2ನೇ ದಿನವೂ ತೈವಾನ್ ವಾಯುಪ್ರದೇಶಕ್ಕೆ ನುಗ್ಗಿದ ಚೀನಾ ಯುದ್ಧ ವಿಮಾನಗಳು
ತೈಪೆ (ತೈವಾನ್), ಜ. 25: ಹನ್ನೆರಡು ಯುದ್ಧ ವಿಮಾನಗಳು ಸೇರಿದಂತೆ ಚೀನಾ ವಾಯುಪಡೆಯ ವಿಮಾನಗಳು ಎರಡನೇ ದಿನವಾದ ರವಿವಾರವೂ ತೈವಾನ್ಗೆ ಸೇರಿದ ವಾಯುಪ್ರದೇಶದಲ್ಲಿ ಹಾರಾಟ ನಡೆಸಿವೆ ಎಂದು ತೈವಾನ್ ಹೇಳಿದೆ.
ಪ್ರಜಾಪ್ರಭುತ್ವ ಸರಕಾರವಿರುವ ತೈವಾನ್ ತನ್ನದೇ ನೆಲವೆಂದು ಕಮ್ಯುನಿಸ್ಟ್ ಚೀನಾ ಹೇಳುತ್ತಿದೆ ಹಾಗೂ ಕಳೆದ ಹಲವು ತಿಂಗಳುಗಳಲ್ಲಿ ದ್ವೀಪರಾಷ್ಟ್ರ ತೈವಾನ್ ಸಮೀಪ ತನ್ನ ಸೇನಾ ಚಟುವಟಿಕೆಗಳನ್ನು ಹೆಚ್ಚಿಸಿದೆ.
ಇತ್ತೀಚಿನ ವಾರಗಳಲ್ಲಿ ಚೀನಾವು ಮುಖ್ಯವಾಗಿ ತನ್ನ ಬೇಹುಗಾರಿಕೆ ವಿಮಾನಗಳನ್ನು ತೈವಾನ್ ಸಮೀಪ ನಿಯೋಜಿಸುತ್ತಿತ್ತು. ಆದರೆ, ವಾರಾಂತ್ಯದಲ್ಲಿ ಯುದ್ಧವಿಮಾನಗಳು ಮತ್ತು ಬಾಂಬರ್ ವಿಮಾನಗಳನ್ನು ಅಲ್ಲಿಗೆ ಕಳುಹಿಸಿರುವುದು ಗಮನಾರ್ಹವಾಗಿದೆ.
ಚೀನಾವು ಶನಿವಾರ 8 ಬಾಂಬರ್ ವಿಮಾನಗಳು ಮತ್ತು 4 ಯುದ್ಧ ವಿಮಾನಗಳನ್ನು ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿರುವ ತೈವಾನ್ ನಿಯಂತ್ರಿತ ಪ್ರಟಾಸ್ ದ್ವೀಪದ ನಡುವೆ ನಿಯೋಜಿಸಿತ್ತು. ಇದಾದ ಒಂದು ದಿನದ ಬಳಿಕ, ಚೀನಾವು ರವಿವಾರ ಅದೇ ವಾಯುಪ್ರದೇಶಕ್ಕೆ ಇನ್ನೂ 15 ವಿಮಾನಗಳನ್ನು ಕಳುಹಿಸಿದೆ.
ಆರು ಜೆ-10 ಯುದ್ಧವಿಮಾನಗಳು, 4 ಜೆ-16 ವಿಮಾನಗಳು, 2 ಎಸ್ಯು-30 ವಿಮಾನಗಳು, ಒಂದು ವೈ-8 ಬೇಹುಗಾರಿಕಾ ವಿಮಾನ ಮತ್ತು 2 ವೈ-8 ಸಬ್ಮರೀನ್ ನಿಗ್ರಹ ವಿಮಾನವನ್ನು ಚೀನಾ ಕಳುಹಿಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಅದಕ್ಕೆ ಪ್ರತಿಯಾಗಿ ತೈವಾನ್ ಕೂಡ ತನ್ನ ವಿಮಾನಗಳನ್ನು ಆ ಪ್ರದೇಶದಲ್ಲಿ ನಿಯೋಜಿಸಿತು.