ಮಾಸ್ಕ್ ಧರಿಸದವರಿಗೆ ದಂಡ: ಮಾರ್ಷಲ್ಗಳು- ಸಾರ್ವಜನಿಕರ ಮಧ್ಯೆ ಗಲಾಟೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ. 4: ನಗರದಲ್ಲಿ ಮಾಸ್ಕ್ ಧರಿಸದೆ ಓಡಾಡುವ ಸಾರ್ವಜನಿಕರಿಗೆ ದಂಡ ಹಾಕುವ ಕೆಲಸ ಬಿಬಿಎಂಪಿ ಮಾರ್ಷಲ್ಗಳಿಗೆ ತಲೆನೋವಾಗಿ ಪರಿಣಮಿಸಿದೆ. ದಂಡ ವಿಚಾರಕ್ಕೆ ಮಾರ್ಷಲ್ಗಳು ಹಾಗೂ ಸಾರ್ವಜನಿಕರ ಮಧ್ಯೆ ಗಲಾಟೆ ಮತ್ತು ಜಗಳ ಹೆಚ್ಚುತ್ತಿದೆ.
ನಗರದ ಕೆಲವು ಕಡೆ ಸಾರ್ವಜನಿಕರು ಮಾರ್ಷಲ್ಗಳ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ. ಅಲ್ಲದೇ ಮಾಸ್ಕ್ ಹಾಕಿಲ್ಲ ಅನ್ನುವುದಕ್ಕೆ ಸಾಕ್ಷಿ ಕೊಡಿ ಎಂದು ಗಲಾಟೆ ಮಾಡುತ್ತಿದ್ದಾರೆ. ಮಾರ್ಷಲ್ಗಳು ಮಾಸ್ಕ್ ಹಾಕದವರ ಫೋಟೋ ತೆಗೆದು ದಂಡ ಹಾಕುತ್ತಿದ್ದರೂ ''ಮಾಸ್ಕ್ ನನ್ನ ಕೈಯಲ್ಲಿದೆ, ಈಗ ಮಾಸ್ಕ್ ಹಾಕುತ್ತೇನೆ. ಆದರೆ, ದಂಡ ಮಾತ್ರ ಕಟ್ಟಲ್ಲ'' ಎಂದು ಕೆಲವರು ಕಿರಿಕ್ ಮಾಡುತ್ತಿದ್ದಾರೆ. ಜೊತೆಗೆ, ನನಗೆ ಪೊಲೀಸ್ ಕಮೀಷನರ್ ಗೊತ್ತು, ಅಧಿಕಾರಿಗಳು ಗೊತ್ತು ಎಂದು ಮಾರ್ಷಲ್ಗಳ ಮೇಲೆ ಒತ್ತಡ ಸಹ ಹೇರುತ್ತಿದ್ದಾರೆ. ಈ ರೀತಿಯ ಸಾರ್ವಜನಿಕರ ಕೂಗಾಟಕ್ಕೆ ಮಾರ್ಷಲ್ಗಳು ಹೈರಾಣಾಗಿ ಹೋಗಿದ್ದಾರೆ.
ಶನಿವಾರ ರಾತ್ರಿ ಮಲ್ಲೇಶ್ವರದಲ್ಲಿ ಕಾರು ಚಾಲಕನೊಬ್ಬ ದಂಡ ಕಟ್ಟಿದರೆ ಕೊರೋನ ಸೋಂಕು ಹೋಗುತ್ತಾ? ಎಷ್ಟು ಲಕ್ಷ ದುಡ್ಡು ಮಾಡಿದ್ದೀರಾ ಎಂದು ಮಾರ್ಷಲ್ಗಳಿಗೆ ಪ್ರಶ್ನೆ ಹಾಕಿದ್ದಾನೆ. ಕೊನೆಗೆ, ನಾನು ಮಾಸ್ಕ್ ಹಾಕುವುದಿಲ್ಲ, ದಂಡವನ್ನೂ ಕಟ್ಟಲ್ಲ ಎಂದು ಕಿರಿಕ್ ಮಾಡಿದ್ದಾನೆ. ತನ್ನ ಉದ್ಧಟತನ ಮುಂದುವರಿಸುತ್ತಾ ಮಾರ್ಷಲ್ ಮೇಲೆ ಕಾರು ಹತ್ತಿಸಲು ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ದಂಡ ಪಾವತಿಸಲಾಗದೇ ಯುವತಿ ಕಣ್ಣೀರು: ಮಾಸ್ಕ್ ದಂಡ ಕಟ್ಟಲಾಗದೆ ಯುವತಿಯೊಬ್ಬಳು ಪರದಾಡಿದ ಘಟನೆ ಸಹ ಮಲ್ಲೇಶ್ವರದಲ್ಲಿ ನಡೆದಿದೆ. ಆಟೋದಲ್ಲಿ ಸಂಚಾರ ಮಾಡುವಾಗ ಯುವತಿ ಮಾಸ್ಕ್ ಸರಿಯಾಗಿ ಹಾಕಿರಲಿಲ್ಲ. ಜೊತೆಗೆ, ಆಟೋದಲ್ಲಿ ನಾಲ್ಕು ಜನರು ಒಟ್ಟಿಗೆ ಪ್ರಯಾಣ ಮಾಡ್ತಾ ಇದ್ದರು. ಹೀಗಾಗಿ, ಆಕೆಗೆ ಫೈನ್ ಹಾಕಲು ಮಾರ್ಷಲ್ಗಳು ಮುಂದಾದರು. ಈ ವೇಳೆ 1 ಸಾವಿರ ರೂಪಾಯಿ ಫೈನ್ ಕಟ್ಟುವುದಕ್ಕೆ ನನ್ನ ಬಳಿ ದುಡ್ಡು ಇಲ್ಲಾ ಎಂದು ಯುವತಿ ಕೈಯಲ್ಲಿ ಮತ್ತು ಬ್ಯಾಗ್ನಲ್ಲಿದ್ದ ಚಿಲ್ಲರೆ ಕಾಸು ಕೊಡಲು ಮುಂದಾದಳು. ತನ್ನ ಬಳಿ ಇರುವ ಎಲ್ಲಾ ಚಿಲ್ಲರೆ ಕಾಸು ನೀಡಲು ಮುಂದಾದಳು. ಆದರೆ, ಇದೆಲ್ಲಾ ಸೇರಿಸಿ ಒಂದು ಸಾವಿರ ರೂಪಾಯಿ ಆಗಲಿಲ್ಲ. ಹಾಗಾಗಿ, ಯುವತಿ ಆಟೋದಲ್ಲೇ ಕುಳಿತು ಕಣ್ಣೀರು ಹಾಕಿದಳು. ಮಾಸ್ಕ್ ಕಡ್ಡಾಯವಾಗಿ ಹಾಕುತ್ತೇನೆ ಬಿಟ್ಟುಬಿಡಿ ಎಂದು ಮಾರ್ಷಲ್ಗಳಿಗೆ ಬೇಡಿಕೊಂಡಿದ್ದಾಳೆ. ಕೊನೆಗೆ ಆಕೆಗೆ ಎಚ್ಚರಿಕೆ ನೀಡಿ ಮಾರ್ಷಲ್ಗಳು ಕಳುಹಿಸಿಕೊಟ್ಟರು.