ವಾಷಿಂಗ್ಟನ್: ಗುಂಡಿನ ದಾಳಿಯಲ್ಲಿ 1 ಮೃತ್ಯು, 5 ಮಂದಿಗೆ ಗಾಯ
ವಾಷಿಂಗ್ಟನ್, ಆ.2: ವಾಷಿಂಗ್ಟನ್ ಡಿಸಿಯ ಈಶಾನ್ಯ ಭಾಗದಲ್ಲಿನ ಅಪಾರ್ಟ್ಮೆಂಟ್ನ ಬಳಿ ಸೋಮವಾರ ತಡರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಕನಿಷ್ಟ 5 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಎಫ್ ಸ್ಟ್ರೀಟ್ ನಾರ್ಥ್ಈಸ್ಟ್ ಪ್ರದೇಶದ ಅಝೀಝೆ ಬೇಟ್ಸ್ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ನ ಹೊರಭಾಗದಲ್ಲಿ ಸೋಮವಾರ ರಾತ್ರಿ ಸ್ಥಳೀಯ ಕಾಲಮಾನ 8:30 ಕ್ಕೆ ಗುಂಡಿನ ದಾಳಿ ನಡೆದಿದೆ.
ಓರ್ವ ವ್ಯಕ್ತಿ ಮೃತಪಟ್ಟಿದ್ದು 5 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ರಾಬರ್ಟ್ ಜೆ ಕಾಂಟೀಯನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಗುಂಡು ಹಾರಾಟಕ್ಕೆ ಕಾರಣ ಸ್ಪಷ್ಟವಾಗಿಲ್ಲ.ಘಟನೆ ನಡೆದಾಗ ಆ ಪ್ರದೇಶದಲ್ಲಿ ಬಹಳಷ್ಟು ಜನ ಗುಂಪುಗೂಡಿದ್ದರು. ಕನಿಷ್ಟ 15 ಗುಂಡಿನ ಸದ್ದು ಕೇಳಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸೋಮವಾರ ಅಮೆರಿಕದಲ್ಲಿ ಗುಂಡಿನ ದಾಳಿಯ 3 ಪ್ರತ್ಯೇಕ ಪ್ರಕರಣ ವರದಿಯಾಗಿದೆ. ಗೈನ್ಸ್ವಿಲ್ಲೆ ಸ್ಟ್ರೀಟ್ನಲ್ಲಿ ಒಬ್ಬ ಮಹಿಳೆ ಗಾಯಗೊಂಡಿದ್ದರೆ, ಒಗ್ಲೆಥಾರ್ಪ್ ಸ್ಟ್ರೀಟ್ನಲ್ಲಿ ಹಾಗೂ ನ್ಯೂಟನ್ ಪ್ಲೇಸ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.