ಬೆಂಗಳೂರು: ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದ ಬ್ರಿಗೇಡ್ ರಸ್ತೆಯ ವಾಣಿಜ್ಯ ಸಂಕೀರ್ಣ ಕಟ್ಟಡವೊಂದರ ಮೇಲಿಂದ ವಿದ್ಯಾರ್ಥಿನಿಯೊಬ್ಬಾಕೆ ಬಿದ್ದು, ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಜರುಗಿದೆ. ಫ್ರೇಜರ್ಟೌನ್ ನಿವಾಸಿ ಲಿಯಾ(20) ಮೃತ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.
ಶನಿವಾರ ಇಲ್ಲಿನ ಬ್ರಿಗೇಡ್ ರಸ್ತೆಯ ವಾಣಿಜ್ಯ ಸಂಕೀರ್ಣದ ಕಟ್ಟಡಕ್ಕೆ ಗೆಳೆಯ ಆಂಧ್ರಪ್ರದೇಶ ಮೂಲದ ಪೀಟರ್ ಜತೆ ಬಂದಿದ್ದ ಲಿಯಾ, ಎರಡನೆ ಮಹಡಿಯಲ್ಲಿ ಆಕಸ್ಮಿಕವಾಗಿ ಕಿಟಕಿಯಿಂದ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಘಟನೆಯಲ್ಲಿ ಪೀಟರ್ ಸಹ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಲಾಗುತ್ತಿದೆ.
ಇಬ್ಬರೂ ಖಾಸಗಿ ಕಾಲೇಜಿನಲ್ಲಿ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿಗಳಾಗಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ. ಎರಡನೆ ಮಹಡಿಯಲ್ಲಿದ್ದ ಕಿಟಕಿಯಲ್ಲಿ ಬರೀ ಗಾಜುಗಳಿದ್ದು, ಇದು ಒಡೆದು ಲಿಯಾ ದಿಢೀರ್ ಕೆಳಗೆ ಬಿದ್ದು, ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.