ಸೈಮಾ-2020: ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಪಾತ್ರರಾದ ಬಿ. ಸುರೇಶ್
facebook.com/SIIMAWARDS
ಬೆಂಗಳೂರು: ದಕ್ಷಿಣ ಭಾರತದ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ನೀಡುವ ಸೈಮಾ ಪ್ರಶಸ್ತಿಗೆ ನಿರ್ದೇಶಕ, ನಟ ಬಿ. ಸುರೇಶ್ ಪಾತ್ರರಾಗಿದ್ದಾರೆ. ಮಂಸೋರೆ ನಿರ್ದೇಶನದ ಆಕ್ಟ್-1978 ಚಿತ್ರದಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಬಿ. ಸುರೇಶ್ ರವರು ಪಡೆದುಕೊಂಡಿದ್ದಾರೆ. ಸಿನಿಮಾದಲ್ಲಿ ಅವರು ನಿರ್ವಹಿಸಿದ್ದ ಪೋಷಕ ಪಾತ್ರವನ್ನು ಪುರಸ್ಕರಿಸಿ ಪ್ರಶಸ್ತಿ ನೀಡಲಾಗಿದೆ. ಜನರ ಮತವೇ ಈ ಪ್ರಶಸ್ತಿಗೆ ಮಾನದಂಡವಾಗಿದೆ. ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕೋವಿಡ್ ಕಾರಣದಿಂದಾಗಿ 2020 ರ ಪ್ರಶಸ್ತಿ ಸ್ವೀಕಾರ ಸಮಾರಂಭ ನಡೆದಿರಲಿಲ್ಲ.
ಪ್ರಶಸ್ತಿಗೆ ಭಾಜನರಾದ ಕುರಿತು ನಿರ್ದೇಶಕ, ನಟ ಬಿ. ಸುರೇಶ್ ರವರನ್ನು ʼವಾರ್ತಾಭಾರತಿʼ ಮಾತನಾಡಿಸಿದಾಗ, "ಪಾತ್ರಗಳಿಗೆ ಮಾತು ಬರೆಯುವ ಮೂಲಕ ಸಿನಿಮಾ ವೃತ್ತಿಯನ್ನು ನಾನು ಆರಂಭಿಸಿದೆ. ಆದರೆ ಮಾತೇ ಇಲ್ಲದೇ ಇರುವ ಪಾತ್ರ ಮಾಡಿದ್ದಕ್ಕೆ ನನಗೆ ಪ್ರಶಸ್ತಿ ಬಂದಿರುವುದು ಸೋಜಿಗ. ಹಲವು ಅಂತಾರಾಷ್ಟ್ರೀಯ, ರಾಷ್ಟ್ರ, ರಾಜ್ಯ ಪ್ರಶಸ್ತಿಗಳನ್ನು ನನ್ನ ಸಿನಿಮಾಗಳಿಗಾಗಿ ಪಡೆದುಕೊಂಡಿದ್ದೇನೆ. ಆದರೆ ಇದು ಮೊದಲನೇ ಸಲ ಸೈಮಾ ಪ್ರಶಸ್ತಿಯನ್ನು ನಟನೆಗಾಗಿ ತೆಗೆದುಕೊಂಡಿರುವುದು ಇನ್ನೊಂದು ಸೋಜಿಗ. ನಿರ್ದೇಶಕರಿಗೆ ಈ ಪಾತ್ರಕ್ಕಾಗಿ ಹಲವರನ್ನು ಸೂಚಿಸಿದ್ದೆ. ಆದರೆ ಅವರು ನನ್ನನ್ನೇ ಆಯ್ಕೆ ಮಾಡಿಕೊಂಡಿದ್ದೂ ಸೋಜಿಗವೇ ಸರಿ".
"ಇದು ಜನರ ಮತ ಚಲಾವಣೆಯಿಂದ ಬರುವ ಪ್ರಶಸ್ತಿ. ಇಂಥ ಪಾತ್ರಕ್ಕೆ ಜನರು ಮತನೀಡಿ ಪ್ರಶಸ್ತಿ ಕೊಟ್ಟಿದ್ದಾರೆ. ಅಭಿಮಾನಿಗಳು ತುಂಬಿರುವ ನಟರ ಮಧ್ಯೆ ನನ್ನ ಆಯ್ಕೆಯೂ ಸೋಜಿಗವೇ. ನಾಳೆ ಏನು ಮಾಡಬೇಕು ಎನ್ನುವ ವಿಚಾರಗಳೇ ನಮ್ಮಲ್ಲಿರುತ್ತದೆ, ನಿನ್ನೆ ಮಾಡಿದ ಕೆಲಸಗಳಿಗಾಗಿ ಇಂದು ಪ್ರಶಸ್ತಿ ಬಂದಿದೆ. ಒಂದೂವರೆ ವರ್ಷ ಕೋವಿಡ್ ಕಾರಣದಿಂದಾಗಿ ಸಿನಿಮಾ ಉದ್ಯಮ ಸಂಕಷ್ಟ ಅನುಭವಿಸಿದೆ. ಮುಂದೆ ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡಬೇಕಾದ ಅವಶ್ಯಕತೆಯಿದೆ" ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ತಾಣದಲ್ಲಿ ಆಕ್ಟ್-1978 ಚಿತ್ರದ ನಿರ್ದೇಶ ಮಂಸೋರೆ ಸೇರಿದಂತೆ ಹಲವಾರು ಮಂದಿ ಅಭಿಮಾನಿಗಳು ಬಿ. ಸುರೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.