ಯೆಮನ್: ಕಾರು ಬಾಂಬ್ ಸ್ಫೋಟ; ಪತ್ರಕರ್ತೆ, ಮಗು ಸಾವು
ಸನಾ, ನ.11: ಯೆಮನ್ ದೇಶದ ದಕ್ಷಿಣದ ನಗರ ಏಡನ್ನಲ್ಲಿ ಕಾರ್ಬಾಂಬ್ ಸ್ಫೋಟದಲ್ಲಿ ಪತ್ರಕರ್ತೆ ರಶಾ ಅಬ್ದುಲ್ಲಾ ಅಲ್ಹರಾಝಿ ಹಾಗೂ ಆಕೆಯ ಮಗು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಶಾ ಅವರ ಕಾರಿನೊಳಗೆ ಇಡಲಾಗಿದ್ದ ಸುಧಾರಿತ ಸ್ಫೋಟಕವನ್ನು ದೂರ ನಿಯಂತ್ರಣ ಸಾಧನದಿಂದ ಸ್ಫೋಟಿಸಲಾಗಿದ್ದು ಇದೊಂದು ಭಯೋತ್ಪಾದಕ ಕೃತ್ಯವಾಗಿದೆ ಎಂದು ಪ್ರಧಾನಿ ಮಯೀನ್ ಅಬ್ದುಲ್ ಮಲಿಕ್ ಖಂಡಿಸಿದ್ದಾರೆ.
ರಶಾ ಹಾಗೂ ಅವರ ಕುಟುಂಬದವರು ಮಂಗಳವಾರ ವೈದ್ಯರಲ್ಲಿಗೆ ತೆರಳುತ್ತಿದ್ದಾಗ ಏಡನ್ನ ನೆರೆಯ ಗ್ರಾಮ ಖೋರ್ಮಕ್ಸರ್ನಲ್ಲಿ ಈ ದುರಂತ ಸಂಭವಿಸಿದೆ. ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಯುಇಎ ಮೂಲದ ಅಶ್ರಖ್ ಟಿವಿ ವಾಹಿನಿಯ ವರದಿಗಾರರಾಗಿದ್ದ ರಶಾ ಗರ್ಭಿಣಿಯಾಗಿದ್ದರು.
ಸ್ಫೋಟದಿಂದ ರಶಾ ಹಾಗೂ ಅವರ ಮಗು ಜವಾದ್ ಸ್ಥಳದಲ್ಲೇ ಮೃತಪಟ್ಟರೆ, ಪತ್ರಕರ್ತರಾಗಿರುವ ಪತಿ ಮಹ್ಮೂದ್ ಅಲ್ ಅಟ್ಮಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಪಾದಚಾರಿಗಳೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.