ಪುತ್ತೂರಿನಲ್ಲೊಂದು ಪೈಶಾಚಿಕ ಕೃತ್ಯ: ಮಗನಿಂದಲೇ ತಾಯಿಯ ಅತ್ಯಾಚಾರ
ತೀವ್ರ ಅಸ್ವಸ್ಥಗೊಂಡಿರುವ ಸಂತ್ರಸ್ತೆ ಆಸ್ಪತ್ರೆಗೆ ದಾಖಲು
ಪುತ್ತೂರು, ಜ.14: ತಾಯಿಯ ಮೇಲೆ ಮಗನೇ ಅತ್ಯಾಚಾರ ಎಸಗಿದ ಪೈಶಾಚಿಕ ಕೃತ್ಯವೊಂದು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ಜ.12ರ ತಡರಾತ್ರಿ ನಡೆದಿರುವುದು ವರದಿಯಾಗಿದೆ. ಈ ಬಗ್ಗೆ ಸಂತ್ರಸ್ತ ತಾಯಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯ ದುಷ್ಕೃತ್ಯದಿಂದ ತಾಯಿಯೂ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
58 ರ ಹರೆಯದ ಸಂತ್ರಸ್ತ ಮಹಿಳೆಯೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು, ಆರೋಪಿ ಮಗನ ವಿರುದ್ಧ ಐಪಿಸಿ ಸೆಕ್ಷನ್ 376(2)(N)506ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆ ವಿವರ: ಸಂತ್ರಸ್ತ ತಾಯಿ ಮತ್ತು ಮಗ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಕೃತ್ಯ ನಡೆದ ಜ.12ರಂದು ರಾತ್ರಿ ಎಂದಿನಂತೆ ರಾತ್ರಿ ಊಟ ಮಾಡಿ ಆರೋಪಿಯು ತನ್ನ ಕೋಣೆಯಲ್ಲಿ ಮಲಗಿದ್ದ. 3 ಗಂಟೆ ನಸುಕಿನ ವೇಳೆ ತಾಯಿ ಮಲಗಿದ್ದ ರೂಮ್ ಗೆ ಆರೋಪಿಯು ತೆರಳಿ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಯಾರಲ್ಲಾದರೂ ತಿಳಿಸಿದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಇದಾದ ಬಳಿಕ ಜ.13ರಂದು ಬೆಳಗ್ಗೆ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೂ ಬಂದ ಆರೋಪಿ ಬಲವಂತದಿಂದ ಅವರನ್ನು ಮನೆಯ ಹಾಲ್ಗೆ ಎಳೆದೊಯ್ದು ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಗನ ಕೃತ್ಯದಿಂದ ಅಸ್ವಸ್ಥಗೊಂಡಿರುವ ಮಹಿಳೆ ಮಧ್ಯಾಹ್ನ 1 ಗಂಟೆಗೆ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿ, ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ. ಬಳಿಕ ಆಕೆ ಸಂಪ್ಯ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಅಂದಾಜು 35ರ ಹರೆಯದ ಆರೋಪಿಯು ವಿವಾಹಿತನಾಗಿದ್ದು, ಆತನ ಪತ್ನಿ ಸೀಮಂತದ ಬಳಿಕ ಗಂಡನನ್ನು ಬಿಟ್ಟು ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ.