ಭಾರತದಿಂದ ಬರುವ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಿದ ಆಸ್ಟ್ರೇಲಿಯ
ಸಿಡ್ನಿ (ಆಸ್ಟ್ರೇಲಿಯ), ಎ. 22: ಕೊರೋನ ವೈರಸ್ನ ಹೆಚ್ಚು ಮಾರಕ ಪ್ರಭೇದಗಳು ದೇಶದಲ್ಲಿ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಭಾರತ ಮತ್ತು ಇತರ ಕೊರೋನ ಆಕ್ರಮಿತ ದೇಶಗಳಿಂದ ವಾಪಸಾಗುವ ತನ್ನ ನಾಗರಿಕರ ಸಂಖ್ಯೆಯನ್ನು ಕಡಿಮೆ ಮಾಡಲು ಆಸ್ಟ್ರೇಲಿಯ ಉದ್ದೇಶಿಸಿದೆ.
ಇದರ ಭಾಗವಾಗಿ, ಭಾರತದಿಂದ ಸಿಡ್ನಿಗೆ ಹಾರುವ ನೇರ ವಿಮಾನಗಳು ಮತ್ತು ನಾರ್ದರ್ನ್ ಟೆರಿಟರಿಯಲ್ಲಿ ಇಳಿಯುವ ವಿಶೇಷ (ಚಾರ್ಟರ್ಡ್) ವಿಮಾನಗಳ ಸಂಖ್ಯೆಯಲ್ಲಿ 30 ಶೇಕಡ ಕಡಿತ ಮಾಡಲಾಗುವುದು ಎಂದು ಆಸ್ಟ್ರೇಲಿಯ ಸರಕಾರ ಗುರುವಾರ ತಿಳಿಸಿದೆ.
ನೂತನ ನಿರ್ಬಂಧಗಳು ಯಾವಾಗ ಜಾರಿಗೆ ಬರಲಿದೆ ಎನ್ನುವುದನ್ನು 24 ಗಂಟೆಗಳಲ್ಲಿ ಘೋಷಿಸುವುದಾಗಿ ನ್ಯಾಶನಲ್ ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಸ್ಕಾಟ್ ಮೊರಿಸನ್ ಹೇಳಿದರು.
ಪ್ರಸಕ್ತ ಆಸ್ಟ್ರೇಲಿಯವು ಪ್ರತಿ ವಾರ ಸುಮಾರು 5,800 ನಾಗರಿಕರು ಮತ್ತು ಖಾಯಂ ನಿವಾಸಿಗಳಿಗೆ ದೇಶಕ್ಕೆ ವಾಪಸಾಗಲು ಅವಕಾಶ ನೀಡುತ್ತಿದೆ. ಎರಡು ವಾರಗಳನ್ನು ಹೊಟೇಲ್ಗಳಲ್ಲಿ ಪ್ರತ್ಯೇಕವಾಗಿ ಕಳೆದ ಬಳಿಕ ಅವರು ತಮ್ಮ ಮನೆಗಳಿಗೆ ಹೋಗಬಹುದಾಗಿದೆ.
ಕೊರೋನ ವೈರಸ್ನ ಎರಡನೇ ಅಲೆ ಭಾರತವನ್ನು ಭೀಕರವಾಗಿ ಆಕ್ರಮಿಸಿದ್ದು, ದಾಖಲೆ ಸಂಖ್ಯೆಯ ಸೋಂಕು ಪ್ರಕರಣಗಳು ಪ್ರತಿ ದಿನ ವರದಿಯಾಗುತ್ತಿವೆ.