ಬೆಂಗಳೂರು: ಪ್ರಿಯಕರ, ಸ್ನೇಹಿತನಿಂದ ರೂಪದರ್ಶಿಯ ಅತ್ಯಾಚಾರ; ಆರೋಪ
ಬೆಂಗಳೂರು, ಎ.10: ರೂಪದರ್ಶಿಯ ಮೇಲೆ ಆಕೆಯ ಪ್ರಿಯತಮ ಮತ್ತು ಆತನ ಸ್ನೇಹಿತ ಅತ್ಯಾಚಾರಗೈದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ರೂಪದರ್ಶಿಯಾಗಿದ್ದ ಯುವತಿಯನ್ನು ಪ್ರಮೋದ್ ಎಂಬಾತ ಪ್ರೀತಿಸುತ್ತಿದ್ದ. ಇತ್ತೀಚಿಗೆ ಪ್ರಮೋದ್ ಯುವತಿಯನ್ನು ಯಶವಂತಪುರದ ಲಾಡ್ಜ್ ಗೆ ಕರೆಸಿಕೊಂಡಿದ್ದಾನೆ. ಬಳಿಕ ತಂಪು ಪಾನೀಯದಲ್ಲಿ ನಶೆಯ ಪುಡಿ ಸೇರಿಸಿ ಕೊಟ್ಟಿದ್ದಾನೆ. ನಂತರ ಪ್ರಮೋದ್ ಹಾಗೂ ಆತನ ಸ್ನೇಹಿತ ಧನಂಜಯ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಅತ್ಯಾಚಾರ ನಡೆಸಿದ ಆರೋಪಿಗಳು ಯುವತಿ ಜೊತೆಗಿನ ಖಾಸಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಬಳಿಕ ಸಂತ್ರಸ್ತ ಯುವತಿಗೆ ಕರೆ ಮಾಡಿ ಖಾಸಗಿ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಕರೆಸಿಕೊಂಡು ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ನೊಂದ ಯುವತಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಪ್ರಮೋದ್ ಹಾಗೂ ಧನಂಜಯ್ ಬಂಧನಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.