ನಕಲಿ ಅರ್ಹತಾ ಪತ್ರ ವಿವಾದ: 50 ಪಾಕ್ ಪೈಲಟ್ಗಳ ಲೈಸೆನ್ಸ್ ರದ್ದು
ಇಸ್ಲಾಮಾಬಾದ್, ಡಿ.20: ನಕಲಿ ಅರ್ಹತಾಪತ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸುಮಾರು 50 ಮಂದಿ ಪೈಲಟ್ಗಳ ಲೈಸೆನ್ಸ್ಗಳನ್ನು ಪಾಕಿಸ್ತಾನ ಸರಕಾರವು ರದ್ದು ಪಡಿಸಿದೆ. ಅಕ್ರಮ ವಿಧಾನಗಳಿಂದ ಅವರು ಹೇಗೆ ಪ್ರಮಾಣಪತ್ರಗಳನ್ನು ಪಡೆದು ಕೊಂಡಿದ್ದಾರೆಂಬ ಬಗ್ಗೆ ತನ್ನ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆಂದು ಪಾಕಿಸ್ತಾನದ ನಾಗರಿಕ ವಾಯುಯಾನ ಪ್ರಾಧಿಕಾರ (ಸಿಎಎ), ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಮೇ 22ರಂದು ಪಾಕಿಸ್ತಾನದ ಕರಾಚಿಯಲ್ಲಿ ಪಾಕಿಸ್ತಾನ ಇಂಟರ್ನ್ಯಾಶನಲ್ ಏರ್ಲೈನ್ಸ್ನ ವಿಮಾನವೊಂದು ಪತನಗೊಂಡು, 97 ಮಂದಿ ಮೃತಪಟ್ಟ ಘಟನೆಯ ಬಳಿಕ, ಆ ದೇಶದಲ್ಲಿ ಹಲವಾರು ಪೈಲಟ್ಗಳು ನಕಲಿ ಪ್ರಮಾಣಪತ್ರಗಳೊಂದಿಗೆ ಉದ್ಯೋಗಕ್ಕೆ ಸೇರ್ಪಡೆಗೊಂಡಿರುವುದು ಬಯಲಾಗಿತ್ತು.
ಪಾಕ್ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ 860 ಪೈಲಟ್ಗಳ ಪೈಕಿ 260 ಮಂದಿ ನಕಲಿ ಲೈಸೆನ್ಸ್ಗಳನ್ನು ಹೊಂದಿದ್ದಾರೆ ಅಥವಾ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಉತ್ತೀರ್ಣರಾಗಿದ್ದರೆಂದು ವಾಯುಯಾನ ಸಚಿವ ಗುಲಾಮ್ ಸರ್ವಾರ್ ಖಾನ್ ರವಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಾಕ್ನಿಂದ ಹೊರಗೆ ಕೆಲಸ ಮಾಡುತ್ತಿರುವವರು ಸೇರಿದಂತೆ ಇತರ ಪೈಲಟ್ಗಳ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡದಂತೆ ನೋಡಿಕೊಳ್ಳಲು ಅನರ್ಹಗೊಂಡ ಪೈಲಟ್ಗಳ ಹೆಸರುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿದೆ ಎಂದವರು ಹೇಳಿದ್ದಾರೆ.
ಪಾಕಿಸ್ತಾನದ ನಾಗರಿಕ ವಾಯುಯಾನ ಇಲಾಖೆಯು ಈವರೆಗೆ 860 ವಾಣಿಜ್ಯ ಪೈಲಟ್ಗಳ ಲೈಸೆನ್ಸ್ಗಳನ್ನು ಪರಿಶೀಲಿಸಿದ್ದು, ಅವರಲ್ಲಿ 50 ಮಂದಿಯ ಲೈಸೆನ್ಸ್ಗಳನ್ನು ರದ್ದುಪಡಿಸಿದೆ.