ಮತದಾನಕ್ಕೆ ಬಂದು ಅಪ್ಪನನ್ನು ನೆನೆದು ಭಾವುಕರಾದ ನಟಿ ಹರ್ಷಿಕಾ
ಸಿನಿಮಾ ನಟ-ನಟಿಯರಿಂದ ಮತ ಚಲಾವಣೆ
ಬೆಂಗಳೂರು, ಡಿ.5: ಪ್ರತಿ ಬಾರಿ ಅಪ್ಪನೊಂದಿಗೆ ಬಂದು ಮತ ಚಲಾಯಿಸುತ್ತಿದ್ದೆ. ಆದರೆ ಈ ಬಾರಿ ಅಪ್ಪ ಇಲ್ಲದೆ ಮತ ಚಲಾಯಿಸುತ್ತಿದ್ದೇನೆ ಎಂದು ನಟಿ ಹರ್ಷಿಕಾ ಪೂಣಚ್ಚ ಭಾವುಕರಾಗಿ ನುಡಿದರು. ಕೆ.ಆರ್.ಪುರಂನ ಕಲ್ಕೆರೆ ಸರಕಾರಿ ಶಾಲೆಯಲ್ಲಿ ಮತ ಚಲಾಯಿಸಿದ ಹರ್ಷಿಕಾ, ಅಪ್ಪ ಮೃತಪಟ್ಟಿದ್ದನ್ನು ನೆನೆದು ಭಾವುಕರಾದರು.
ತಂದೆಯನ್ನು ಕಳೆದುಕೊಂಡು ಎರಡು ತಿಂಗಳಾಗಿದೆ. ಅವರೊಂದಿಗೆ ಯಾವಾಗಲೂ ಬಂದು ಮತ ಹಾಕುತ್ತಿದ್ದೆ. ನನ್ನ ವೋಟರ್ ಐಡಿ ಕೂಡ ಅಪ್ಪನ ಪರ್ಸ್ನಲ್ಲಿತ್ತು. ಮತದಾನ ಕಡ್ಡಾಯ ಅಂತ ಅಪ್ಪ ಹೇಳಿಕೊಟ್ಟ ಪಾಠ. ಅಪ್ಪನ ಮಾತಿನಂತೆ ಬಂದು ಮತದಾನ ಮಾಡಿದ್ದೇನೆ ಎಂದು ನುಡಿದರು.
ಇಂದು ಮತದಾನ ಇರುವುದರಿಂದ ಹಲವು ಕಂಪೆನಿಗಳಿಗೆ ರಜೆ ನೀಡಿರುತ್ತಾರೆ. ಹೀಗಾಗಿ, ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಇದು ನಮ್ಮ ಹಕ್ಕು ಆಗಿದ್ದು, ನಿಮ್ಮ ನಾಯಕನನ್ನು ನೀವೇ ಆಯ್ಕೆ ಮಾಡಬೇಕೆಂದು ಹೇಳಿದರು.
ನಟ ಶ್ರೀಮುರಳಿ: ಶಿವಾಜಿ ನಗರದಲ್ಲಿ ಮತ್ತೆ ಚುನಾವಣೆ ಬಂದಿದ್ದು, ಪ್ರತಿಯೊಬ್ಬರೂ ಹಕ್ಕು ಚಲಾಯಿಸಬೇಕು, ತನ್ಮೂಲಕ ಪ್ರಗತಿಗೆ ಕೈಜೋಡಿಸಬೆಕೆಂದು ನಟ ಶ್ರೀಮುರಳಿ ಹೇಳಿದರು.
ನಟ ಶ್ರೀಮುರಳಿ ಅವರು ತಂದೆ, ತಾಯಿ ಹಾಗೂ ಪತ್ನಿ ಸಮೇತ ಶಿವಾಜಿನಗರದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.