ವರಿಷ್ಠರ ತುರ್ತು ಬುಲಾವ್; ದಿಲ್ಲಿಗೆ ಸಿಎಂ ಬೊಮ್ಮಾಯಿ ಪ್ರಯಾಣ
ಬೆಂಗಳೂರು, ಮೇ 20: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟದಿಂದ ಆಗಿರುವ ಸಮಸ್ಯೆಗಳ ಬಗ್ಗೆ ಕಳೆದ ಎರಡು ದಿನಗಳಿಂದ ಪರಿಶೀಲನೆ ನಡೆಸುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಧ್ಯಾಹ್ನ ವರಿಷ್ಠರ ತುರ್ತು ಕರೆ ಹಿನ್ನೆಲೆಯಲ್ಲಿ ದಿಢೀರ್ ಆಗಿ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ.
ದಾವೋಸ್ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಮೇ 22ರಂದು ವಿದೇಶ ಪ್ರಯಾಣ ಕೈಗೊಳ್ಳಲಿರುವ ಮುಖ್ಯಮಂತ್ರಿ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಆರ್ಭಟದಿಂದ ಆಗಿರುವ ಅನಾಹುತಗಳ ಬಗ್ಗೆ ಸರಣಿ ಸಭೆಗಳನ್ನು ನಡೆಸಿ, ಅಧಿಕಾರಿಗಳು ಹಾಗೂ ಸಚಿವರಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲು ಬಯಸಿದ್ದರು.
ಇದೇ ವೇಳೆ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ ವಿಂಗಡನೆ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸಿ ಎಂಟು ವಾರದೊಳಗೆ ಚುನಾವಣೆ ಘೋಷಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ, ರಾಜ್ಯಸಭಾ ಚುನಾವಣೆ, ವಿಧಾನಪರಿಷತ್ ಚುನಾವಣೆ ಹಾಗೂ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿಯನ್ನು ವರಿಷ್ಠರು ದಿಲ್ಲಿಗೆ ಕರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.