ಜು.31ರೊಳಗೆ ದೇಶದ ಎಲ್ಲಾ ವಯಸ್ಕರಿಗೂ ಕೋವಿಡ್ ಲಸಿಕೆ : ಬ್ರಿಟನ್ ಸರಕಾರ ಘೋಷಣೆ
photo:twitter
ಲಂಡನ್,ಫೆ.21: ಜುಲೈ 31ರೊಳಗೆ ದೇಶದ ಪ್ರತಿಯೊಬ್ಬ ವಯಸ್ಕನಿಗೂ ಕೊರೋನ ವೈರಸ್ ಲಸಿಕೆಯ ಮೊದಲ ಡೋಸ್ ಅನ್ನು ನೀಡುವ ಗುರಿಯನ್ನು ಹೊಂದಿರುವುದಾಗಿ ಬ್ರಿಟನ್ ಸರಕಾರವು ರವಿವಾರ ಘೋಷಿಸಿದೆ.
50 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮತ್ತು ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಕೊರೋನ ವೈರಸ್ ನಿರೋಧಕ ಲಸಿಕೆಯ ಮೊದಲ ಡೋಸ್ ನೀಡಿಕೆಯನ್ನು ಈ ಮೊದಲು ನಿಗದಿಪಡಿಸಿದ ಅಂತಿಮ ಗಡುವಾದ ಮೇ 1ರ ಬದಲಿಗೆ ಎಪ್ರಿಲ್ 15ರೊಳಗೆ ಪೂರ್ಣಗೊಳಿಸುವುದಾಗಿಯೂ ಅದು ತಿಳಿಸಿದೆ. ಬ್ರಿಟನ್ನಲ್ಲಿ ಬಳಕೆಯಾಗುತ್ತಿರುವ ಕೋವಿಡ್-19 ಲಸಿಕೆಗಳ ಉತ್ಪಾದಕ ಸಂಸ್ಥೆಗಳಾದ ಫೈಝರ್ ಹಾಗೂ ಅಸ್ಟ್ರಾಝೆಂಕಾ, ಯುರೋಪ್ನಲ್ಲಿ ಲಸಿಕೆ ಪೂರೈಕೆಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೂ, ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ರವಿವಾರ ನೀಡಿದ ಹೇಳಿಕೆಯಲ್ಲಿ ‘‘ಲಸಿಕೆ ಅಭಿಯಾನವನ್ನು ತ್ವರಿತಗೊಳಿಸಲು ಬೇಕಾಗುವಷ್ಟು ದಾಸ್ತಾನುಗಳನ್ನು ನಾವು ಹೊಂದಿದ್ದೇವೆ ಎಂಬುದಾಗಿ ನಾವೀಗ ಭಾವಿಸಿದ್ದೇವೆ ’’ಎಂದು ತಿಳಿಸಿದ್ದಾರೆ.
ಡಿಸೆಂಬರ್ 8ರಂದು ಬ್ರಿಟನ್ನಲ್ಲಿ ಲಸಿಕೆ ಅಭಿಯಾನವು ಆರಂಭಗೊಂಡಾಗಿನಿಂದ 1.72 ಕೋಟಿಗೂ ಅಧಿಕ ಜನರಿಗೆ ಲಸಿಕೆಯ ಎರಡು ಡೋಸ್ಗಳ ಪೈಕಿ ಮೊದಲನೆಯದನ್ನು ನೀಡಲಾಗಿದೆ ಎಂದವರು ತಿಳಿಸಿದ್ದಾರೆ.
ಈ ಮಧ್ಯೆ ಬ್ರಿಟನ್ನಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸಲು ಬ್ರಿಟನ್ ಸರಕಾರ ಮಾರ್ಗಸೂಚಿಯೊಂದನ್ನು ಅಂತಿಮಗೊಳಿಸಿದ್ದು, ಅದನ್ನು ಸೋಮವಾರ ಪ್ರಕಟಿಸ ಲಾಗುವುದು ಎಂದು ಮ್ಯಾಟ್ಹಾನ್ಕಾಕ್ ತಿಳಿಸಿದ್ದಾರೆ.