ಬಿಬಿಎಂಪಿ ಚುನಾವಣಾ ಕಣಕ್ಕಿಳಿಯಲು ಉವೈಸಿ ನೇತೃತ್ವದ ಎಐಎಂಐಎಂ ಸಿದ್ಧತೆ
ಬೆಂಗಳೂರು, ಡಿ.28: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಂಸದ ಅಸದುದ್ದೀನ್ ಉವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸೆ ಇತ್ತೇಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷವು ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಇತ್ತೀಚೆಗೆ ಎಐಎಂಐಎಂ ಪಕ್ಷದ ಬೆಂಗಳೂರು ಘಟಕವನ್ನು ಪುನರ್ ರಚಿಸಿ ಆದೇಶ ಹೊರಡಿಸಿರುವ ಅಸಸುದ್ದೀನ್ ಉವೈಸಿ, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ. ಅಲ್ಪಸಂಖ್ಯಾತರ ಬಾಹುಳ್ಯವಿರುವ ಪ್ರದೇಶಗಳಲ್ಲಿ ಪ್ರಮುಖವಾಗಿ ಯುವ ಮತದಾರರನ್ನು ಪಕ್ಷದತ್ತ ಆಕರ್ಷಿಸಲು ಪ್ರಯತ್ನಿಸಲಾಗುತ್ತಿದೆ.
ಕಳೆದ ಬಾರಿ ನಡೆದಂತಹ ಬಿಬಿಎಂಪಿ ಚುನಾವಣೆಯಲ್ಲಿ ಎಐಎಂಐಎಂ ಸ್ಪರ್ಧಿಸಿದ್ದರೂ, ನಿರೀಕ್ಷಿತ ಮಟ್ಟದ ಯಶಸ್ಸನ್ನು ಸಾಧಿಸಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ಎಐಎಂಐಎಂ ಸ್ಪರ್ಧಿಸಲು ಉತ್ಸುಕವಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಲ್ತಾಫ್ ಖಾನ್ ಪರವಾಗಿ ಅಸಸುದ್ದೀನ್ ಉವೈಸಿ ಪ್ರಚಾರ ಮಾಡಿದ್ದನ್ನು ಸ್ಮರಿಸಬಹುದು.
ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ರಾಜಕೀಯ ಸಂಬಂಧ ಹಳಸುತ್ತಿರುವುದರಿಂದ, ಅಲ್ಪಸಂಖ್ಯಾತರ ಮತಗಳನ್ನು ಪಕ್ಷದ ಕಡೆ ಸೆಳೆಯಲು ಜೆಡಿಎಸ್, ಎಐಎಂಐಎಂ ಜೊತೆ ಪಾಲಿಕೆ ಚುನಾವಣೆಗೆ ಸೀಮಿತವಾಗಿ ಸ್ಥಳೀಯವಾಗಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಧನಾತ್ಮಕವಾಗಿ ಚಿಂತನೆ ನಡೆಸುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.