ಶಾರುಖ್ - ರಾಜ್ ಕುಮಾರ್ ಹಿರಾನಿ ಹೊಸ ಚಿತ್ರದ ಹೆಸರು ಬಿಡುಗಡೆ
ರಾಜ್ ಕುಮಾರ್ ಹಿರಾನಿ - ಶಾರುಖ್
ಮುಂಬೈ, ಎ.19: ಕೊನೆಗೂ ಬಾಲಿವುಡ್ ಬಾದ್ ಶಾ ಅವರ ಆಸೆ ಈಡೇರಿದೆ. ವಿಭಿನ್ನ, ವಿಶಿಷ್ಟ ಚಿತ್ರಗಳ ಮೂಲಕ ಮನೆಮಾತಾಗಿರುವ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರ ಚಿತ್ರದಲ್ಲಿ ನಟಿಸುವ ಶಾರುಖ್ ಹೆಬ್ಬಯಕೆ ಇದೀಗ ಈಡೇರುತ್ತಿದೆ.
ಇವರಿಬ್ಬರ ಜೋಡಿಯ ಹೊಸ ಚಿತ್ರದ ಹೆಸರು ಮಂಗಳವಾರ ಬಿಡುಗಡೆಯಾಗಿದೆ. ಡಂಕಿ (Dunki) ಎಂಬುದು ಹೊಸ ಚಿತ್ರದ ಹೆಸರು. ಮುಂದಿನ ವರ್ಷದ ಡಿಸೆಂಬರ್ 22 ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ. ಟೈಟಲ್ ಲಾಂಚ್ ಅನ್ನು ಒಂದು ಪುಟ್ಟ ತಮಾಷೆ ವಿಡಿಯೋದ ಮೂಲಕ ಹಿರಾನಿ ಶಾರುಖ್ ಜೋಡಿ ಮಂಗಳವಾರ ಬಿಡುಗಡೆ ಮಾಡಿದೆ ( ವಿಡಿಯೋ ಲಿಂಕ್ ಕೆಳಗಿದೆ). ಹೊಸ ಚಿತ್ರದಲ್ಲಿ ತಾಪ್ಸಿ ಪನ್ನು ಕೂಡ ಮುಖ್ಯ ಪಾತ್ರದಲ್ಲಿರಲಿದ್ದಾರೆ.
ಮುನ್ನಾಭಾಯ್ ಎಂಬಿಬಿಎಸ್, ತ್ರೀ ಈಡಿಯಟ್ಸ್, ಪಿಕೆ, ಸಂಜು ಇತ್ಯಾದಿ ವಿಭಿನ್ನ, ಸೂಪರ್ ಹಿಟ್ ಚಿತ್ರಗಳ ಮೂಲಕ ಮನೆಮಾತಾಗಿರುವ ಹಿರಾನಿ ಜೊತೆ ನಟಿಸುವುದು ಶಾರುಖ್ ಬಹುಕಾಲದ ಬಯಕೆಯಾಗಿತ್ತು.
ಮಂಗಳವಾರ ಟ್ವೀಟ್ ಮಾಡಿರುವ ಶಾರುಖ್ ಅದನ್ನೇ ಹೇಳಿದ್ದಾರೆ. ನೀವು ನನ್ನ ಪಾಲಿನ ಸಾಂತ ಕ್ಲಾಸ್ ಆಗಿ ಬಿಟ್ಟಿದ್ದೀರಿ, ನಿಮ್ಮ ಜೊತೆ ಕೆಲಸ ಮಾಡುವ ಅವಕಾಶ ಕೊನೆಗೂ ಸಿಕ್ಕಿರುವುದು ಅತ್ಯಂತ ಸಂತಸದ, ಹೆಮ್ಮೆಯ ವಿಷಯ, ನಾನು ಚಿತ್ರೀಕರಣ ನಡೆಯುವಾಗ ಸೆಟ್ ನಲ್ಲೇ ಇದ್ದು ಬಿಡುತ್ತೇನೆ ಎಂದೆಲ್ಲಾ ಹೇಳಿದ್ದಾರೆ.
2018ರಲ್ಲಿ ಬಿಡುಗಡೆಯಾಗಿ ಟುಸ್ಸಾದ ಝೀರೋ ಶಾರುಖ್ ಕೊನೆಯ ಚಿತ್ರ. ಈಗ ಅವರ ಪಠಾಣ್ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರ ಜೊತೆಗೆ ತಮಿಳಿನ ಖ್ಯಾತ ನಟ ಅಟ್ಲಿ ಜೊತೆಗೆ ಒಂದು ಚಿತ್ರದಲ್ಲಿ ಶಾರುಖ್ ನಟಿಸಲಿದ್ದಾರೆ.