ರವಿ ಚನ್ನಣ್ಣನವರ್ ಸಹೋದರನ ಅಕ್ರಮ ಸಂಬಂಧ ಆರೋಪ: ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ಯುವತಿ
ಬೆಂಗಳೂರು, ಎ.27: ರವಿ ಡಿ. ಚೆನ್ನಣ್ಣನವರ್ ಸಹೋದರ ರಾಘವೇಂದ್ರ ಡಿ. ಚೆನ್ನಣ್ಣನವರ್ ತನ್ನನ್ನು 2015ರಲ್ಲಿ ವಿವಾಹವಾಗಿದ್ದು, ರುಕ್ಮಿಣಿ ಎಂಬ ಮತ್ತೊಂದು ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ. ಈ ಕುರಿತು ಪೊಲೀಸ್ ಆಯುಕ್ತರಿಗೆ ಹಾಗೂ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಶಿವಮೊಗ್ಗ ಮೂಲದ ಯುವತಿ ರೋಜಾ ತಿಳಿಸಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, “ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ರಾಘವೇಂದ್ರ ಡಿ. ಚೆನ್ನಣ್ಣನವರ್ ಅವರಿಗೆ ನನ್ನನ್ನು ಮದುವೆ ಮಾಡಿಕೊಟ್ಟಿದ್ದಾರೆ. ಆದರೆ ನನ್ನ ಗಂಡನನ್ನು ಅನೈತಿಕ ಸಂಬಂಧದ ಕುರಿತು ಪ್ರಶ್ನಿಸಿದ್ದಕ್ಕೆ, ನನ್ನ ಗಂಡ ಕೊಲೆ ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ, ಮಾನಸಿಕವಾಗಿ, ದೈಹಿಕವಾಗಿ ತುಂಬಾ ನೋವು ಕೊಟ್ಟಿದ್ದಾರೆ” ಎಂದು ಆರೋಪಿಸಿದರು.
ತಮ್ಮನ ಅನೈತಿಕ ಸಂಬಂಧದ ಬಗ್ಗೆ ಜವಾಬ್ದಾರಿಯುತ ಹುದ್ದೆಯಲ್ಲಿರುವ ರವಿ ಚನ್ನಣ್ಣನವರ್ ಅವರಿಗೆ ತಿಳಿಸಲಾಗಿತ್ತು. ಆದರೆ ಅವರು, ಅನೈತಿಕ ಸಂಬಂಧ ಇಟ್ಟುಕೊಂಡಿರುವ ಇನ್ನೊಬ್ಬಳ ಜೊತೆ ವಾಸವಾಗಿರುವಂತೆ ಒತ್ತಾಯಿಸುತ್ತಾರೆ. ರವಿ ಚನ್ನಣ್ಣನವರ್ ಮಗಳೋ ಅಥವಾ ಸಹೋದರಿಯೋ ಆಗಿದ್ದರೆ, ಈ ರೀತಿ ವರ್ತಿಸುತ್ತಿದ್ದರೆ ಎಂದು ಅವರು ಪ್ರಶ್ನಿಸಿದರು.
ಯುವತಿ ರೋಜಾ ಅವರ ತಂದೆ ಲೋಕೇಶಪ್ಪ ಮಾತನಾಡಿ, ನಗರದ ಹೊಟೇಲೊಂದರಲ್ಲಿ ವಾಲ್ಮೀಕಿ ಪೀಠದ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಮಾತುಕತೆಗೆ ಕರೆದಿದ್ದರು. ಮಾತುಕತೆಗೆ ರವಿ ಚನ್ನಣ್ಣನವರ್ ಬಂದಿದ್ದರು. ಆದರೆ ಮಾತುಕತೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಮದುವೆಯ ಸಮಯದಲ್ಲಿ ವರದಕ್ಷಿಣೆ ಕೊಟ್ಟಿದ್ದೇವೆ ಎಂದರು.
ರವಿ ಡಿ ಚನ್ನಣ್ಣನವರ್ ಅವರ ಸಹೋದರನು ಮಾಡಿರುವ ಅನ್ಯಾಯದ ವಿರುದ್ಧ ಸಿಟಿ ಸಿವಿಲ್ ಕೋರ್ಟ್ಗೆ ಹೋಗಿ ಪ್ರಕರಣ ದಾಖಲಿಸಲಾಗಿದೆ. ಇದೇ ತಿಂಗಳ 30ರಂದು ವಿಚಾರಣೆ ನಡೆಸುವುದಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ತಿಳಿಸಿದೆ ಎಂದು ಅವರು ಮಾಹಿತಿ ನೀಡಿದರು.