊಂದು ಸೋಮವಾರ ವರದಿ ಮಾಡಿದೆ. ಇಸ್ರೇಲ್ ಹಾಗೂ ಸೌದಿ ಉನ್ನತ ನಾಯಕರ ನಡುವೆ ನಡೆದ ಪ್ರಪ್ರಥಮ ಮಾತುಕತೆ ಇದೆನ್ನಲಾಗಿದೆ.
ಬೆಂಜಮಿನ್ ನೆತಾನ್ಯಾಹು ಹಾಗೂ ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸ್ಸಾದ್ನ ವರಿಷ್ಠ ಯೊಸ್ಸಿ ಕೊಹೆನ್ ಅವರು ರವಿವಾರ ಸೌದಿಯ ನಿಯೋಮ್ ನಗರಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದು, ಅಲ್ಲಿ ಅವರು ಯುವರಾಜ ಸಲ್ಮಾನ್ ಅವರನ್ನು ಭೇಟಿಯಾದರೆಂದು ಇಸ್ರೇಲಿ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಹಿಬ್ರೂ ಭಾಷೆಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಸೌದಿಗೆ ಭೇಟಿ ನೀಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಜೊತೆ ಮಾತುಕತೆ ನಡೆಸುವುದಕ್ಕಾಗಿ ಸಲ್ಮಾನ್, ನಿಯೋಮ್ ನಗರಕ್ಕೆ ಆಗಮಿಸಿದ್ದರು.
ಸೌದಿ ಭೇಟಿಯ ಬಗ್ಗೆ ಇಸ್ರೇಲ್ ಪ್ರಧಾನಿಯವರ ಕಾರ್ಯಾಲಯವು ಈ ಕುರಿತ ಮಾಧ್ಯಮಗಳ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲವೆಂದು ತಿಳಿದುಬಂದಿದೆ. ಇಸ್ರೇಲ್ ಇತ್ತೀಚೆಗೆ ಬಹರೈನ್ ಹಾಗೂ ಯುಎಇ ಜೊತೆಗೆ ದ್ವಿಪಕ್ಷೀಯ ಬಾಂಧವ್ಯಗಳನ್ನು ಬಲಪಡಿಸುವ ಒಪ್ಪಂದಗಳಿಗೆ ಸಹಿ ಹಾಕಿತ್ತು. ಇಸ್ರೇಲ್, ಸೌದಿ ಆರೇಬಿಯದ ಜೊತೆಗೂ ಬಹಳ ಸಮಯದಿಂದಲೂ ರಹಸ್ಯವಾಗಿ ಭದ್ರತೆಗೆ ಸಂಬಂಧಿಸಿ ನಂಟುಗಳನ್ನು ಹೊಂದಿದೆಯೆನ್ನಲಾಗಿದೆ.
ಸೌದಿ ಆರೇಬಿಯ ಕೂಡಾ ಇಸ್ರೇಲ್ ಜೊತೆಗೆ ರಾಜತಾಂತ್ರಿಕ ಬಾಂಧವ್ಯಗಳನ್ನು ಸ್ಥಾಪಿಸಲು ಪರಿಶೀಲಿಸುತ್ತಿದೆಯೆಂಬ ವದಂತಿಗಳು ಈಗಾಗಲೇ ಹರಿದಾಡುತ್ತಿವೆ.