ಬೋಯಿಂಗ್ ವಿಮಾನಗಳ ಅಪಘಾತ ಪ್ರಕರಣ: ಆಡಳಿತ ಮಂಡಳಿ ಮೊಕದ್ದಮೆ ಎದುರಿಸಬೇಕು; ಕೋರ್ಟ್ ಆದೇಶ
ವಾಷಿಂಗ್ಟನ್, ಸೆ.8: ನೂರಾರು ಜನರ ಸಾವಿಗೆ ಕಾರಣವಾದ 2 ವಿಮಾನ ಅಪಘಾತದ ಪ್ರಕರಣದ ಬಗ್ಗೆ ಬೋಯಿಂಗ್ ಸಂಸ್ಥೆಯ ಆಡಳಿತ ಮಂಡಳಿ ಮೊಕದ್ದಮೆ ಎದುರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
2018ರಲ್ಲಿ ಇಂಡೋನೇಶ್ಯಾದಲ್ಲಿ ಮತ್ತು 2019ರಲ್ಲಿ ಇಥಿಯೋಪಿಯಾದಲ್ಲಿ ಬೋಯಿಂಗ್ ವಿಮಾನ ಸಂಸ್ಥೆಯ 737 ಮ್ಯಾಕ್ಸ್ ವಿಮಾನ ಅಪಘಾತಕ್ಕೀಡಾಗಿದ್ದು 346 ಮಂದಿ ಸಾವನ್ನಪ್ಪಿದ್ದರು. ಈ ಕಾರಣದಿಂದ 2019ರ ಮಾರ್ಚ್ನಿಂದ ಮುಂದಿನ 20 ತಿಂಗಳ ಕಾಲ ಈ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೋಯಿಂಗ್ ಸಂಸ್ಥೆಯ ಷೇರುದಾರರು ಆಡಳಿತ ಮಂಡಳಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ಪ್ರಥಮ ಅಪಘಾತದ ಬಳಿಕ ವಿಮಾನದ ಸುರಕ್ಷಾ ವ್ಯವಸ್ಥೆ ಎಂಸಿಎಎಸ್ ಕುರಿತ ಅಪಾಯದ ಸೂಚನೆಯನ್ನು ಆಡಳಿತ ಮಂಡಳಿ ಗಮನಿಸಬೇಕಿತ್ತು, ಆದರೆ ಅವರು ಆ ಬಗ್ಗೆ ನಿರ್ಲಕ್ಷ್ಯ ತೋರಿದ್ದರು. ಆಡಳಿತ ಮಂಡಳಿಯ ಪ್ರಮಾದ ಕಾರಣ ಎಂಬ ಸಂಸ್ಥೆಯ ಪ್ರತಿಪಾದನೆಯನ್ನು ಅರ್ಜಿದಾರರು ಮುಂದುವರಿಸಿಕೊಂಡು ಹೋಗಬಹುದು ಎಂದು ನ್ಯಾಯಾಧೀಶ ಮಾರ್ಗನ್ ಝರ್ನ್ ಮಂಗಳವಾರ ಹೇಳಿದರು. ಇತರ 2 ಪ್ರತಿಪಾದನೆಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಮುಂದಿನ ಕಾನೂನು ಕ್ರಮಗಳ ಕುರಿತು ಪರಿಶೀಲಿಸಲಾಗುವುದು ಎಂದು ಬೋಯಿಂಗ್ ಸಂಸ್ಥೆಯ ಅಧಿಕಾರಿಗಳು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಅಪಘಾತದ ಬಳಿಕ ಬೋಯಿಂಗ್ ಸಂಸ್ಥೆಗೆ ಬೃಹತ್ ಮೊತ್ತದ ದಂಡ ವಿಧಿಸಲಾಗಿದೆ. 737 ಮ್ಯಾಕ್ಸ್ ವಿಮಾನದ ಸುರಕ್ಷಾ ಸಾಧನದ ವೈಫಲ್ಯ ಕುರಿತ ಸೂಚನೆಯನ್ನು ಕಡೆಗಣಿಸಿದ್ದಕ್ಕೆ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು 2.5 ಬಿಲಿಯನ್ ಡಾಲರ್ ಮೊತ್ತವನ್ನು ದಂಡವಾಗಿ ಪಾವತಿಸಿತ್ತು. ಬಳಿಕ, ಮೇ ತಿಂಗಳಿನಲ್ಲಿ ಹೆಚ್ಚುವರಿಯಾಗಿ 17 ಮಿಲಿಯನ್ ಡಾಲರ್ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಿತ್ತು.