ಬಿಎಂಟಿಸಿಯಲ್ಲಿ ಟಿಕೆಟ್ ರಹಿತ ಪ್ರಯಾಣ, ಒಂದೇ ತಿಂಗಳಲ್ಲಿ 3,64,560 ರೂ. ದಂಡ ವಸೂಲಿ
ಬೆಂಗಳೂರು, ಅ.21: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಟಿಕೆಟ್ ಪಡೆಯದೆ ಅನಧಿಕೃತವಾಗಿ ಸಂಚರಿಸುತ್ತಿದ್ದ ಪ್ರಯಾಣಿಕರಿಂದ ತನಿಖಾ ತಂಡಗಳು ಒಟ್ಟು 3,64,560 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಂಸ್ಥೆಯು ತಿಳಿಸಿದೆ.
ಸಾರಿಗೆ ಸಂಸ್ಥೆಯ ಆದಾಯ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ 2021ರ ಸೆಪ್ಟಂಬರ್ ತಿಂಗಳಿನಲ್ಲಿ ನಗರಾದ್ಯಂತ ಸಂಚರಿಸುವ ವಾಹನಗಳ 15,576 ಟ್ರಿಪ್ಗಳನ್ನು ತಪಾಸಣೆ ನಡೆಸಿ, 2,209 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗಿದ್ದು, ಅವರಿಂದ 3,45,660 ರೂ.ಗಳ ದಂಡ ವಸೂಲಿ ಮಾಡಲಾಗಿದೆ ಹಾಗೂ ಸಂಸ್ಥೆಯ ನಿರ್ವಾಹಕರ ಮೇಲೆ 1,455 ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸುವ 189 ಪುರುಷ ಪ್ರಯಾಣಿಕರಿಂದ 18,900 ರೂ.ಗಳ ದಂಡ ವಿಧಿಸಲಾಗಿದ್ದು, ಒಟ್ಟಾರೆಯಾಗಿ 2,398 ಪ್ರಯಾಣಿಕರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಬೆಂಮಸಾ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
Next Story