ರಂಗೇರಿದ ಉಪಚುನಾವಣಾ ಅಖಾಡ: ಮೂರು ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಬೆಂಗಳೂರು, ಅ. 14: ಬೆಂಗಳೂರಿನ ರಾಜರಾಜೇಶ್ವರಿ ನಗರ(ಆರ್.ಆರ್.ನಗರ) ಮತ್ತು ತುಮಕೂರು ಜಿಲ್ಲೆ ಶಿರಾ ಕ್ಷೇತ್ರಗಳ ಉಪಚುನಾವಣಾ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ನ ಘಟಾನುಘಟಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಬುಧವಾರ ಇಲ್ಲಿನ ರಾಜರಾಜೇಶ್ವರಿ ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕಚೇರಿಯಲ್ಲಿ ಬಿಜೆಪಿಯ ಮುನಿರತ್ನ, ಕಾಂಗ್ರೆಸ್ ಪಕ್ಷದ ಕುಸುಮಾ ಹನುಮಂತರಾಯಪ್ಪ ಹಾಗೂ ಜೆಡಿಎಸ್ ಪಕ್ಷದ ಕೃಷ್ಣಮೂರ್ತಿ ಅವರು ತಮ್ಮ ಪಕ್ಷದ ಹಿರಿಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಉಮೇದುವಾರಿಕೆ ಸಲ್ಲಿಸಿದ್ದು, ಉಪಚುನಾವಣಾ ರಣಕಣ ರಂಗೇರುತ್ತಿದೆ.
ಎರಡೂ ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅ.16ಕ್ಕೆ ಕೊನೆಯ ದಿನವಾಗಿದೆ. ಆದರೆ, ಅ.16ಕ್ಕೆ ಅಮಾವಾಸ್ಯೆ ಇರುವುದರಿಂದ ಮೂರು ಪಕ್ಷಗಳ ಅಭ್ಯರ್ಥಿಗಳು ಇಂದೇ ನಾಮಪತ್ರ ಸಲ್ಲಿಸಿದ್ದು, ಮೂವರು ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನ ನಡೆಸುವ ಮೂಲಕ ಉಪ ಚುನಾವಣೆ ಹೋರಾಟದ ಜಿದ್ದಿಜಿದ್ದಿಯನ್ನು ಪ್ರದರ್ಶಿಸಿದ್ದಾರೆ. ಅಭ್ಯರ್ಥಿಗಳು ಅತ್ತ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುತ್ತಿದ್ದರೆ ಹೊರಗೆ ಮೂರು ಪಕ್ಷಗಳ ಕಾರ್ಯಕರ್ತರ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದ `ಬಿ' ಫಾರಂ ಪಡೆದು ನಾಮಪತ್ರದೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಂಪುಟ ಸಹೋದ್ಯೋಗಿಗಳಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಡಾ.ಕೆ.ಸುಧಾಕರ್, ಡಿಸಿಎಂ ಡಾ.ಅಶ್ವತ್ಥ ನಾರಾಯಣ, ಪಕ್ಷದ ಮುಖಂಡ ಲಿಂಬಾವಳಿ ಅವರೊಂದಿಗೆ ಗಣೇಶ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉಮೇದುವಾರಿಕೆ ಸಲ್ಲಿಸಿದರು.
ಅದೇ ರೀತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಅವರು ಇಲ್ಲಿನ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಹಿಂಭಾಗದಲ್ಲಿರುವ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಮುಖಂಡರಾದ ನಸೀರ್ ಅಹ್ಮದ್, ರಾಮಲಿಂಗಾರೆಡ್ಡಿ ಸೇರಿದಂತೆ ಇನ್ನಿತರರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು.
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಮೊದಲೇ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರಿಂದ `ಬಿ' ಫಾರಂ ಪಡೆದು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿ ಇನ್ನಿತರ ಮುಖಂಡರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು. ಮೂರು ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯೊಂದಿಗೆ ಕ್ಷೇತ್ರದಲ್ಲಿ ಚುನಾವಣಾ ಕಾವು ಏರತೊಡಗಿದೆ.
ಅಂತರ ಕಣ್ಮರೆ: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಈ ಉಪಚುನಾವಣೆ ತೀವ್ರ ಪ್ರತಿಷ್ಠೆ, ಜಿದ್ದಾಜಿದ್ದಿ ಸೃಷ್ಟಿಸಿದೆ. ಹೀಗಾಗಿ ಮೂರು ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ದೊಡ್ಡ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಸೇರಿದಿದ್ದರು. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಿದ್ದರು. ಆದರೂ, ವ್ಯಕ್ತಿಗತ ಅಂತರ ಕಣ್ಮರೆಯಾಗಿತ್ತು. ಹೀಗಾಗಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆರೋಪವು ಕೇಳಿಬಂದಿದೆ.
ಅತ್ತ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲೂ ಕೊನೆಯ ಕ್ಷಣದಲ್ಲಿ ಬಿಜೆಪಿ ಸೇರ್ಪಡೆಯಾಗಿ ಟಿಕೆಟ್ ಗಿಟ್ಟಿಸಿರುವ ಡಾ.ರಾಜೇಶ್ ಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಸುರೇಶ್ಗೌಡ, ಎಸ್ಸಿ ಮೋರ್ಚಾ ಅಧ್ಯಕ್ಷ ಹುಚ್ಚಯ್ಯ ಅವರೊಂದಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿರುವ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ನಾಳೆ(ಅ.15) ನಾಮಪತ್ರ ಸಲ್ಲಿಸಲಿದ್ದಾರೆ.
ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಆಡಳಿತರೂಢ ಬಿಜೆಪಿಗೆ ಪ್ರತಿಷ್ಠೆಯಾಗಿದ್ದರೆ, ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಅವರಿಗೂ ಗೆಲುವು ಪ್ರತಿಷ್ಟೆಯಾಗಿದೆ. ಜತೆಗೆ ಜೆಡಿಎಸ್ ಭದ್ರಕೋಟೆಯಲ್ಲಿ ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್ ಹೋರಾಟ ನಡೆಸಿದ್ದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಗೆಲುವಿಗೆ ತೀವ್ರ ಕಸರತ್ತು ನಡೆಸಿದೆ.
ಅ.17ಕ್ಕೆ ನಾಮಪತ್ರ ಪರಿಶೀಲನೆ: ಅ.16ಕ್ಕೆ ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದ್ದು, ಅ.17ಕ್ಕೆ ಉಮೇದುವಾರಿಕೆ ಪರಿಶೀಲನೆ ನಡೆಯಲಿದೆ. ಅ.19ಕ್ಕೆ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ನವೆಂಬರ್ 3ಕ್ಕೆ ತೀವ್ರ ಪೈಪೋಟಿ ಸೃಷ್ಟಿಸಿರುವ ಉಪ ಚುನಾವಣೆಗೆ ಮತದಾನ ನಡೆಯಲಿದ್ದು, ಅ.10ಕ್ಕೆ ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಹೊರಬಲಿದೆ
ಈ ಚುನಾವಣೆ ಅಭಿವೃದ್ಧಿ ಪರವಾದ ಚುನಾವಣೆ. ನನಗೆ ನನ್ನ ಮನೆಗೇ ಬಂದಷ್ಟು ಖುಷಿಯಾಗುತ್ತಿದೆ. ಇಲ್ಲಿರುವ ಒಗ್ಗಟ್ಟು ನನಗೆ ಹಿಂದಿನ ಚುನಾವಣೆಗಳಲ್ಲಿ ಕಾಣಿಸಿರಲಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಪಕ್ಷದ ಸರಕಾರವಿದೆ. ಅಭಿವೃದ್ದಿ ಕೆಲಸಗಳನ್ನು ಮಾಡುವವರು ಯಾರು ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ಜನ ನನ್ನ ಕೈಬಿಡುವುದಿಲ್ಲ. ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ'
-ಮುನಿರತ್ನ, ಬಿಜೆಪಿ ಅಭ್ಯರ್ಥಿ`ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಂಡೆಕಲ್ಲಿನ ಆಟ ನಡೆಯಲ್ಲ. ಬಂಡೆ ಪುಡಿ ಪುಡಿಯಾಗುತ್ತೆ. ಕ್ಷೇತ್ರದಲ್ಲಿ ಕಾಂಗ್ರೆಸ್ನವರಿಗೆ ಅಭ್ಯರ್ಥಿ ಇಲ್ಲ. ಹೀಗಾಗಿ ಮುಖಂಡ ಹನುಮಂತರಾಯಪ್ಪ ಪುತ್ರಿಯನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಬಂಡೆ ಏನಿದ್ದರೂ ಕನಕಪುರಕ್ಕೆ ಮಾತ್ರ ಸೀಮಿತ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಜನ ಅಭಿವೃದ್ಧಿಗೆ ಮತ ಕೊಡಲಿದ್ದು, ಪಕ್ಷದ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ'
-ಆರ್.ಅಶೋಕ್, ಕಂದಾಯ ಸಚಿವ`ಕೊರೋನ ಸೋಂಕು ನಿಯಂತ್ರಿಸುವಲ್ಲಿ ಆಡಳಿತಾರೂಢ ಬಿಜೆಪಿ ಸಂಪೂರ್ಣ ವಿಫಲವಾಗಿದ್ದು, ಉಪ ಚುನಾವಣೆಯಲ್ಲಿ ಗೆಲ್ಲುವ ಭ್ರಮೆಯಲ್ಲಿದ್ದರೆ, ಕಾಂಗ್ರೆಸ್ ನಾಯಕರಿಂದ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಇಬ್ಬರ ಆಟವೂ ಇಲ್ಲಿ ನಡೆಯುವುದಿಲ್ಲ. ಎರಡೂ ಪಕ್ಷಗಳಿಗೂ ಮತ ಕೇಳುವ ನೈತಿಕತೆ ಇಲ್ಲ. ಆರ್.ಆರ್.ನಗರ ಸಹಿತ ಎರಡೂ ಕ್ಷೇತ್ರದಲ್ಲಿಯೂ ನಾನೇ ಉಸ್ತುವಾರಿ ವಹಿಸಿಕೊಂಡಿದ್ದು ಅಭ್ಯರ್ಥಿಗಳ ಪರ ಪ್ರಚಾರ ಮಾಡುವೆ'
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕಈ ಉಪಚುನಾವಣೆ ಯಡಿಯೂರಪ್ಪ ಅವರ ರಾಜ್ಯ ಸರಕಾರ ಅಥವಾ ಮೋದಿಯವರ ಕೇಂದ್ರ ಸರಕಾರ ಬೀಳಿಸಲು ಅಲ್ಲ. ಬದಲಿಗೆ ಎರಡೂ ಸರಕಾರಗಳಿಗೆ ಸಂದೇಶ ರವಾನಿಸಲು ಈ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮನ್ನು ಬೆದರಿಸುವ ತಂತ್ರಗಳಿಗೆ ನಾವು ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ