ಬೆಂಗಳೂರು: ಆಹಾರ ಡೆಲಿವರಿ ನೆಪದಲ್ಲಿ ಡ್ರಗ್ಸ್ ಸರಬರಾಜು ಆರೋಪ; ಐವರ ಬಂಧನ
ಬೆಂಗಳೂರು: ಆಹಾರ ಪದಾರ್ಥ ಕೊಡುವ ನೆಪದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೊಹದ್ ಸಕಾರಿಯ, ಶಾಮಿಲ್, ಪ್ರಣವ್, ಅನುಭವ್ ರವೀಂದ್ರನ್, ಶ್ಯಾಮ್ದಾಸ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಗಳು ಕ್ಯಲಾಗ್ಸ್, ನಾರ್ ಸೂಪ್ ಫುಡ್ ಪ್ಯಾಕೆಟ್ಗಳಲ್ಲಿ ಗಾಂಜಾ ಪ್ಯಾಕ್ ಮಾಡಿಕೊಂಡು ಮನೆ ಬಾಗಿಲಿಗೆ ತಲುಪಿಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ. ಐಟಿ-ಬಿಟಿ ಉದ್ಯೋಗಳು, ಶ್ರೀಮಂತರು ಹಾಗೂ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅವರು ಹೇಳಿದರು.
ಬಂಧಿತರಿಂದ 10 ಲಕ್ಷ ಬೆಲೆಬಾಳುವ 2 ಕೆಜಿ 345 ಗ್ರಾಂ ಗಾಂಜಾ, 27 ಗ್ರಾಂ ಎಂಡಿಎಂಎ ಕ್ರಿಸ್ಟಲ್, 20 ಎಲ್ಎಸ್ಡಿ ಕಡ್ಡಿ ವಶಕ್ಕೆ ಪಡೆದು ಇಲ್ಲಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.