ಪಾಕಿಸ್ತಾನಕ್ಕೆ ಅಮೆರಿಕ ನೀಡುವ ನೆರವು ಈಗಲೂ ಸ್ಥಗಿತ, ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ: ಪೆಂಟಗನ್
photo :twitter
ವಾಶಿಂಗ್ಟನ್, ಮೇ 25: ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ ನೆರವನ್ನು ಹಿಂದಿನ ಡೊನಾಲ್ಡ್ ಟ್ರಂಪ್ ಸರಕಾರ ಸ್ಥಗಿತಗೊಳಿಸಿದ್ದು, ಆ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಸೋಮವಾರ ಹೇಳಿದೆ.
ಈ ಹಂತದಲ್ಲಿ, ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ನೆರವು ಸ್ಥಗಿತಗೊಂಡಿದೆ. ಮುಂದಕ್ಕೆ ಅದು ಬದಲಾಗುತ್ತದೆಯೇ, ಇಲ್ಲವೇ ಎನ್ನುವುದಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ನಾನು ಇಳಿಯುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕರ್ಬಿ ಹೇಳಿದರು.
ಈ ವಿಷಯಕ್ಕೆ ಸಂಬಂಧಿಸಿ ಹಿಂದಿನ ಟ್ರಂಪ್ ಆಡಳಿತದ ನೀತಿಯನ್ನು ಬೈಡನ್ ಆಡಳಿತ ಮರುಪರಿಶೀಲಿಸಿದೆಯೇ ಮತ್ತು ಅದರಲ್ಲಿ ಏನಾದರೂ ಬದಲಾವಣೆಗಳಿವೆಯೇ ಹಾಗೂ ಪಾಕಿಸ್ತಾನದ ನಾಯಕರೊಂದಿಗೆ ನಡೆದ ಮಾತುಕತೆಯ ವೇಳೆ ಈ ವಿಷಯದ ಬಗ್ಗೆ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.
ಇತ್ತೀಚೆಗೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ ಆಸ್ಟಿನ್ ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವ ಜೊತೆ ಮಾತುಕತೆ ನಡೆಸಿದ್ದರು ಹಾಗೂ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸಲಿವಾನ್ ಪಾಕಿಸ್ತಾನದ ರಾಷ್ಟ್ರೀಯ ಭದ್ರತ ಸಲಹೆಗಾರನನ್ನು ಜಿನೀವದಲ್ಲಿ ಭೇಟಿಯಾಗಿದ್ದರು.