ಬ್ರಿಟನ್ ರಾಣಿಗೆ ಅಂತಿಮ ವಿದಾಯ
ಲಂಡನ್, ಸೆ.19: ಸೆಪ್ಟಂಬರ್ 8ರಂದು ತಮ್ಮ ಬಲ್ಮೊಹರ್ ಕ್ಯಾಸ್ಟಲ್ ನಿವಾಸದಲ್ಲಿ ಮೃತಪಟ್ಟಿದ್ದ ಬ್ರಿಟನ್ ರಾಣಿ 2ನೇ ಎಲಿಝಬೆತ್ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಸೋಮವಾರ ಸಕಲ ಸರಕಾರಿ ಗೌರವದೊಂದಿಗೆ ಇಲ್ಲಿನ ವೆಸ್ಟ್ಮಿನಿಸ್ಟರ್ ಅಬೆಯಲ್ಲಿ ನಡೆಯಿತು.
ಅಂತ್ಯಸಂಸ್ಕಾರಕ್ಕೂ ಮುನ್ನ 2 ನಿಮಿಷದ ಮೌನಾಚರಣೆಯೊಂದಿಗೆ ಬ್ರಿಟನ್ ರಾಣಿಗೆ ಅಂತಿಮ ನಮನ ಸಲ್ಲಿಸಲಾಯಿತು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸಹಿತ ವಿವಿಧ ದೇಶಗಳ ಸುಮಾರು 500ರಷ್ಟು ಮುಖಂಡರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಅಗಲಿದ ರಾಣಿಗೆ ಗೌರವ ಸಲ್ಲಿಸಿದರು.
ಗೌರವಾನ್ವಿತ ರಾಣಿಗೆ ಅಂತಿಮ ಗೌರವವನ್ನು ಸಲ್ಲಿಸಲು ಬ್ರಿಟನ್ನ ಎಲ್ಲಾ ಸರಕಾರಿ ಇಲಾಖೆ, ಕಚೇರಿಗಳಲ್ಲಿ 2 ನಿಮಿಷದ ಮೌನ ಆಚರಿಸಲಾಗಿದೆ ಎಂದು ಬ್ರಿಟನ್ ರಾಜಮನೆತನದ ಪ್ರಕಟಣೆ ತಿಳಿಸಿದೆ. 2 ನಿಮಿಷದ ಮೌನಾಚರಣೆಯ ಬಳಿಕ `ಗಾಡ್ ಸೇವ್ ದಿ ಕಿಂಗ್' ರಾಷ್ಟ್ರಗೀತೆಯನ್ನು ನುಡಿಸಲಾಯಿತು ಮತ್ತು ಬ್ರಿಟನ್ ರಾಣಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸೋಮವಾರ ಬೆಳಿಗ್ಗೆ ಅಂತ್ಯಕ್ರಿಯೆ ಆರಂಭಗೊಂಡಿದ್ದು ಮಧ್ಯಾಹ್ನ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಿತು. ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಸುಮಾರು 125 ಸಿನಿಮಾ ಮಂದಿರ, ಹಲವು ಕ್ಯಾಥೆಡ್ರಲ್ಗಳಲ್ಲಿ ನೇರಪ್ರಸಾರ ಮಾಡಲಾಗಿದೆ. ಸಾಂಪ್ರದಾಯಿಕ ಗೌರವ ಸಲ್ಲಿಸುವ ಕಾರ್ಯದಲ್ಲಿ ಸುಮಾರು 4000 ಯೋಧರು ಪಾಲ್ಗೊಂಡಿದ್ದರು.
ಸೈಂಟ್ ಜಾರ್ಜ್ ಚಾಪಲ್ನಲ್ಲಿ ರಾಣಿಯ ಪತಿ, ರಾಜ ಫಿಲಿಪ್ ಅವರ ಅಂತ್ಯಕ್ರಿಯೆ ನಡೆಸಿದ್ದ ಸ್ಥಳದ ಪಕ್ಕದಲ್ಲೇ ರಾಣಿ ಎಲಿಝಬೆತ್ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. ಬ್ರಿಟನ್ನ ನೂತನ ರಾಜ ಫಿಲಿಪ್, ರಾಜಮನೆತನದ ಪ್ರತಿನಿಧಿಗಳು, ಸದಸ್ಯರು, ಬ್ರಿಟನ್ ಪ್ರಧಾನಿ ಲಿಝ್ ಟ್ರಸ್, ಕಾಮನ್ವೆಲ್ತ್ ಪ್ರಧಾನ ಕಾರ್ಯದರ್ಶಿ ಬರೊನೆಸ್ ಪ್ಯಾಟ್ರಿಕಾ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.