ಇಂಜಿನಿಯರ್ ಮನೆಗೆ ಎಸಿಬಿ ದಾಳಿ: ಅಪಾರ ಮೌಲ್ಯದ ಬೆಳ್ಳಿ ವಸ್ತುಗಳು, ನಗದು ಪತ್ತೆ
ಬೆಂಗಳೂರು, ಜ.22: ಅಕ್ರಮ ಆಸ್ತಿ ಸಂಪಾದನೆ ಆರೋಪ ಬೆನ್ನಲ್ಲೇ ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಅಭಿಯಂತರನೋರ್ವನ(ಓಓಡಿ) ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಈ ವೇಳೆ ಬೆಳ್ಳಿಯ ಪೀಠ, ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.
ಶುಕ್ರವಾರ ಮುಂಜಾನೆ ಇಲ್ಲಿನ ಬೊಮ್ಮನಹಳ್ಳಿ ಉಪವಿಭಾಗದ ಓಓಡಿ ಸಿ.ಟಿ.ಅಂಜನಪ್ಪ ಅವರ ಕಚೇರಿ, ಬೆಂಗಳೂರಿನ ಜೀವನಭೀಮಾನಗರದಲ್ಲಿರುವ ನಿವಾಸ, ದಾವಣಗೆರೆ ಜಿಲ್ಲೆಯ ಲೋಕಿಕೆರೆ ಗ್ರಾಮದ ಮನೆ, ಚನ್ನಗಿರಿ ತಾಲೂಕಿನಲ್ಲಿರುವ ನಿವಾಸ ಹಾಗೂ ತೋಟದ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ತನಿಖಾಧಿಕಾರಿಗಳು ಶೋಧ ಕಾರ್ಯ ಕೈಗೊಂಡರು.
ದಾಳಿ ಸಂದರ್ಭದಲ್ಲಿ ಅಪಾರ ಮೌಲ್ಯದ ಬೆಳ್ಳಿ ವಸ್ತುಗಳು, ನಗದು ಪತ್ತೆಯಾಗಿದ್ದು, ಇದರ ಖಚಿತ ಮೌಲ್ಯವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.
Next Story