ಬೆಂಗಳೂರು: ಮಹಿಳೆಯರ ಖಾಸಗಿ ಫೋಟೋ ತೆಗೆದು ಹಣಕ್ಕೆ ಬೇಡಿಕೆ; ಆರೋಪಿಯ ಬಂಧನ
ಬೆಂಗಳೂರು, ಫೆ.4: ಅವಿವಾಹಿತ ಮಹಿಳೆಯರನ್ನು ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯ ಮಾಡಿಕೊಂಡು ಅವರ ಅನುಮತಿಯಿಲ್ಲದೆ ಖಾಸಗಿ ಫೋಟೋಗಳನ್ನು ತೆಗೆದು ಲಕ್ಷಾಂತರ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದ ಚತ್ತೀಸ್ಘಡ ರಾಜ್ಯದ ಆರೋಪಿಯನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಭಿಷೇಕ್(33) ಎಂದು ಗುರುತಿಸಲಾಗಿದೆ. ಆರೋಪಿಯಿಂದ 3 ಮೊಬೈಲ್ ಹಾಗೂ 3.60 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
ಈತ ಸಾಫ್ಟವೇರ್ ಕಂಪೆನಿಯೊಂದನ್ನು ತೆರೆಯಲು ತಯಾರಿ ಮಾಡಿಕೊಳ್ಳುತ್ತಿದ್ದನು. ಆರೋಪಿ ಅಭಿಷೇಕ್ಗೆ ವಿವಾಹವಾಗಿ ಪತ್ನಿ, ಮಕ್ಕಳಿದ್ದರೂ ಸಹ ಟೆಂಡರ್ ಎಂಬ ಆ್ಯಪ್ ಮುಖಾಂತರ ಅವಿವಾಹಿತ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರನ್ನು ಪುಸಲಾಯಿಸಿ ವಿಶ್ವಾಸ ಗಳಿಸುತ್ತಿದ್ದನು. ಬಳಿಕ ಖಾಸಗಿ ಫೋಟೋಗಳನ್ನು ತೆಗೆದು ಹಣಕ್ಕೆ ಬೆದರಿಕೆ ಹಾಕುತ್ತಿದ್ದನು. ಮಹಿಳೆಯೊಬ್ಬರು ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Next Story