ಮಸಾಜ್ ಹೆಸರಿನಲ್ಲಿ ಬೆದರಿಸಿ ಹಣ ವಸೂಲಿ ಆರೋಪ: ಆರು ಮಂದಿ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.22: ಮಸಾಜ್ ಸೋಗಿನಲ್ಲಿ ಗ್ರಾಹಕರನ್ನು ಸೆಳೆದು ತದನಂತರ ಅವರ ಅಶ್ಲೀಲ ಚಿತ್ರಗಳನ್ನು ತೆಗೆದುಕೊಂಡು ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ಆರೋಪದಡಿ ಆರು ಜನರನ್ನು ಇಲ್ಲಿನ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ ನಿವಾಸಿ ಶಿವಕುಮಾರ್, ರಘು, ಮೈಕಲ್ರಾಜ್, ಸೆಲ್ವರಾಜ್, ತಿಮ್ಮಪ್ಪ, ಮನುಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಜ.11ರಂದು ಕುಮಾರಸ್ವಾಮಿ ಲೇಔಟ್ನ 38 ವರ್ಷದ ಯುವಕನೊಬ್ಬ ಮಸಾಜ್ ಮಾಡಿಸಿಕೊಳ್ಳಲು ಆನ್ಲೈನ್ನಲ್ಲಿ ಹುಡುಕಾಟ ನಡೆಸಿದಾಗ ಆರೋಪಿಗಳ ಮಾಹಿತಿ ಲಭ್ಯವಾಗಿದೆ. ತದನಂತರ ಅವರನ್ನು ಸಂಪರ್ಕಿಸಿದ್ದಾನೆ. ಬಳಿಕ ಆರೋಪಿಗಳು ಯುವತಿಯ ಅಶ್ಲೀಲ ಫೋಟೋಗಳನ್ನು ತೋರಿಸಿ 15 ಸಾವಿರ ಹಣ ಪಡೆದಿದ್ದಾರೆ. ಮನೆಯಲ್ಲೇ ಮಸಾಜ್ ಮಾಡುತ್ತೇವೆಂದು ಕೆಎಸ್ ಲೇಔಟ್ ಬಳಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಸಾಜ್ ಮಾಡುವ ನೆಪದಲ್ಲಿ ಯುವಕನೊಂದಿಗೆ ಮಹಿಳೆ ಅಶ್ಲೀಲ ಫೋಟೋ ತೆಗೆಸಿಕೊಂಡಿದ್ದಾಳೆ. ನಂತರ ಇದೇ ಫೋಟೋಗಳನ್ನ ತೋರಿಸಿ ನಾಲ್ಕು ಲಕ್ಷ ರೂ.ಗೆ ಬೇಡಿಕೆ ಇಟ್ಟು, ಹಂತ ಹಂತವಾಗಿ ಆರೋಪಿಯಿಂದ ಒಟ್ಟು 1.5 ಲಕ್ಷ ರೂ. ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಸಂತ್ರಸ್ತ ಯುವಕ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು, ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆ ತಲೆಮರೆಸಿಕೊಂಡಿದ್ದು, ಆಕೆಯ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.