ಅಕ್ರಮವಾಗಿ ಪಿಸ್ತೂಲು, ಮದ್ದು ಗುಂಡು ಕಳ್ಳಸಾಗಣೆ: 8 ಮಂದಿ ಬಂಧನ
ಬೆಂಗಳೂರು, ಮಾ.1: ಅಕ್ರಮವಾಗಿ ಪಿಸ್ತೂಲ್ ಹಾಗೂ ಜೀವಂತ ಮದ್ದು ಗುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ 8 ಮಂದಿಯ ಗುಂಪನ್ನು ಇಲ್ಲಿನ ಸಿಟಿ ಮಾರುಕಟ್ಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬಂಧಿತರಿಂದ 13 ಪಿಸ್ತೂಲ್ಗಳು, 52 ಜೀವಂತ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಮದ್ದು ಗುಂಡು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಹೆಗಡೆ ನಗರದ ಫಯಾಝ್(31), ವಿನಯ್(29), ಉತ್ತರ ಪ್ರದೇಶದ ಫರಾಕ್ ಕುಮಾರ್(39), ಗುಜರಾತಿನ ಶಹನವಾಝ್ ಅನ್ಸಾರಿ(29), ಮಧ್ಯ ಪ್ರದೇಶದ ನಾಸೀರ್ ಶೇಖ್(50), ಸಲ್ಮಾನ್ ಖಾನ್(29), ಫಕ್ರುದ್ದೀನ್(37) ಬಂಧಿತ ಆರೋಪಿಗಳೆಂದು ಅವರು ತಿಳಿಸಿದರು.
ಮತ್ತೊಬ್ಬ ಆರೋಪಿ ಹೆಗಡೆ ನಗರದ ಖದೀರ್ ಖಾನ್(32), ಸಿ.ಟಿ. ಮಾರುಕಟ್ಟೆಯ ಕೊನಾರ್ಕ್ ರೆಸಿಡೆನ್ಸಿ ಲಾಡ್ಜ್ನಲ್ಲಿ ಅಕ್ರಮವಾಗಿ ಪಿಸ್ತೂಲ್, ಮದ್ದು ಗುಂಡುಗಳನ್ನು ಕಳ್ಳಸಾಗಣೆ ಮಾಡಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.