50.22 ಲಕ್ಷ ರೂ. ಎಲ್ಲಿ ಸಿಕ್ಕಿದೆ ಎಂಬುದನ್ನು ಸಿಬಿಐ ಅಧಿಕಾರಿಗಳೇ ಸ್ಪಷ್ಟಪಡಿಸಬೇಕು: ಸಂಸದ ಡಿ.ಕೆ.ಸುರೇಶ್
ಬೆಂಗಳೂರು, ಅ.6: ಪ್ರಮುಖವಾಗಿ ಕನಕಪುರ, ಬೆಂಗಳೂರು ಮತ್ತು ದಿಲ್ಲಿಯ ನಮ್ಮ ಮನೆ ಮತ್ತು ಕಚೇರಿಗಳಿಗೆ ಬಂದು ಯಾವುದೇ ಕಿರುಕುಳ ನೀಡದೆ ವೃತ್ತಿಪರವಾಗಿ ನಡೆದುಕೊಂಡ ಸಿಬಿಐ ಅಧಿಕಾರಿಗಳಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು, ಅಧಿಕಾರಿಗಳ ದಾಖಲೆ ಪರಿಶೀಲನೆಯಲ್ಲಿ ನನ್ನ ಮತ್ತು ನನ್ನ ಅಣ್ಣನ ಮನೆಯಿಂದ ಸೇರಿ ಒಟ್ಟು 6.78 ಲಕ್ಷ ರೂಪಾಯಿಗಳು ಸಿಕ್ಕಿರುತ್ತದೆ. ಅದರಲ್ಲಿ ನನ್ನ ದಿಲ್ಲಿ ನಿವಾಸದಲ್ಲಿ 1.57 ಲಕ್ಷ ರೂ., ಬೆಂಗಳೂರಿನ ನನ್ನ ಅಣ್ಣನ ನಿವಾಸದಲ್ಲಿ 1.71 ಲಕ್ಷ ರೂ., ಅವರ ಬೆಂಗಳೂರಿನ ಕಚೇರಿಯಲ್ಲಿ 3.5 ಲಕ್ಷ ರೂಪಾಯಿಗಳು ಅಧಿಕಾರಿಗಳಿಗೆ ಸಿಕ್ಕಿರುವುದು ಖಾತ್ರಿ ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ನನ್ನ ಅಣ್ಣನ ದಿಲ್ಲಿ ಮನೆ ಮತ್ತು ನನ್ನ ಬೆಂಗಳೂರಿನ ಮನೆಯಲ್ಲಿ ಯಾವುದೇ ಹಣ ಸಿಕ್ಕಿಲ್ಲ. ಹಾಗೆಯೇ ನಮ್ಮ ಎರಡೂ ಮನೆಗಳಲ್ಲಿ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಆಭರಣಗಳನ್ನೂ ವಶಪಡಿಸಿಕೊಂಡಿಲ್ಲ. ಆಭರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಐಟಿ ಮತ್ತು ಈಡಿಗೆ ಕೊಟ್ಟ ದಾಖಲೆಗಳನ್ನೇ ಮತ್ತೊಮ್ಮೆ ಸಿಬಿಐ ಸ್ಪಷ್ಟನೆ ತೆಗೆದುಕೊಂಡಿದೆ ಎಂದು ಸುರೇಶ್ ಹೇಳಿದ್ದಾರೆ.
ಇನ್ನು ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಒಟ್ಟು 57 ಲಕ್ಷ ರೂ. ಸಿಕ್ಕಿದ ಮಾಹಿತಿ ಕೊಟ್ಟಿದ್ದಾರೆ. ಇದರಲ್ಲಿ ಬಾಕಿ 50.22 ಲಕ್ಷ ಹಣ ಎಲ್ಲಿ ಸಿಕ್ಕಿದೆ, ಅದರ ಹಿನ್ನೆಲೆ ಏನು ಎಂಬುದನ್ನು ಅಧಿಕಾರಿಗಳೇ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಹಿಂದೆ ಐಟಿ ಮತ್ತು ಈಡಿ ಅಧಿಕಾರಿಗಳು ಪರಿಶೀಲಿಸಿದ ದಾಖಲೆಗಳ ನಕಲು ಪ್ರತಿಗಳನ್ನು ಸಿಬಿಐ ಕಡೆ ಕೊಟ್ಟಿರುತ್ತೇವೆ. ಇನ್ನು ಮುಂದೆಯೂ ಬೇಕಾದ ಎಲ್ಲ ದಾಖಲೆಗಳನ್ನು ಒಪ್ಪಿಸಲು ತಯಾರಿದ್ದೇವೆ. ಈ ಎಲ್ಲ ಪರೀಕ್ಷೆಗಳನ್ನು ಎದುರಿಸಿ ಹೊರಬರುವ ವಿಶ್ವಾಸ ನಮಗಿದೆ. ಅಭಿಮಾನಿಗಳು ಮತ್ತು ಹಿತೈಷಿಗಳಾದ ನಿಮ್ಮೆಲ್ಲರ ಆಶೀರ್ವಾದ ಹಾರೈಕೆ ಸದಾ ಹೀಗೇ ಇರಲಿ ಎಂದು ಸುರೇಶ್ ಕೋರಿದ್ದಾರೆ.