ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ‘ಫೋರ್ಬ್ಸ್’ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಗೆ 4ನೇ ಸ್ಥಾನ
ನ್ಯೂಯಾರ್ಕ್: ಪ್ರತಿಷ್ಠಿತ ಫೋರ್ಬ್ಸ್ ಮ್ಯಾಗಜೀನ್ 2019ರ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಜಗತ್ತಿನ ನಟರ ಪಟ್ಟಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ 65 ಮಿಲಿಯನ್ ಅಮೆರಿಕನ್ ಡಾಲರ್ ಗಳಿಕೆಯೊಂದಿಗೆ (ಅಂದಾಜು ರೂ. 446 ಕೋಟಿ) ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಲಿವುಡ್ ನಟ, ‘ದಿ ರಾಕ್’ ಎಂದೇ ಖ್ಯಾತರಾದ ಡ್ವಾಯ್ನೆ ಜಾನ್ಸನ್ ಅವರಿಗೆ ಹೋಗಿದ್ದು ಅವರ ಗಳಿಕೆ 89.4 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ (ಅಂದಾಜು ರೂ. 640 ಕೋಟಿ).
‘ಮಿಷನ್ ಮಂಗಲ್’ ಯಶಸ್ಸಿನಿಂದ ಬೀಗುತ್ತಿರುವ ಅಕ್ಷಯ್ ಕುಮಾರ್, ಈ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಹತ್ತು ಮಂದಿಯಲ್ಲಿ ಸ್ಥಾನ ಪಡೆದ ಏಕೈಕ ಬಾಲಿವುಡ್ ನಟರಾಗಿದ್ದಾರೆ.
ಫೋರ್ಬ್ಸ್ ಪಟ್ಟಿಯಲ್ಲಿ ಎರಡನೇ ಟಾಪರ್ ಆಸ್ಟ್ರೇಲಿಯಾದ ನಟ ಕ್ರಿಸ್ ಹೆಮ್ಸ್ ವರ್ತ್ (76.4 ಮಿಲಿಯನ್ ಅಮೆರಿಕನ್ ಡಾಲರ್ -ಅಂದಾಜು ರೂ. 547 ಕೋಟಿ) ಅವರಿಗೆ ಹೋಗಿದ್ದರೆ ಜಾಕಿ ಚಾನ್ ಅವರು ತಮ್ಮ 58 ಮಿಲಿಯನ್ ಯುಎಸ್ ಡಾಲರ್ ಗಳಿಕೆಯೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ. ಒಂಬತ್ತನೇ ಹಾಗೂ ಹತ್ತನೇ ಸ್ಥಾನ ಪೌಲ್ ರುಡ್ಡ್ ಹಾಗೂ ವಿಲ್ ಸ್ಮಿತ್ ಅವರಿಗೆ ಕ್ರಮವಾಗಿ ಹೋಗಿದೆ.