ಕೊರೋನ ನಿರ್ಮೂಲನೆಗೆ 1.9 ಟ್ರಿಲಿಯನ್ ಯೋಜನೆ ಘೋಷಿಸಿದ ಜೋ ಬೈಡನ್
ವಾಷಿಂಗ್ಟನ್ : ಈ ತಿಂಗಳ 21ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೋ ಬೈಡನ್ ಬಹುನಿರೀಕ್ಷಿತ 1.9 ಟ್ರಿಲಿಯನ್ ಮೊತ್ತದ ಕೊರೋನ ವೈರಸ್ ಯೋಜನೆಯನ್ನು ಪ್ರಕಟಿಸಿದ್ದಾರೆ.
ಮಾರಕ ವೈರಸ್ ಬೆಳವಣಿಗೆಗೆ ಕಡಿವಾಣ, ಲಸಿಕೆ ನೀಡಿಕೆ ತ್ವರಿತಗೊಳಿಸುವುದು ಮತ್ತು ವ್ಯಕ್ತಿಗಳು, ರಾಜ್ಯಗಳು, ಸ್ಥಳೀಯ ಆಡಳಿತ ಹಾಗೂ ಆರ್ಥಿಕ ಕುಸಿತದಿಂದ ಕಂಗೆಟ್ಟಿರುವ ಉದ್ಯಮಿಗಳಿಗೆ ಹಣಕಾಸು ನೆರವು ಈ ಯೋಜನೆಯಲ್ಲಿ ಒಳಗೊಂಡಿದೆ.
ಅಮೆರಿಕ ಪರಿಹಾರ ಯೋಜನೆ ಹೆಸರಿನ ಈ ಶಾಸನಾತ್ಮಕ ಪ್ರಸ್ತಾವವು ಬೈಡನ್ ಅಧಿಕಾರ ವಹಿಸಿಕೊಂಡ 100 ದಿನಗಳ ಒಳಗಾಗಿ 10 ಕೋಟಿ ಮಂದಿಗೆ ಲಸಿಕೆ ನೀಡುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಿದೆ. ಅಂತೆಯೇ ವಸಂತ ಋತುವಿಗೆ ಮುನ್ನ ಬಹುತೇಕ ಶಾಲೆಗಳನ್ನು ಮತ್ತೆ ತೆರೆಯುವ ನಿಟ್ಟಿನಲ್ಲಿ ಮುನ್ನಡೆಯಲು ಕಾರ್ಯಯೋಜನೆ ರೂಪಿಸಲಾಗಿದೆ. ಪರ್ಯಾಯವಾಗಿ ದೇಶದ ಆರ್ಥಿಕತೆ ಸ್ಥಿರಗೊಳ್ಳುವ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ನೆರವು ನೀಡಲು ಉದ್ದೇಶಿಸಲಾಗಿದೆ ಎಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡುವ ಭಾಷಣದ ಬಗ್ಗೆ ವಿವರ ನೀಡಿದ ಬೈಡನ್ ನಿಕಟವರ್ತಿಗಳು ಸ್ಪಷ್ಟಪಡಿಸಿದ್ದಾರೆ.
ವೈಯಕ್ತಿಕವಾಗಿ ನೀಡುವ ಪರಿಹಾರದಲ್ಲಿ ಬಹುತೇಕ ಎಲ್ಲ ಅಮೆರಿಕನ್ನರಿಗೆ 1400 ಡಾಲರ್ಗಳ ಚೆಕ್ ಸೇರಿರುತ್ತದೆ. ಇತ್ತೀಚೆಗೆ ಮಂಡಿಸಿದ್ದ ಕೋವಿಡ್-19 ಮಸೂದೆಯಲ್ಲಿ ಘೋಷಿಸಿದ 600 ಡಾಲರ್ ಸೇರಿದಂತೆ ಒಟ್ಟು 2000 ಡಾಲರ್ ಪರಿಹಾರ ಸಿಗಲಿದೆ. ಅಂತೆಯೇ ನಿರುದ್ಯೋಗ ಪ್ರಯೋಜನಗಳಿಗೆ ತಾತ್ಕಾಲಿಕ ಒತ್ತು ನೀಡುವುದು ಮತ್ತು ಸಾಲ ಮರುಪಾವತಿ ಮುಂದೂಡಿಕೆಯೂ ಸೇರಿರುತ್ತದೆ ಎಂದು ಹೇಳಲಾಗಿದೆ.