ಬೆಂಗಳೂರು: ಮಲ್ಲೇಶ್ವರಂ ಕ್ಷೇತ್ರದಲ್ಲಿ ಲಸಿಕಾ ಅಭಿಯಾನ ತ್ವರಿತಗೊಳಿಸಲು ಡಾ.ಅಶ್ವತ್ಥ ನಾರಾಯಣ ಒತ್ತು
ಲಸಿಕೆ ಪಡೆಯದವರ ಪಟ್ಟಿ ಸಲ್ಲಿಸಲು ಸಂಘ-ಸಂಸ್ಥೆಗಳಿಗೆ ಮನವಿ
ಬೆಂಗಳೂರು, ಜು. 4: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆಯ ಮೊದಲನೆ ಡೋಸ್ ಇನ್ನೂ ಯಾರಿಗೆ ಆಗಿಲ್ಲವೋ ಅಂತಹವರ ಹೆಸರುಗಳ ಪಟ್ಟಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ ಕ್ಷೇತ್ರದ ಶಾಸಕರೂ ಆಗಿರುವ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮನವಿ ಮಾಡಿದ್ದಾರೆ.
ಈ ಕುರಿತು ಕ್ಷೇತ್ರ ವ್ಯಾಪ್ತಿಯ ಸಂಘ-ಸಂಸ್ಥೆಗಳಿಗೆ ಅವರು ಪತ್ರ ಬರೆದಿದ್ದು, ಕೋವಿಡ್ ಲಸಿಕೆಯ ಒಂದನೆ ಡೋಸ್ ಹಾಕಿಸಿಕೊಳ್ಳಬೇಕಾಗಿರುವವರ 18 ವರ್ಷವಾದವರ ಪಟ್ಟಿಯನ್ನು ತಮ್ಮ ಕ್ಷೇತ್ರ ಕಚೇರಿಗೆ ಸಲ್ಲಿಸಲು ಅಥವಾ ದೂರವಾಣಿ ಸಂಖ್ಯೆ-080 2356 3944ಗೆ ಬೆಳಗ್ಗೆ 9ರಿಂದ ಸಂಜೆ 5ರೊಳಗೆ ಸಂಪರ್ಕಿಸಿ ಮಾಹಿತಿ ಕೊಡಲು ಅವರು ಕೋರಿದ್ದಾರೆ. ಮೇ ತಿಂಗಳಿಂದ ಇಲ್ಲಿಯವರೆಗೆ ಕ್ಷೇತ್ರದ ಎಲ್ಲ ವಾರ್ಡ್ಗಳಲ್ಲಿ 81 ಲಸಿಕಾ ಶಿಬಿರಗಳನ್ನು ನಡೆಸಲಾಗಿದ್ದು, 18ರಿಂದ 45 ವಯೋಮಾನದೊಳಗಿನ 40,043 ನಾಗರಿಕರು ಪ್ರಯೋಜನ ಪಡೆದಿದ್ದಾರೆ.
45 ವರ್ಷವಾದವರನ್ನು ಸರಕಾರಿ ಲಸಿಕಾ ಕೇಂದ್ರಗಳಿಗೆ ತೆರಳಲು ಉತ್ತೇಜಿಸಲಾಗುತ್ತಿದೆ. ಮಲ್ಲೇಶ್ವರಂ ಕ್ಷೇತ್ರವು 18 ವರ್ಷ ಮೇಲ್ಪಟ್ಟವರಿಗೆ ಶೇ.100ರಷ್ಟು ಲಸಿಕೆ ಪೂರೈಸಿದ ಮೊದಲ ಕ್ಷೇತ್ರವಾಗಬೇಕೆಂಬ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ, ಲಸಿಕಾ ವ್ಯಾಪ್ತಿಗೆ ಎಲ್ಲರನ್ನೂ ಒಳಪಡಿಸಲು ಅಗತ್ಯ ಸಹಕಾರ ನೀಡಬೇಕು. ಈ ಸಂಬಂಧ ಯಾವುದೇ ಮಾಹಿತಿಯನ್ನು ashwathcn@gmail.com ಗೆ ಇ-ಮೇಲ್ ಕೂಡ ಮಾಡಬಹುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.