ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು, ಮೇ 20: ಕಾಲೇಜೊಂದರ ಬಳಿ ಗಾಂಜಾ ಮತ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 2 ಲಕ್ಷ ರೂ.ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಜೀವನ್ ಭೀಮಾನಗರ ವ್ಯಾಪ್ತಿಯ ಕಾಲೇಜೊಂದರ ಆಟದ ಮೈದಾನದ ಬಳಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ, ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳೊಂದಿಗೆ ಈ ಇಬ್ಬರು ಪೆಡರ್ ಗಳು ಸೇರಿಕೊಂಡು ಕೆಜಿ ಗಟ್ಟಲೆ ಗಾಂಜಾವನ್ನು ಕಡಿಮೆ ಬೆಲೆಗೆ ನಗರಕ್ಕೆ ತರಿಸಿಕೊಂಡು ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಿಗೆ, ಪರಿಚಯಸ್ಥ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾವನ್ನು 10 ಗ್ರಾಂಗೆ 1500ರಿಂದ 2 ಸಾವಿರದವರೆಗೆ ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಮೊಕದ್ದಮೆ ದಾಖಲಿಸಿಕೊಂಡಿರುವ ಜೀವನ್ ಭೀಮಾನಗರ ಠಾಣಾ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಕಾರ್ಯಾಚರಣೆ ಕೈಗೊಂಡು, ಕಾಲೇಜೊಂದರ ಬಳಿ ಗಾಂಜಾ ಮತ್ತು ಎಂ.ಡಿ.ಎಂ.ಎ ಮಾರಾಟ ಮಾಡುತ್ತಿದ್ದ ಓರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸಿ ಸುಮಾರು 2 ಲಕ್ಷ ರೂ ಬೆಲೆಯ 1 ಕೆಜಿ 100 ಗ್ರಾಂ ಗಾಂಜಾ & ಮನೋಪರಿಣಾಮಕ ಎಂ.ಡಿ.ಎಂ.ಎ ಕ್ರಿಸ್ಟಲ್ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
— Raman Gupta IPS (@JointCP_crime) May 20, 2022