ಸಿನ್ಸಿನಾಟಿಯ ಪಾರ್ಕ್ ನಲ್ಲಿ ಗುಂಡಿನ ದಾಳಿ: ಇಬ್ಬರು ಮೃತ್ಯು, ಮೂವರಿಗೆ ಗಾಯ
ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮೋತ್ಸವದ ವೇಳೆ ನಡೆದ ಘಟನೆ
photo: twitter/@CincyPD
ವಾಷಿಂಗ್ಟನ್, ಜು.5: ಅಮೆರಿಕದ ಸಿನ್ಸಿನ್ನಾಟಿ ನಗರದ ಪಾರ್ಕ್ ಒಂದರಲ್ಲಿ ರವಿವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು ಮೂವರು ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಸ್ಮೇಲ್ ಪಾರ್ಕ್ ಪ್ರದೇಶದಲ್ಲಿ ರವಿವಾರ ರಾತ್ರಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮೋತ್ಸವ ನಡೆಯುತ್ತಿತ್ತು. ಪಾರ್ಕ್ ನಲ್ಲಿ ಸುಮಾರು 400ರಿಂದ 500ರಷ್ಟು ಮಂದಿಯಿದ್ದರು. ಪಟಾಕಿ ಸಿಡಿಸುವ ಸಂದರ್ಭ ಏಕಾಏಕಿ ಗುಂಡಿನ ದಾಳಿ ಆರಂಭವಾಗಿದೆ. ಯಾರನ್ನಾದರೂ ಗುರಿ ಮಾಡಿಕೊಂಡು ದಾಳಿ ನಡೆಸಲಾಗಿದೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಶಂಕಿತ ಆರೋಪಿಯ ಬಗ್ಗೆಯೂ ಹೆಚ್ಚಿನ ಮಾಹಿತಿ ಲಭಿಸಿಲ್ಲ . ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತನಾಗಿದ್ದು ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಗಾಯಗೊಂಡ ಮೂವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಲೆಕ ಲೀಸಾ ಡೇವಿಸ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಗುಂಡಿನ ದಾಳಿ ಆರಂಭವಾದಾಗ ನಾನು ಮಗನನೊಂದಿಗೆ ಪಾರ್ಕ್ನಲ್ಲಿದ್ದೆ. ಎಲ್ಲೆಡೆ ಚೀರಾಟದ ಜೊತೆಗೆ ಮತ್ತಷ್ಟು ಗುಂಡಿನ ಸದ್ದು ಕೇಳಿಬಂದಿದೆ. ಜನರು ಕಿರುಚುತ್ತಾ ದಿಕ್ಕಾಪಾಲಾಗಿ ಓಡುತ್ತಿದ್ದರು. ಮಗನ ಕೈಹಿಡಿದುಕೊಂಡು ಕಾರಿನತ್ತ ಧಾವಿಸಿದೆ ಎಂದು ಆ್ಯಂಬರ್ ಗ್ರೆ ಎಂಬ ಮಹಿಳೆ ಹೇಳಿರುವುದಾಗಿ ಸ್ಥಳೀಯ ಟಿವಿ ವರದಿ ಮಾಡಿದೆ.