ಅಮೆರಿಕ ಅಧ್ಯಕ್ಷ ಜೋ ಬೈಡನ್ ಟ್ವಿಟರ್ ನಲ್ಲಿ ಫಾಲೊ ಮಾಡುವ ಏಕೈಕ ಸೆಲೆಬ್ರಿಟಿ ಯಾರು ಮತ್ತು ಯಾಕೆ?
ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಅಧಿಕೃತ ಟ್ವಿಟರ್ ಖಾತೆ ಪೋಟಸ್ ನ್ನು ತನ್ನ ನಿಯಂತ್ರಣಕ್ಕೆ ಪಡೆದಿದ್ದಾರೆ. ಈ ಆಧಿಕೃತ ಖಾತೆಯಲ್ಲಿ ಅಧ್ಯಕ್ಷ ಬೈಡನ್ ಕೇವಲ 12 ಜನರನ್ನು ಫಾಲೋ ಮಾಡುತ್ತಿದ್ದಾರೆ. ಇದರಲ್ಲಿ ಪತ್ನಿ ಜಿಲ್ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ವೈಟ್ ಹೌಸ್ ಸಿಬ್ಬಂದಿಗಳು, ಇನ್ನು ಕೆಲವು ಆಪ್ತರಿದ್ದಾರೆ. ಪಟ್ಟಿಯ ಕೊನೆಯಲ್ಲಿ ಸೆಲೆಬ್ರಿಟಿಯೊಬ್ಬರ ಹೆಸರನ್ನು ಸೇರಿಸಿ ಎಲ್ಲರಿಗೂ ಅಚ್ಚರಿ ಉಂಟು ಮಾಡಲಾಗಿದೆ. ಈಕೆಯ ಹೆಸರು ಸೇರ್ಪಡೆಯ ಹಿಂದೆ ಒಂದು ಕತೆಯಿದೆ.
ರೂಪದರ್ಶಿ, ಟಿವಿ ಸ್ಟಾರ್, ಲೇಖಕಿ, ಉದ್ಯಮಿಯಾಗಿರುವ ಕ್ರಿಸ್ಸಿ ಟೈಜೆನ್ ಅವರು ಬೈಡನ್ ಟ್ವಿಟ್ಟರ್ ಫಾಲೋ ಮಾಡಲಿರುವ ಏಕೈಕ ಸೆಲೆಬ್ರಿಟಿಯಾಗಿದ್ದಾರೆ. ಮನಸ್ಸು ಬಿಚ್ಚಿಮಾತನಾಡುವ ವ್ಯಕ್ತಿತ್ವದ ಮೂಲಕ ಕ್ರಿಸ್ಸಿ ಟೈಜನ್ ಟ್ವಿಟ್ಟರ್ ನಲ್ಲಿ ಹೆಚ್ಚು ಪ್ರಸಿದ್ದರಾಗಿದ್ದಾರೆ. ಕ್ರಿಸ್ಸಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಾಕಾರರಾಗಿದ್ದು, ಟ್ರಂಪ್ ನಿಯಂತ್ರಣದಲ್ಲಿರುವ ತನಕ ಪೋಟಸ್ ಖಾತೆಯಲ್ಲಿ ಕ್ರಿಸ್ಸಿ ಅವರನ್ನು ಬ್ಲಾಕ್ ಮಾಡಲಾಗಿತ್ತು.
ಬುಧವಾರ ನೂತನ ಅಧ್ಯಕ್ಷ ಜೋ ಬೈಡನ್ ರಿಗೆ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ ಕ್ರಿಸ್ಸಿ, ಹಲೋ, ಜೋ ಬೈಡನ್, ಕಳೆದ ನಾಲ್ಕು ವರ್ಷಗಳಿಂದ ಅಧ್ಯಕ್ಷರು ನನ್ನನ್ನು ಬ್ಲಾಕ್ ಮಾಡಿದ್ದರು. ಈಗ ನಾನು ನಿಮ್ಮನ್ನು ಅನುಸರಿಸಬಹುದೇ? ಎಂದು ಬರೆದಿದ್ದರು.
ಬುಧವಾರ ರಾತ್ರಿಯೇ 35ರಹರೆಯದ ಕ್ರಿಸ್ಸಿ ಅವರ ಬಯಕೆ ಈಡೇರಿದ್ದು, ಅಧ್ಯಕ್ಷ ಬೈಡನ್ ಅವರ ಅಧಿಕೃತ ಟ್ವಿಟರ್ ಖಾತೆಯು ಕ್ರಿಸ್ಸಿಯನ್ನು ಫಾಲೋ ಮಾಡಲು ಆರಂಭಿಸಿದೆ. ಅಧ್ಯಕ್ಷರ ಅಧಿಕೃತ ಟ್ವಿಟರ್ ನಿಂದ ಫಾಲೊ ಮಾಡಲ್ಪಡುತ್ತಿರುವ ಏಕೈಕ ಸೆಲೆಬ್ರಿಟಿ ಇವರಾಗಿದ್ದಾರೆ.
ನನಗೆ ಕೊನೆಗೂ ಅಧ್ಯಕ್ಷರ ಟ್ವೀಟನ್ನು ನೋಡುವ ಅವಕಾಶ ಲಭಿಸಿದೆ. ಓ ದೇವರೇ, ನನಗಿದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕ್ರಿಸ್ಸಿ ಪ್ರತಿಕ್ರಿಯಿಸಿದರು.
ಪೋಟಸ್ ಟ್ವಿಟ್ಟರ್ 4.6 ಮಿಲಿಯನ್ ಫಾಲೋ ವರ್ಸ್ ಗಳನ್ನು ಹೊಂದಿದೆ. ಬೈಡನ್ ತಮ್ಮ ವೈಯಕ್ತಿಕ ಟ್ವಿಟರ್ ನಲ್ಲಿ 46 ಜನರನ್ನು ಫಾಲೋ ಮಾಡುತ್ತಿದ್ದಾರೆ. ಲೇಡಿ ಗಾಗಾ, ಒಬಾಮ, ಹಿಲರಿ ಕ್ಲಿಂಟನ್ ಇತರರಿದ್ದಾರೆ.