ಬ್ರಿಟನ್: ವಿಮಾನ ಪ್ರಯಾಣಿಕರಿಗೆ ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
ಲಂಡನ್, ಡಿ.6: ಒಮೈಕ್ರಾನ್ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೇಶವನ್ನು ಪ್ರವೇಶಿಸುವವರು ಕೊರೋನ ಸೋಂಕು ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯವಾಗಿ ಹೊಂದಿರಬೇಕು ಎಂದು ಬ್ರಿಟನ್ ಸರಕಾರ ಘೋಷಿಸಿದೆ. ಮಂಗಳವಾರ ಬೆಳಿಗ್ಗೆ 4 ಗಂಟೆಯಿಂದ, ಬ್ರಿಟನ್ಗೆ ಪ್ರಯಾಣಿಸುವವರು, ವಿಮಾನ ಹತ್ತುವ 48 ಗಂಟೆಗಳ ಮೊದಲು ನಡೆಸಿದ ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಹೊಂದಿರಬೇಕು. ಯಾವುದೇ ದೇಶದ , 12 ವರ್ಷ ಮೀರಿದ ಪ್ರಯಾಣಿಕರಿಗೆ ಇದು ಅನ್ವಯಿಸುತ್ತದೆ ಎಂದು ಬ್ರಿಟನ್ ಆರೋಗ್ಯ ಇಲಾಖೆ ಘೋಷಿಸಿದೆ. ಈ ಮಧ್ಯೆ, ಪ್ರಯಾಣ ನಿರ್ಬಂಧ ಹಾಗೂ ನಿಷೇಧಗಳು ಹೊಸ ಪ್ರಬೇಧದ ಹರಡುವಿಕೆಯನ್ನು ತಡೆಯುವುದಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ನೆಗೆಟಿವ್ ವರದಿಯನ್ನು ಮತ್ತೆ ಕಡ್ಡಾಯಗೊಳಿಸಿರುವ ಆದೇಶವನ್ನು ವಿಮಾನಯಾನ ಸಂಸ್ಥೆಗಳು ವಿರೋಧಿಸಿವೆ. ಇದು ಪ್ರವಾಸೋದ್ಯಮಕ್ಕೆ ಒಂದು ಹೊರೆ ಎಂಬುದು ಸರಕಾರಕ್ಕೆ ತಿಳಿದಿದೆ. ಆದರೆ ಈ ಕ್ರಮ ಅನಿವಾರ್ಯವಾಗಿದೆ. ಹೊಸ ರೂಪಾಂತರಿತ ಸೋಂಕು ದೇಶದಲ್ಲಿ ಬೃಹತ್ ಸಮಸ್ಯೆ ಸೃಷ್ಟಿಸುವ ಮುನ್ನ ನಾವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ನ್ಯಾಯ ಇಲಾಖೆಯ ಕಾರ್ಯದರ್ಶಿ ಡೊಮಿನಿಕ್ ರ್ಯಾಬ್ ಹೇಳಿದ್ದಾರೆ.