ಭಾರತ ಮೂಲದ ಈ ಪೋರ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್
Courtesy: Twitter
ಚೆನ್ನೈ: ಭಾರತ ಮೂಲದ ಅಮೆರಿಕನ್ ಬಾಲಕ ಅಭಿಮನ್ಯು ಮಿಶ್ರಾ ವಿಶ್ವ ಚೆಸ್ ಇತಿಹಾಸದಲ್ಲೇ ಗ್ರ್ಯಾಂಡ್ ಮಾಸ್ಟರ್ ಪಟ್ಟ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾನೆ. ಆತನಿಗೆ ಈಗ 12 ವರ್ಷ ನಾಲ್ಕು ತಿಂಗಳು 26 ದಿನ.
ಹತ್ತೊಂಬತ್ತು ವರ್ಷಗಳಿಂದ ರಷ್ಯಾದ ಸೆರ್ಗಿ ಕಾರ್ಜೆಕಿನ್ ಹೆಸರಿನಲ್ಲಿದ್ದ ದಾಖಲೆಯನ್ನು ಅಭಿಮನ್ಯು ಮುರಿದಿದ್ದಾನೆ. 2002ರಲ್ಲಿ ಸೆರ್ಗಿ 12 ವರ್ಷ ಏಳು ತಿಂಗಳಿನವನಾಗಿದ್ದಾಗ ಗ್ರ್ಯಾಂಡ್ ಮಾಸ್ಟರ್ ಪಟ್ಟ ಗಳಿಸಿಕೊಂಡಿದ್ದ. ಭಾರತದ ಗ್ರ್ಯಾಂಡ್ ಮಾಸ್ಟರ್ ಲುಯಾನ್ ಲ್ಯೂಕ್ ಮೆಂಡೋನ್ಸಾ ಅವರನ್ನು ಮಣಿಸುವ ಮೂಲಕ ಮೂರನೇ ಹಾಗೂ ಅಂತಿಮ ಜಿಎಂ ಮಾನದಂಡವನ್ನು ದಾಟಿದ್ದಾನೆ. ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ ಸ್ಪರ್ಧೆಯ ಉಪಾಂತ್ಯ ಸುತ್ತಿನಲ್ಲಿ ಅಭಿಮನ್ಯು ಈ ಸಾಧನೆ ಮಾಡಿದ್ದಾನೆ.
ಅಭಿಮನ್ಯು ಪೋಷಕರು ಮಧ್ಯಪ್ರದೇಶದಿಂದ ದಶಕದ ಹಿಂದೆ ಅಮೆರಿಕಕ್ಕೆ ವಲಸೆ ಹೋಗಿದ್ದರು. ಜಿಎಂ ಆಗಲು ಅಭಿಮನ್ಯು ಸೆಪ್ಟೆಂಬರ್ 5ರ ಮೊದಲು ಮೂರು ಜಿಎಂ ಮಾನದಂಡಗಳನ್ನು ಮತ್ತು 2500 ಇಎಲ್ಓ ರೇಟಿಂಗ್ ಪಡೆಯಬೇಕಿತ್ತು. ಇದನ್ನು ಯಶಸ್ವಿಯಾಗಿ ಪೂರೈಸಿ ಈ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಕಳೆದ ಮೇ ತಿಂಗಳಲ್ಲಿ ಎರಡು ಮಾನದಂಡಗಳನ್ನು ದಾಟಿದ್ದ. ಆದರೆ ಕೋವಿಡ್-19 ಮೂರನೇ ಅಲೆ ಕಾರಣದಿದಾಗಿ ಮೂರನೇ ಮಾನದಂಡವನ್ನು ದಾಟುವುದು ಕಷ್ಟಕರವಾಗಿತ್ತು.
2019ರ ನವೆಂಬರ್ನಲ್ಲಿ ಅಭಿಮನ್ಯು ಅತಿಕಿರಿಯ ಇಂಟರ್ ನ್ಯಾಷನಲ್ ಮಾಸ್ಟರ್ ಬಿರುದಿಗೆ ಪಾತ್ರನಾಗಿದ್ದ. ಆಗ ಆತನಿಗೆ 10 ವರ್ಷ 9 ತಿಂಗಳು.