ಬೆಂಗಳೂರು: ನಾಯಿಗಳ ದಾಳಿಗೆ ಒಳಗಾಗಿ ವೃದ್ಧೆ ಮೃತ್ಯು
ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 15: ನಗರ ವ್ಯಾಪ್ತಿಯಲ್ಲಿ ವೃದ್ಧೆಯ ಮೇಲೆ ನಾಯಿಗಳು ದಾಳಿ ನಡೆಸಿರುವ ಪರಿಣಾಮ ತೀವ್ರವಾಗಿ ಗಾಯಗೊಂಡು ಆಕೆ ಮೃತಪಟ್ಟಿರುವ ಘಟನೆ ಇಲ್ಲಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಸುಬ್ರಹ್ಮಣ್ಯಪುರದಲ್ಲಿ ಈ ಘಟನೆ ನಡೆದಿದ್ದು, ತಡರಾತ್ರಿ 9:30ಕ್ಕೆ ವೃದ್ಧೆ ಮೇಲೆ ನಾಯಿಗಳು ದಾಳಿ ನಡೆಸಿ, ಗಾಯಗೊಳಿಸಿವೆ. ತದನಂತರ, ಸ್ಥಳೀಯರು ವೃದ್ಧೆಯನ್ನ ರಕ್ಷಿಸಿ, ನಾಯಿಗಳನ್ನು ಓಡಿಸಿದ್ದಾರೆ. ಆದರೂ, ಕೆಲ ಸಮಯದ ಬಳಿಕ ಮತ್ತೆ ವೃದ್ಧೆಯನ್ನು ಎಳೆದೊಯ್ದ ಶ್ವಾನಗಳು, ವೃದ್ಧೆಯ ಮೇಲೆ ದಾಳಿ ನಡೆಸಿ ಮಾಂಸವನ್ನು ಎಳೆದು ಕಚ್ಚಿವೆ. ಇದರ ಪರಿಣಾಮ ವೃದ್ಧೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ವೃದ್ಧೆಯ ಮಾಹಿತಿ ಸದ್ಯಕ್ಕೆ ಪತ್ತೆಯಾಗಿಲ್ಲ. ವೃದ್ಧೆ, ನಿರ್ಗತಿಕರೆಂದು ಸ್ಥಳೀಯರು ಹೇಳುತ್ತಿದ್ದಾರೆ. ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆ ರವಾನೆ ಮಾಡಲಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದರು.