ನಾಪತ್ತೆಯಾಗಿದ್ದ ಮಹಿಳೆ ಲಾಡ್ಜ್ ನಲ್ಲಿ ಶವವಾಗಿ ಪತ್ತೆ: ಕೊಲೆ ಶಂಕೆ
ಬೆಂಗಳೂರು, ನ.27: ರಾಜಧಾನಿ ಬೆಂಗಳೂರಿನ ಲಾಡ್ಜ್ ವೊಂದರಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತ ಮಹಿಳೆಯನ್ನು ಸಿದ್ದಾಪುರ ನಿವಾಸಿ ಕಮಲಾ ಎಂದು ಗುರುತಿಸಲಾಗಿದ್ದು, ಈಕೆ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದು, ಓಬಳೇಶ್ ಎಂಬವರನ್ನು ಮದುವೆಯಾಗಿದ್ದರು ಎನ್ನಲಾಗಿದೆ.
ಆದರೆ ನ. 24ರಂದು ಕಮಲಾ ನಾಪತ್ತೆಯಾಗಿದ್ದರು. ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪತಿ ಓಬಳೇಶ್ ದೂರು ದಾಖಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿದಾಗ ಕಮಲಾ, ದಿಲೀಪ್ ಎಂಬಾತನ ಜೊತೆ ನ.24ರಂದು ಹೊರ ಹೋಗಿರುವ ವಿಚಾರ ತಿಳಿದುಬಂದಿದೆ.
ಪಶ್ಚಿಮ ವಿಭಾಗ ಠಾಣಾ ವ್ಯಾಪ್ತಿಯ ಲಾಡ್ಜ್ ನ ಕೊಠಡಿಯಲ್ಲಿ ದುರ್ವಾಸನೆ ಬಂದ ಕಾರಣ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಹೀಗಾಗಿ ಘಟನೆ ಬೆಳಕಿಗೆ ಬಂದಿದೆ. ಕೊಠಡಿಯ ಬಾಗಿಲು ತೆರೆದು ನೋಡಿದಾಗ ಕಮಲಾ ಶವ ಕೊಳೆತು ಹೋಗಿ, ಫ್ಯಾನ್ಗೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ನ.24ರಂದು ಕಮಲಾ ಹಾಗೂ ದಿಲೀಪ್ ಇಬ್ಬರು ಇದೇ ಕೊಠಡಿಯೊಳಗೆ ತೆರಳಿದ್ದ ವಿಚಾರ ಬೆಳಕಿಗೆ ಬಂದಿದೆ. ಆದರೆ, ವಾಪಸ್ ತೆರಳುವಾಗ ದಿಲೀಪ್ ಮಾತ್ರ ಹೊರಗಡೆ ತೆರಳಿದ್ದು ಅನುಮಾನಕ್ಕೆ ಕಾರಣವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಶ್ಚಿಮ ವಿಭಾಗದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.