ಭಾರತದಿಂದ ಆಕಸ್ಮಿಕ ಕ್ಷಿಪಣಿ ಉಡಾವಣೆ: ಜಂಟಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ ಪಾಕಿಸ್ತಾನ
ಇಸ್ಲಾಮಾಬಾದ್, ಮಾ.12: ತಾಂತ್ರಿಕ ಅಸಮರ್ಪಕತೆಯಿಂದ ತನ್ನ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಗೊಂಡು ಪಾಕಿಸ್ತಾನದ ಪ್ರದೇಶದಲ್ಲಿ ಬಿದ್ದಿರುವುದನ್ನು ಭಾರತ ಒಪ್ಪಿಕೊಂಡ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಈ ಘಟನೆಯ ಸುತ್ತಲಿನ ವಾಸ್ತವಾಂಶಗಳನ್ನು ನಿಖರಪಡಿಸಲು ಜಂಟಿ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ.
ಈ ಆಕಸ್ಮಿಕ ಘಟನೆಯಿಂದ ಯಾವುದೇ ಜೀವಹಾನಿ ಆಗಿಲ್ಲ ಎಂಬುದು ಸಮಾಧಾನಕರ ವಿಷಯವಾಗಿದೆ ಎಂದಿರುವ ಪಾಕಿಸ್ತಾನದ ರಕ್ಷಣಾ ಇಲಾಖೆ, ಘಟನೆಯ ಬಗ್ಗೆ ನ್ಯಾಯಾಲಯದ ವಿಚಾರಣೆಗೆ ಆದೇಶಿಸಿರುವುದಾಗಿ ಹೇಳಿದೆ. 2022ರ ಮಾರ್ಚ್ 9ರಂದು ಭಾರತದ ಕ್ಷಿಪಣಿಯು ತಾಂತ್ರಿಕ ಅಸಮರ್ಪಕತೆಯಿಂದ ಆಕಸ್ಮಿಕವಾಗಿ ಉಡಾವಣೆಗೊಂಡು ಪಾಕ್ ಪ್ರದೇಶದ ಮೇಲೆ ಬಿದ್ದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿ ಭಾರತೀಯ ಪತ್ರಿಕಾ ಮಾಹಿತಿ ಬ್ಯೂರೊದ ರಕ್ಷಣಾ ವಿಭಾಗ ನೀಡಿರುವ ಪತ್ರಿಕಾ ಹೇಳಿಕೆಯನ್ನು ಗಮನಿಸಿದ್ದೇವೆ ಮತ್ತು ಈ ಬಗ್ಗೆ ನ್ಯಾಯಾಲಯದ ವಿಚಾರಣೆಗೆ ಆದೇಶಿಸಿದ್ದೇವೆ ಎಂದು ಪಾಕಿಸ್ತಾನದ ವಿದೇಶ ವ್ಯವಹಾರ ಇಲಾಖೆಯ ಹೇಳಿಕೆ ತಿಳಿಸಿದೆ.
ಈ ಘಟನೆಯ ಗಂಭೀರ ಸ್ವರೂಪವು ಭದ್ರತೆ ಮತ್ತು ತಾಂತ್ರಿಕ ಸುರಕ್ಷತೆಯ ಕುರಿತ ಶಿಷ್ಟಾಚಾರದ ಬಗ್ಗೆ ಹಲವು ಮೂಲಭೂತ ಪ್ರಶ್ನೆಗಳನ್ನು ಎತ್ತಿದೆ. ಇಂತಹ ಗಂಭೀರ ವಿಷಯಗಳನ್ನು ಭಾರತೀಯ ಅಧಿಕಾರಿಗಳು ನೀಡುವ ಸರಳ ವಿವರಣೆಯಿಂದ ವಿವರಿಸಲು ಆಗದು ಎಂದಿರುವ ಪಾಕಿಸ್ತಾನದ ವಿದೇಶ ವ್ಯವಹಾರ ಸಚಿವಾಲಯ, ಕ್ಷಿಪಣಿಯ ಕುರಿತು ಸ್ಪಷ್ಟ ವಿವರಣೆ ನೀಡುವಂತೆ ಆಗ್ರಹಿಸಿದೆ.
ಕ್ಷಿಪಣಿಯಲ್ಲಿ ಸ್ವಯಂ ವಿನಾಶಕ ವ್ಯವಸ್ಥೆ ಅಳವಡಿಸಲಾಗಿತ್ತೇ? ಅದು ಯಾಕೆ ವಿಫಲವಾಯಿತು? ಭಾರತೀಯ ಕ್ಷಿಪಣಿಗಳನ್ನು ವಾಡಿಕೆಯ ನಿರ್ವಹಣೆ ಸಂದರ್ಭದಲ್ಲೂ ಉಡಾವಣೆಗೊಳ್ಳುವ ರೀತಿಯಲ್ಲಿ ಇರಿಸಲಾಗಿದೆಯೇ? ಕ್ಷಿಪಣಿ ಬಿದ್ದ ಬಗ್ಗೆ ಭಾರತ ತಕ್ಷಣ ಮಾಹಿತಿ ನೀಡದೆ, ಪಾಕಿಸ್ತಾನ ಈ ಬಗ್ಗೆ ಘೋಷಿಸುವವರೆಗೆ ಯಾಕೆ ಸುಮ್ಮನಿತ್ತು? ಎಂಬ ಪ್ರಶ್ನೆಗಳಿಗೆ ಭಾರತ ಸ್ಪಷ್ಟನೆ ನೀಡಬೇಕಾಗಿದೆ ಎಂದು ಇಲಾಖೆ ಹೇಳಿದೆ.
ಈ ಘಟನೆಯು ಅತ್ಯಂತ ಅಸಮರ್ಥತೆಯ ಉಪಕ್ರಮವಾಗಿದೆ. ಕ್ಷಿಪಣಿಯನ್ನು ಭಾರತದ ಸೇನೆ ನಿರ್ವಹಿಸಿತ್ತೇ ಅಥವಾ ದುಷ್ಟಶಕ್ತಿಗಳ ಕೆಲಸ ಇದಾಗಿದೆಯೇ ಎಂಬ ಬಗ್ಗೆ ಭಾರತ ಉತ್ತರಿಸಬೇಕಿದೆ. ಕಾರ್ಯತಂತ್ರದ ಆಯುಧಗಳ ನಿರ್ವಹಣೆಯಲ್ಲಿ ಭಾರತ ತೋರುತ್ತಿರುವ ಗಂಭೀರ ಪ್ರಮಾಣದ ತಾಂತ್ರಿಕ ಪ್ರಮಾದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಕ್ಷಿಪಣಿ ಪಾಕ್ ಪ್ರದೇಶಕ್ಕೆ ಬಂದು ಬಿದ್ದಿರುವುದರಿಂದ ಘಟನೆ ಬಗ್ಗೆ ಆಂತರಿಕ ತನಿಖೆ ನಡೆಸುವ ಭಾರತದ ನಿರ್ಧಾರ ಸೂಕ್ತವಲ್ಲ. ಆದ್ದರಿಂದ ಸತ್ಯಾಂಶ ತಿಳಿಯಲು ಜಂಟಿ ತನಿಖೆಯ ಅಗತ್ಯವಿದೆ. ಕಡಿಮೆ ಅಂತರ ಮತ್ತು ಪ್ರತಿಕ್ರಿಯೆಯ ಅವಧಿಯನ್ನು ಗಮನಿಸಿದರೆ, ಈ ಘಟನೆಯ ತಪ್ಪುವ್ಯಾಖ್ಯಾನವು, ಆತ್ಮರಕ್ಷಣೆಯ ನಿಟ್ಟಿನಲ್ಲಿ ಪ್ರತಿಕ್ರಮಗಳಿಗೆ ಕಾರಣವಾಗಿ ಗಂಭೀರ ಪರಿಣಾಮ ಉಂಟಾಗಲು ಸಾಧ್ಯವಿತ್ತು. ಆದ್ದರಿಂದ ಈ ಘಟನೆಯನ್ನು ಅಂತರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸಿ ಈ ವಲಯದಲ್ಲಿ ಸ್ಥಿರತೆಗೆ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕು ಎಂದು ಪಾಕಿಸ್ತಾನದ ವಿದೇಶ ವ್ಯವಹಾರ ಇಲಾಖೆಯ ಹೇಳಿಕೆ ಆಗ್ರಹಿಸಿದೆ.